ಹೊಸಕೋಟೆ: ಮನುಷ್ಯ ಜೀವನದಲ್ಲಿ ಪ್ರೀತಿ, ಕರುಣೆ, ಪ್ರಾಮಾಣಿಕತೆ ಸಹಾನುಭೂತಿ ಎಂಬ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶ್ರೀರಾಮೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನುಷ್ಯ ಇತರರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಬದುಕಿನಲ್ಲಿ ಸತ್ಯ ಅನುಸರಿಸಬೇಕು, ಯಾವುದೇ ಸಂದರ್ಭದಲ್ಲೂ ಪ್ರಾಮಾಣಿಕವಾಗಿರಬೇಕು. ನಮ್ಮ ಮನೆ ದೇವರಾದ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಆಶೀರ್ವಾದಿಂದ ನಾನು ಎರಡು ಭಾರಿ ಸಿಎಂ ಆಗಿ, ಎರಡು ಭಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಅನೇಕ ಧರ್ಮದ ಜನರಿದ್ದಾರೆ. ಯಾರೊಬ್ಬರನ್ನೂ ಯಾರೂ ಕೂಡ ದ್ವೇಷಿಸಬಾರದು. ಪರಸ್ಪರ ಪ್ರೀತಿಸಬೇಕು. ನಾನು ಪ್ರತಿಯೊಂದು ಜಾತಿ ಧರ್ಮವನ್ನು ಪ್ರೀತಿಸುತ್ತೇನೆ. ಆದ್ದರಿಂದಲೆ ರಾಜ್ಯದಲ್ಲಿ ಅತಿ ಹೆಚ್ಚು ದಿನ ಸಿಎಂ ಆದವರಲ್ಲಿ ನಾನೇ ಮೊದಲಿಗನಾಗಿದ್ಧೇನೆ. ತಾವರೆಕರೆ ಶೀ ರಾಮೇಶ್ವರ ಜಾತ್ರೆಗೆ ನಾನು ಎರಡು ಬಾರಿಯೂ ಮುಖ್ಯಮಂತ್ರಿಯಾಗಿಯೆ ಬಂದಿದ್ದೇನೆ ಎಂದು ಹೇಳಿದರು.

ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನಾನು, ಈ ಮಟ್ಟಕ್ಕೆ ಬರಲು ದೇವರ ಆಶೀರ್ವಾದವೇ ಕಾರಣ, ಮುಖ್ಯವಾಗಿ ಮನುಷ್ಯ ದೇವರಲ್ಲಿ ಪ್ರಾರ್ಥನೆ ಮಾಡುವಾಗ ನನಗೆ ಒಳ್ಳೇದು ಮಾಡು ಅಂದ್ರೆ ಒಳ್ಳೇದು ಮಾಡಲ್ಲ, ಬದಲಾಗಿ ಎಲ್ಲರಿಗೂ ಒಳ್ಳೆಯದು ಮಾಡು ಎಂದು ಪ್ರಾರ್ಥಿಸಿ ಪೂಜೆ ಮಾಡಿ, ಆಗ ನಿಮಗೂ ಒಳಿತಾಗಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಮಾತನಾಡಿ, ತಾವರೆಕೆರೆ ರಾಮೇಶ್ವರಸ್ವಾಮಿ ನಮ್ಮ ಮನೆ ದೇವರಾಗಿದ್ದು ಪ್ರತಿ 11 ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತದೆ. ಮನುಷ್ಯ ನಿತ್ಯ ಜೀವನದಲ್ಲಿ ಧಾರ್ಮಿಕ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕು. ಪೂರ್ವಿಕರು ನಮಗೆ ಸಂಸ್ಕೃತಿ ಆಚರಣೆ ಪರಂಪರೆ ಬಿಟ್ಟು ಹೋಗಿದ್ದಾರೆ. ಅವನ್ನು ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೂ ಬಳುವಳಿಯಾಗಿ ನೀಡಬೇಕು. ಕಳೆದ ಬಾರಿಯಂತೆ ಈ ಬಾರಿಯೂ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವುದು ನಮ್ಮ ಸುದೈವ. ಸಿದ್ದರಾಮಯ್ಯ ಅವರ ಸರಳತೆ, ಯಶಸ್ವಿ ಆಡಳಿತ, ಸರ್ವ ಸಮಾನತೆ, ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲೆ ನಡೆಯುತ್ತದೆ ಎಂದು ಹೇಳಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ರಾಮೇಶ್ವರ ಜಾತ್ರೆ ತಾಲೂಕಿನಲ್ಲಿ ಹಾಲು ಮತ ಸಮುದಾಯಕ್ಕೆ ದೊಡ್ಡ ಹಬ್ಬವಾಗಿದೆ. ಜಾತ್ರೆ ನಿಮಿತ್ತ ದೇವಾಲಯದ ರಸ್ತೆಯನ್ನು 1.5 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕೋಟ್ಯಂತರ ರು.ಅನುದಾನ ನೀಡಿದ್ದು ಅಭಿವೃದ್ಧಿಗೆ ಸಾಧ್ಯವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಶಾಸಕ ವರ್ತೂರು ಪ್ರಕಾಶ್, ಕೆಪಿಸಿಸಿ ಸದಸ್ಯ ಸಂಜಯ್ ಸುರೇಶ್ ಇತರರು ಹಾಜರಿದ್ದರು.

ಬಾಕ್ಸ್ .............ಕಾರ್ಯಕ್ರಮ ವೇದಿಕೆಗೆ ಬಾರದ ಶಾಸಕ ಭೈರತಿ ಬಸವರಾಜ್

ತಾವರೆಕೆರೆ ಶ್ರೀ ರಾಮೇಶ್ವರ, ಸಿದ್ದೇಶ್ವರ ದೇವಾಲಯ ಕೆ.ಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಮನೆ ದೇವರು. ಪ್ರತಿ ಬಾರಿಯೂ ಬೈರತಿ ಸುರೇಶ್‌ ಅವರ ಜೊತೆಯಲ್ಲೇ ಒಟ್ಟಾಗಿ ಜಾತ್ರೆ ಆಚರಿಸಲಾಗುತ್ತಿತ್ತು. ಈ ಬಾರಿ ಇಬ್ಬರಲ್ಲೂ ಮನಸ್ತಾಪವೇರ್ಪಟ್ಟು ವೇದಿಕೆ ನಿರ್ಮಾಣದಿಂದ ಪ್ರಾರಂಭವಾದ ಬಣ ಬಡಿದಾಟ, ಪ್ರತ್ಯೇಕವಾಗಿ ಊಟದ ಕೌಂಟರ್‌ಗಳನ್ನು ತೆರೆಯುವ ಹಂತಕ್ಕೆ ತಲುಪಿತ್ತು. ಅದರ ಪರಿಣಾಮ ಭೈರತಿ ಬಸವರಾಜು ಸಿಎಂ ಸಿದ್ದರಾಮಯ್ಯ ಹಾಗೂ ಅವರಿದ್ದ ವೇದಿಕೆ ಬಳಿಗೂ ಸುಳಿಯದೆ ತಾವೇ ಪ್ರತ್ಯೇಕವಾಗಿ ನಿರ್ಮಿಸಿದ್ದ ಊಟದ ಕೌಂಟರ್‌ನಲ್ಲಿ ಉಳಿದು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡರು.

ಫೋಟೋ: 5ಹೆಚ್‌ಎಸ್‌ಕೆ 2, 3. 4 ಮತ್ತು 5

2: ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆ ವೇದಿಕೆ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

3: ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅಭಿನಂದಿಸಿದರು.

4: ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಶ್ರೀ ರಾಮೇಶ್ವರ ಹಾಗೂ ಸಿದ್ದೇಶ್ವರ ದೇವಾಲಯಕ್ಕೆ ಸಿಎಂ ಸಿದ್ದರಾಮಯ್ಯ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

5: ತಾವರೆಕೆರೆ ಗ್ರಾಮದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಸಿಎಂ ಸಿದ್ದರಾಮಯ್ಯ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು.