ದೈನಂದಿನ ಜೀವನದಲ್ಲಿ ಕ್ರೀಡೆ ಮತ್ತು ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವುದರಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ

ಕನಕಗಿರಿ: ಯುವಕರು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ಆರೋಗ್ಯಯುತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಜರಂಗಬಲಿ ಹೇಳಿದರು.

ಅವರು, ಶನಿವಾರ ಕಾಲೇಜಿನಲ್ಲಿ ಕ್ರೀಡೆ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಭಾರತದ ಹಾಕಿ ಮಾಂತ್ರಿಕ, ಕ್ರೀಡಾ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಸವಿನೆನಪಿಗಾಗಿ ಈ ದಿನವನ್ನು ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. 1905 ಆಗಸ್ಟ್ 29 ರಂದು ಜನಿಸಿದ‌ ಅವರು, ತಮ್ಮ ಅದ್ಭುತ ಹಾಕಿ ಆಟದ ಮೂಲಕ 1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸತತವಾಗಿ ಮೂರು ಚಿನ್ನದ ಪದಕಗಳನ್ನು ತಂದುಕೊಟ್ಟ ಮಹಾನ್ ಸಾಧಕರಾಗಿದ್ದಾರೆ. ಅವರ ಲಾಠಿಯಲ್ಲಿದ್ದ ಅದ್ಭುತ ಕೌಶಲ್ಯ ಮತ್ತು ದೇಶಪ್ರೇಮ ಇಂದಿಗೂ ಪ್ರತಿಯೊಬ್ಬ ಕ್ರೀಡಾಪಟುವಿಗೂ ಪ್ರೇರಣೆಯಾಗಿದೆ ಎಂದರು.

ಇನ್ನೂ ನಮ್ಮಲ್ಲಿ ಕ್ರೀಡೆ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯವೇ ಭಾಗ್ಯ ಎನ್ನುವ ಧ್ಯೇಯ ವಾಕ್ಯದಂತೆ ದೈನಂದಿನ ಜೀವನದಲ್ಲಿ ಕ್ರೀಡೆ ಮತ್ತು ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವುದರಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕ್ರೀಡೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಕ್ರೀಡೆ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಶಂಭುಲಿಂಗಯ್ಯಸ್ವಾಮಿ, ಪ್ರಾಧ್ಯಾಪಕರಾದ ರಕ್ಷಿತ್, ಸರ್ವಮಂಗಳಮ್ಮ, ಸೋಮಶೇಖರ ಕಂಚಿ, ಮಾರುತಿ, ಚನ್ನಪ್ಪ ಸಂಗಮೇಶ್ವರ, ಡಾ.ಬಸವರಾಜ್, ವಿಜಯ್ ಸರೋದೆ, ಸಾಯಿಕುಮಾರ್, ಸಿದ್ದಪ್ಪ, ಪ್ರವೀಣಕುಮಾರ, ಮಲ್ಲಿಕಾರ್ಜುನ, ಹೆಬ್ಬಾಳ ಕುಮಾರ, ಪೆನಜಾ, ಅರ್ಚನಾ, ನಿರುಪಾದಿ, ಆನಂದ ಕಂಚಿ, ಗೋಪಾಲ ಸೇರಿದಂತೆ ಇತರರಿದ್ದರು.