ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ. ಜನ ಜಾಗೃತಿಯಿಂದ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟರು.

ಪಟ್ಟಣದ ಕ್ರೈಸ್ತಕಿಂಗ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ತಂಬಾಕು, ಮದ್ಯ, ಡ್ರಗ್ಸ್ ಮತ್ತಿತರ ಮಾದಕ ಪದಾರ್ಥಗಳ ಸೇವನೆಯಿಂದ ನಮ್ಮ ದೈಹಿಕ ಆರೋಗ್ಯ ಹಾಳಾಗುವುದಲ್ಲದೆ ಕುಟುಂಬಗಳು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತವೆ. ಕ್ಯಾನ್ಸ್‌ರ್, ಕಿಡ್ನಿ ವೈಪಲ್ಯ, ಹೃದಯ ಸಂಬಂಧಿ ಕಾಯಿಲೆಗಳು, ನರ ಮತ್ತು ರಕ್ತ ನಾಳಗಳು ದುರ್ಭಲಗೊಂಡು ವ್ಯಸನಿಗಳು ಶೀಘ್ರ ಸಾವಿನ ಕಡೆಗೆ ಹೋಗುತ್ತಾರೆ ಎಂದು ಎಚ್ಚರಿಸಿದರು.

ಕ್ರೈಸ್ತಕಿಂಗ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಅಂಥೋನಿ ಸ್ವಾಮಿ ಮಾತನಾಡಿ, ಸಿನಿಮಾಗಳಲ್ಲಿ ಸಿಗರೇಟ್ ಸೇದಿ, ಮದ್ಯ ಕುಡಿದು ಅಭಿನಯಿಸುವ ಸಿನಿಮಾ ನಡರು ಎಂದಿಗೂ ನಮ್ಮ ರೋಲ್ ಮಾಡಲ್ ಆಗಬಾರದು. ಬದಲಾಗಿ ನಮಗಾಗಿ ಕಷ್ಠಪಡುವ ನಮ್ಮ ತಂದೆ ತಾಯಂದಿರು, ಗುರು ಹಿರಿಯರು, ಸಮಾಜ ಕಟ್ಟಿದ ದಾರ್ಶನಿಕರು ನಮ್ಮ ರೋಲ್ ಮಡಲ್ ಆಗಬೇಕು ಎಂದರು.


ಗ್ರಾಮೀಣ ಭಾಗದಲ್ಲಿ ಹೆಚ್ಚು ಮದ್ಯ ವ್ಯಸನ ಹಬ್ಬುತ್ತಿರುವುದು ಸಾಮಾಜಿಕ ದುರಂತ. ದುಶ್ಚಟಗಳಿಂದ ನಮ್ಮ ಜೀವನವನ್ನು ನಾವೇ ನಾಶ ಪಡಿಸಿಕೊಳ್ಳುತ್ತೇವೆ. ಯುವ ಪೀಳಿಗೆ ದುಶ್ಚಟಗಳ ಅಪಾಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕೇಶವ ಮೂರ್ತಿ ಉದ್ಘಾಟಿಸಿದರು. ಶ್ರೀಕ್ಷೇತ್ರದ ಜಿಲ್ಲಾ ಯೋಜನಾಧಿಕಾರಿ ಲೀಲಾವತಿ, ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್, ಪತ್ರಕರ್ತ ಗಂಜೀಗೆರೆ ಮಹೇಶ್, ಕಾಲೇಜಿನ ಪ್ರಾಂಶುಪಾಲ ಶಿವರಾಜು, ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕು ಲಕ್ಷ್ಮಿ ಇದ್ದರು. ವ್ಯಸನ ಮುಕ್ತ ಸಮಾಜದ ನಿರ್ಮಾಣದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.