ಉತ್ತಮ ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣ: ಅಪ್ಪಾಜಿ ಗೌಡ

| Published : Jun 15 2024, 01:06 AM IST / Updated: Jun 15 2024, 01:07 AM IST

ಉತ್ತಮ ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣ: ಅಪ್ಪಾಜಿ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಸ್. ಬಿ ಅಪ್ಪಾಜಿಗೌಡ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಉತ್ತಮ ವಿದ್ಯಾಭ್ಯಾಸ ನೀಡಿದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಸ್. ಬಿ ಅಪ್ಪಾಜಿಗೌಡ ಹೇಳಿದ್ದಾರೆ.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸುಮ್ಮನೆ ಓದಿ ಅಕ್ಷರಸ್ಥರಾದರೆ ಸಾಲದು. ವಿದ್ಯಾವಂತರಾಗಬೇಕು. ವಿದ್ಯಾವಂತರಾದಾಗ ಮಾನವೀಯ ಅಂತಃಕರಣ ಬೆಳೆಯುವುದು. ಕೇವಲ ಅಕ್ಷರಸ್ಥರಾದರೆ ಸಮಾಜಘಾತುಕ ಶಕ್ತಿ ರೂಪಗೊಳ್ಳುತ್ತದೆ. ನಿಜವಾದ ವಿದ್ಯಾವಂತರು ಉತ್ತಮ ಸಮಾಜದ ಶಕ್ತಿ. ಸಮಾಜಕ್ಕೆ ಇವರಿಂದ ಒಳ್ಳೆಯದಾಗುತ್ತದೆ ಎಂದರು.

ಕೊಡಗು ವೈದ್ಯಕೀಯ ಕಾಲೇಜಿನ ನಿವೃತ್ತ ಮುಖ್ಯ ಆಡಳಿತಾಧಿಕಾರಿ ಮೇರಿ ಚಿಟ್ಟಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವನೆ ರೂಢಿಸಿಕೊಂಡು ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾಯಕತ್ವದ ಗುಣಗಳನ್ನು ಬಳಸಿಕೊಳ್ಳಬೇಕು ಎಂದರು.

ಕನ್ನಡ ಜೊತೆಯಲ್ಲಿ ಇಂಗ್ಲಿಷ್ ಭಾಷೆ ಕಲಿಯುವುದು ಅನಿವಾರ್ಯವಾಗಿದೆ. ಸಂವಹನಕ್ಕೆ ಹಾಗೂ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಆಂಗ್ಲ ಭಾಷೆ ಅಗತ್ಯ ಎಂದ ಮೇರಿ ಚಿಟ್ಟಿಯಪ್ಪ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನವಂತರಾಗಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕಾವೇರಿ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡಿದರೆ ಮಾತ್ರ ಕಾಲೇಜು ಅಭಿವೃದ್ಧಿ ಹೊಂದಲು ಸಾಧ್ಯ. ಸಮಾಜದಲ್ಲಿ ಸೇವೆ ಮಾಡಲು ಮನಸ್ಸು ತೆರೆದುಕೊಳ್ಳಬೇಕು. ಮನಸ್ಸು ತೆರೆದುಕೊಂಡಾಗ ಅವರಿಗೆ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದರು.

ಅರಣ್ಯ ಇಲಾಖೆ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ಅಪ್ಪಾಜಿ ಗೌಡ ಗಿಡ ನೆಟ್ಟು ನೀರು ಉಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪದ್ಮಾವತಿ, ಮುಕ್ಕಾಟಿರ, ಪದ್ಮಾ ಗಣಪತಿ, ರಾಜು ದೇವಯ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಂಚಾಲಕ ಎಲ್.ಸಿ ರಂಗಸ್ವಾಮಿ , ದೈಹಿಕ ಶಿಕ್ಷಣ ನಿರ್ದೇಶಕ ಶಿವರಾಜ್ ಕುಮಾರ್ ಕೆ.ಎಸ್., ಸಹಾಯಕ ಪ್ರಾಧ್ಯಾಪಕ ಮನೋಜ್ ಕುಮಾರ್, ವಿದ್ಯಾರ್ಥಿ ಪ್ರತಿನಿಧಿ ಮೊಹಮ್ಮದ್ ಶಮಿಮ್, ಕೆ.ಎಚ್. ನಿಷ್ಮ, ಎಂ.ವಿ ಇರ್ಫಾನ್, ಎಂ. ಐ ರಕ್ಷತಾ, ಬಿ.ಪಿ ನಿತಿನ್ ,ಕೀರ್ತಿ ಎಂ ವಿ. ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳಾದ ಶ್ವೇತ ಮತ್ತು ಲುಕ್ಕಿಮಣಿ ಪ್ರಾರ್ಥಿಸಿದರು. ಕನ್ನಡ ಪ್ರಾಧ್ಯಾಪಕಿ ಹರಿಣಿ ವರದಿ ವಾಚಿಸಿದರು. ಉಪನ್ಯಾಸಕ ವೇಣು ಗೋಪಾಲ್ ನಿರೂಪಿಸಿದರು. ಪ್ರಾಧ್ಯಾಪಕ ರಂಗಸ್ವಾಮಿ ಎಲ್.ಸಿ ವಂದಿಸಿದರು.