ಸೇವಾ ಭಾವನೆಯಿಂದ ಸುಸ್ಥಿರ ಸಮಾಜ ನಿರ್ಮಾಣ

| Published : Mar 15 2024, 01:22 AM IST

ಸಾರಾಂಶ

ಬೆಳಗಾವಿ ವಿತಾವಿಯ ಆವರಣದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರೇಕ್ಷಾಗೃಹದಲ್ಲಿ ಗುರುವಾರ ವಿತಾವಿ ಮಹಿಳಾ ಘಟಕದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಥಿತಪ್ರಜ್ಞ ಸಶಕ್ತಿ ಸಮಾರೋಪ ಕಾರ್ಯಕ್ರಮದಲ್ಲಿ ಪದ್ಮಶ್ರೀ, ರಾಮನ್ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತೆ ಹಾಗೂ ಭಗಿನಿ ಗ್ರಾಮೀಣ ವಿಜ್ಞಾನ ನಿಕೇತನದ ಸಂಸ್ಥಾಪಕಿ ನೀಲಿಮಾ ಮಿಶ್ರಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಯಾವುದೇ ಕೆಲಸವನ್ನು ನಾವು ಸೇವಾ ಮನೋಭಾವನೆಯಿಂದ ಮಾಡಿದಾಗಲೇ ಸಾರ್ಥಕ ಭಾವ ಮೂಡಿ ಸುಸ್ಥಿರ ಸಮಾಜ ಕಟ್ಟಲು ಸಾಧ್ಯ ಎಂದು ಪದ್ಮಶ್ರೀ, ರಾಮನ್ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತೆ ಹಾಗೂ ಭಗಿನಿ ಗ್ರಾಮೀಣ ವಿಜ್ಞಾನ ನಿಕೇತನದ ಸಂಸ್ಥಾಪಕಿ ನೀಲಿಮಾ ಮಿಶ್ರಾ ಹೇಳಿದರು.

ವಿತಾವಿಯ ಆವರಣದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರೇಕ್ಷಾಗೃಹದಲ್ಲಿ ಗುರುವಾರ ವಿತಾವಿ ಮಹಿಳಾ ಘಟಕದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಥಿತಪ್ರಜ್ಞ ಸಶಕ್ತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಸೇವೆ ಮಾಡಲು ಒಳ್ಳೆಯ ಮನಸಿರಬೇಕು. ಒಂದು ಸಂಸ್ಥೆ ಅಥವಾ ಉತ್ತಮ ಸಮಾಜ ಕಟ್ಟಲು ಪ್ರಾಮಣಿಕವಾಗಿ ಕೆಲಸ ಮಾಡುವ ಮನಸಿರಬೇಕು. ಒಳ್ಳೆಯ ಕೆಲಸಕ್ಕೂ ಹಣದ ಅವಶ್ಯಕತೆಯಿದೆ. ಆದರೆ, ಹಣಕ್ಕಾಗಿ ಆ ಕೆಲಸಗಳು ನಿಲ್ಲಬಾರದು ಎಂದರು.

ವಿತಾವಿ ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮಹಿಳೆ ಜನಾಂಗದ ಅಭಿವ್ಯಕ್ತಿ, ಸಮಾಜದ ನಿಜವಾದ ಶಿಲ್ಪಿಯಾಗಿದ್ದಾಳೆ. ಅವಳ ಶ್ರಮವಿದೆ, ಸಂಬಳವಿಲ್ಲ, ಸಹಾಯಬೇಕು ಆಪ್ತರಿಲ್ಲ. ದಿನದ ಅಷ್ಟು ಸಮಯ ದುಡಿಯುವ ಅವಳು ಪತ್ನಿ, ಮಗಳು, ತಾಯಿ, ತಂಗಿಯಾಗಿ ಬದುಕಿನ ವಿವಿಧ ಪಾತ್ರಗಳಲ್ಲಿ ಗುರುತಿಸಿಕೊಳ್ಳುತ್ತ ನಿರಂತರ ಕುಟುಂಬದ ಚಲನೆಗೆ ಕಾರಣಲಾಗಿದ್ದಾಳೆ. ಈಗ ಪ್ರತಿಯೊಂದು ಪರೀಕ್ಷೆಯಲ್ಲೂ ಮಹಿಳೆಯರು ಮುಂದಿದ್ದಾರೆ. ಒಂದಷ್ಟು ಕ್ಷೇತ್ರಗಳಲ್ಲಂತೂ ಪುರುಷರಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

40 ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಹಿಂಜರೆಯುತ್ತಿದ್ದ ಮಹಿಳೆ ಇಂದು ಸಮಾಜದ ಎಲ್ಲ ರಂಗಗಳಲ್ಲಿಯೂ ಪ್ರಧಾನ ಪಾತ್ರ ವಹಿಸಿದ್ದಾಳೆ. ನೀಲಿಮಾ ಮಿಶ್ರಾ ಇಂದಿನ ಮಹಿಳೆಯೆರಿಗೆ ಆದರ್ಶಪ್ರಾಯವಾಗಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ನೀಲಿಮಾ ಮಿಶ್ರಾ ಹಾಗೂ ಬೆಳಗಾವಿಯ ಆಶ್ರಯ ಫೌಂಡೇಶನ್ ಸಂಸ್ಥಾಪಕಿ ನಾಗರತ್ನ ಅವರನ್ನು ಸನ್ಮಾನಿಸಲಾಯಿತು.

ವಿತಾವಿ ಡಾ.ಬಿ.ಇ.ರಂಗಸ್ವಾಮಿ ಸ್ವಾಗತಿಸಿದರು. ಮಹಿಳಾ ದಿನಾಚರಣೆ ಹಾಗೂ ವಿತಾವಿಯ ಮಹಿಳಾ ಘಟಕದ ಕುರಿತು ಮಹಿಳಾ ಘಟಕದ ಅಧ್ಯಕ್ಷೆ ಡಾ. ಸಂಧ್ಯಾ ಅನ್ವೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಣಕಾಸು ಅಧಿಕಾರಿ ಎಂ.ಎ.ಸಪ್ನಾ ಪರಿಚಯಿಸಿದರು. ಒಂದು ವಾರದಿಂದ ಮಹಿಳೆಯರಿಗಾಗಿ ವಿತಾವಿಯ ಮಹಿಳಾ ಘಟಕ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ರಶ್ಮಿ ರಚ್ಚ ವಂದಿಸಿದರು.