ಆನೆ ದೊಡ್ಡಿ ನಿರ್ಮಾಣದಿಂದ ಸಮಸ್ಯೆಗೆ ಶಾಶ್ವತ ಪರಿಹಾರ: ಕೋಟಾ ಶ್ರೀನಿವಾಸ ಪೂಜಾರಿ

| Published : Aug 01 2025, 11:45 PM IST

ಆನೆ ದೊಡ್ಡಿ ನಿರ್ಮಾಣದಿಂದ ಸಮಸ್ಯೆಗೆ ಶಾಶ್ವತ ಪರಿಹಾರ: ಕೋಟಾ ಶ್ರೀನಿವಾಸ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಆನೆ ದಾಳಿಯಂತಹ ಗಂಭೀರ ಪ್ರಕರಣವನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಆನೆ ದೊಡ್ಡಿ ನಿರ್ಮಾಣ ಯೋಜನೆ ಕುರಿತು ಕೇಂದ್ರ ಅರಣ್ಯ ಸಚಿವರ ಬಳಿ ಪ್ರಸ್ತಾಪಿಸಿದ್ದು, ಈ ಯೋಜನೆ ಕಾರ್ಯಗತ ವಾದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ವಿಶ್ವಾಸವಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅಂಡವಾನೆ ಗ್ರಾಮದ ಜಾಗ್ರ ಸುಬ್ಬೇಗೌಡರ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಆನೆ ದಾಳಿಯಂತಹ ಗಂಭೀರ ಪ್ರಕರಣವನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಆನೆ ದೊಡ್ಡಿ ನಿರ್ಮಾಣ ಯೋಜನೆ ಕುರಿತು ಕೇಂದ್ರ ಅರಣ್ಯ ಸಚಿವರ ಬಳಿ ಪ್ರಸ್ತಾಪಿಸಿದ್ದು, ಈ ಯೋಜನೆ ಕಾರ್ಯಗತ ವಾದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ವಿಶ್ವಾಸವಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಆನೆ ತುಳಿತದಿಂದ ಮೃತಪಟ್ಟ ಅಂಡವಾನೆ ಗ್ರಾಮದ ಜಾಗ್ರ ಸುಬ್ಬೇಗೌಡರ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ಅಭಿಪ್ರಾಯದ ಪ್ರಕಾರ ಆನೆ ದೊಡ್ಡಿ ಎಂದು ಸುಮಾರು 2 ರಿಂದ 3 ಸಾವಿರ ಎಕರೆ ಜಾಗದಲ್ಲಿ ಮಾಡಬೇಕು. ಹಾವಳಿ, ದಾಳಿ ಮಾಡುವ ಆನೆಗಳನ್ನು ಅಲ್ಲಿಗೆ ಅಟ್ಟುವ ಕೆಲಸ ಆಗಬೇಕಿದೆ. ಇದಕ್ಕೆ ಕನಿಷ್ಠ ₹50ರಿಂದ ₹70 ಕೋಟಿ ರು. ಬೇಕಾಗಲಿದೆ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ ಎಂದರು.

ರೇಲ್ವೇ ಹಳಿಗಳನ್ನು ನಿರ್ಬಂಧಿಸುವ ಯೋಜನೆ ನಮ್ಮ ಮುಂದಿದೆ. ಎರಡೂ ಯೋಜನೆಗಳನ್ನು ಮಾಡಿ ಯಾವುದು ಹೆಚ್ಚು ಅನುಕೂಲ ವಾಗಲಿದೆ ಅದಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಎರಡೂ ಕಡೆಯಿಂದ ಆರ್ಥಿಕ ಸಹಾಯ ನೀಡಿ ಯೋಜನೆ ಪೂರೈಸಬೇಕಿದೆ ಎಂದು ಸಚಿವರೊಂದಿಗೆ ಮಾತನಾಡಿದೇವೆ ಎಂದು ಹೇಳಿದರು.ಕಳೆದ ಜು.೧೩ರಿಂದ ನವದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿದ್ದೆ. ಈ ಹಿನ್ನೆಲೆಯಲ್ಲಿ ಆನೆ ದಾಳಿ ನಡೆದಾಗ ಕ್ಷೇತ್ರಕ್ಕೆ ಭೇಟಿ ನೀಡಲು ಆಗಿಲ್ಲ. ಆದರೆ ನವದೆಹಲಿಯಲ್ಲಿ ಇರುವಾಗಲೇ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಹಾಗೂ ರಾಜ್ಯ ಸಚಿವ ಕೀರ್ತೇಶ್ ರನ್ನು ಭೇಟಿ ಮಾಡಿ, ಆನೆ ದಾಳಿ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕೊಪ್ಪ ಡಿಎಫ್‌ಒ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ.ಆನೆ ಹಾವಳಿಗೆ ವ್ಯವಸ್ಥಿತ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅದಕ್ಕೆ ರಾಜ್ಯ ಸರ್ಕಾರ ಯಾವ ಯೋಜನೆ ರೂಪಿಸಿದ್ದೀರಿ ಅದನ್ನು ನಮಗೆ ನೀಡಿ ಎಂದು ಹೇಳಿದ್ದೇನೆ. ಈ ವಿಚಾರವಾಗಿ ರಾಜ್ಯವೋ? ಕೇಂದ್ರವೋ ಎಂದು ಪ್ರಶ್ನಿಸುತ್ತ ಕೂರುವ ಹಾಗಿಲ್ಲ. ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದು, ಇದರಿಂದ ಜನ ರೋಸಿ ಹೋಗಿ ಅರಣ್ಯ ಇಲಾಖೆಗೆ ಸಾವಿರಾರು ಜನ ಮುತ್ತಿಗೆ ಹಾಕಿದ್ದಾರೆ. ಮಲೆನಾಡಲ್ಲಿ ಶಾಶ್ವತವಾದ ಆನೆ ದೊಡ್ಡಿ ಅಥವಾ ಆನೆ ಕಂದಕವನ್ನು ನಿರ್ಮಾಣ ಮಾಡಬೇಕಿದೆ. ಈ ಭಾಗದಲ್ಲಿ ಕಾಡುಕೋಣವೂ ಜನರನ್ನು ಕೊಂದ ಉದಾಹರಣೆ ಇದೆ. ಈ ಹಿನ್ನೆಲೆ ಯಲ್ಲಿ ಕಾಡುಪ್ರಾಣಿಗಳ ಉಪಟಳ ಹೇಗೆ ನಿಲ್ಲಿಸಬೇಕು ಎಂಬ ಬಗ್ಗೆ ಅರಣ್ಯ ಇಲಾಖೆಯವರು ಒಂದು ಯೋಜನೆ ತಯಾರಿಸಿದ್ದಾರೆ. ಅದನ್ನು ನಾನು ರಾಜ್ಯಮಟ್ಟದಿಂದ ಕೇಂದ್ರ ಮಟ್ಟದವರೆಗೂ ತೆಗೆದುಕೊಂಡು ಹೋಗಲಿದ್ದೇನೆ.

ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಲು ಸಹ ನಾನು ಶುಕ್ರವಾರ ಕರೆ ಮಾಡಿದ್ದು, ಅವರು ದೆಹಲಿಗೆ ತೆರಳಿದ್ದ ರಿಂದ ಈ ಬಗ್ಗೆ ಸಂಜೆ ಮಾತನಾಡುವುದಾಗಿ ತಿಳಿಸಿದ್ದಾರೆ. ಇಲ್ಲಿ ಯಾವ ಪಕ್ಷ, ಸರ್ಕಾರ ಎನ್ನುವುದಕ್ಕಿಂತ ಶಾಶ್ವತವಾಗಿ ಆನೆ ದಾಳಿ, ಕಾಡುಪ್ರಾಣಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಸಂಸದನಾಗಿ ಇಂತಹ ಗಂಭೀರ ಸಮಸ್ಯೆ ಗಳನ್ನು ಶಾಶ್ವತವಾಗಿ ಪರಿಹರಿಸುವ ಬಗ್ಗೆ ಪ್ರಯತ್ನಿಸಿದ್ದು, ಅದು ನನ್ನ ಕರ್ತವ್ಯ. ಗುರಿಯೂ ಹೌದು. ಇದಕ್ಕಾಗಿ ನಾನು ಯಾವುದೇ ಪ್ರಚಾರ ಬಯಸುವುದಿಲ್ಲ, ಯಾವುದೇ ಟೀಕೆಗಳೂ ನನಗೆ ಅಗತ್ಯವಿಲ್ಲ.ಆನೆ ದಾಳಿ ಸಮಸ್ಯೆ ಬಗ್ಗೆ ರಾಜ್ಯದಿಂದ ನೀಡುವ ವರದಿಯನ್ನು ಕೇಂದ್ರಕ್ಕೆ ನಾನೇ ಕೊಂಡು ಹೋಗಲಿದ್ದೇನೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿ, ಯೋಜನೆಗೆ ಅಗತ್ಯ ಮಾರ್ಗ ಸೂಚಿಗಳನ್ನು ತಯಾರಿಸಲು ಹೇಳಿದ್ದಾರೆ. ಒಟ್ಟಾರೆ ಕ್ಷೇತ್ರದ ಜನರೊಂದಿಗೆ ನಾನು ಇದ್ದೇನೆ ಎಂದರು.ಅರಣ್ಯ ಸಚಿವರ ಅವೈಜ್ಞಾನಿಕ ಆದೇಶಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನಾನು ಯಾರನ್ನು ಟೀಕೆ ಮಾಡಲ್ಲ. ಆದರೆ ದನ ಕರುಗಳನ್ನು ಕಾಡಿಗೆ ಕರೆದುಕೊಂಡು ಹೋಗಬೇಡಿ ಎಂದು ಸರ್ಕಾರ ಹೇಳಿದೆ. ಹುಲಿ, ಸಿಂಹಗಳನ್ನು ಕಾಡಿನಲ್ಲಿ ಇಟ್ಟುಕೊಳ್ಳಿ ಎಂದು ಜನರೂ ಹೇಳಿದ್ದಾರೆ. ಈ ಬಗ್ಗೆ ಚರ್ಚಿಸುತ್ತಾ ಕುಳಿತರೆ ಎರಡೂ ಸಮಸ್ಯೆಗಳೂ ಉಲ್ಭಣವಾಗಲಿದೆ. ರಾಜಕಾರಣದಲ್ಲಿ, ಅಧಿಕಾರದಲ್ಲಿ ಇದ್ದವರು ಜಾಗ್ರತೆಯಿಂದ ಹೆಜ್ಜೆ ಇಡುವುದು ಒಳಿತು ಎಂಬುದು ನನ್ನ ಅಭಿಪ್ರಾಯ ಎಂದರು.ಮಾಜಿ ಸಚಿವ ಡಿ.ಎನ್.ಜೀವರಾಜ್, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಮುಖಂಡರಾದ ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಎ.ಸಿ.ಸಂತೋಷ್ ಅರನೂರು, ಪ್ರದೀಪ್ ಕಿಚ್ಚಬ್ಬಿ, ಮಂಜು ಶೆಟ್ಟಿ, ಪ್ರಭಾಕರ್ ಕೋಗಳಿ, ವಿನೋದ್ ಬೊಗಸೆ ಮತ್ತಿತರರು ಹಾಜರಿದ್ದರು.೦೧ಬಿಹೆಚ್‌ಆರ್ ೫:

ಬಾಳೆಹೊನ್ನೂರು ಸಮೀಪದ ಅಂಡವಾನೆ ಗ್ರಾಮದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ಜಾಗ್ರ ಸುಬ್ಬೇಗೌಡರ ಮನೆಗೆ ಸಂಸದ ಕೋಟ ಶ್ರೀನಿವಾಸಪೂಜಾರಿ ಭೇಟಿ ನೀಡಿ ಸುಬ್ಬೇಗೌಡರ ಪತ್ನಿ, ಮಗನಿಗೆ ಸಾಂತ್ವನ ಹೇಳಿ ಮಾತುಕತೆ ನಡೆಸಿದರು.