ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ (ಜಿಬಿಎ) 5 ನಗರ ಪಾಲಿಕೆ ರಚಿಸುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ತೆರೆಮರೆಯಲ್ಲಿ ನೂತನ ನಗರ ಪಾಲಿಕೆಗಳ ಕೇಂದ್ರ ಕಚೇರಿ ಕಟ್ಟಡ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳ ಹುಡುಕಾಟ ಶುರು ಮಾಡಿದೆ.
ರಾಜ್ಯ ಸರ್ಕಾರವು ಕಳೆದ ಶನಿವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ 5 ನಗರ ಪಾಲಿಕೆ ಸ್ಥಾಪನೆ ಮಾಡುವುದಕ್ಕೆ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸುವುದಕ್ಕೆ 30 ದಿನ ಕಾಲಾವಕಾಶ ನೀಡಿದೆ.
ಈ ನಡುವೆ ಕರಡು ಅಧಿಸೂಚನೆಯಲ್ಲಿ ನಕ್ಷೆ ಆಧಾರಿಸಿ ಐದು ಮಹಾನಗರ ಪಾಲಿಕೆಗಳ ಕೇಂದ್ರ ಕಚೇರಿ ಆರಂಭಿಸುವುದಕ್ಕೆ ಅಗತ್ಯವಿರುವ ಕಟ್ಟಡ ಗುರುತಿಸುವುದಕ್ಕೆ ಬಿಬಿಎಂಪಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಟ್ಟಡ ಲಭ್ಯತೆ ಇಲ್ಲವಾದರೆ, ಹೊಸ ಕಟ್ಟಡ ನಿರ್ಮಾಣಕ್ಕೆ ಯೋಗ್ಯವಾದ ಜಾಗ ಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ.
ಗುರುತಿಸುವ ಕಟ್ಟಡ ಮತ್ತು ಜಾಗವು ಆಯಾ ನಗರ ಪಾಲಿಕೆಯ ವ್ಯಾಪ್ತಿಗೆ ಕೇಂದ್ರ ಭಾಗದಲ್ಲಿ ಇರಬೇಕು. ಆ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಕಚೇರಿಗಳಿಗೆ ಆಗಮಿಸುವುದಕ್ಕೆ ಅನುಕೂಲವಾಗಿರಬೇಕು. ಕೌನ್ಸಿಲ್ ಸಭೆ ಸೇರಿದಂತೆ ಇನ್ನಿತರೆ ಸಭೆ-ಸಮಾರಂಭ ನಡೆಸುವುದಕ್ಕೆ ವಿಶಾಲವಾದ ಸಭಾಂಗಣ ವ್ಯವಸ್ಥೆ ಹೊರಬೇಕು ಎಂದು ಸೂಚಿಸಲಾಗಿದೆ.
3 ಪಾಲಿಕೆಗೆ ಕಟ್ಟಡ ರೆಡಿ:
ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಹಾಲಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಅನೆಕ್ಸ್-3 ಕಟ್ಟಡ ಒದಗಿಸುವುದು. ಕೌನ್ಸಲ್ ಸಭೆ ನಡೆಸುವುದಕ್ಕೆ ನಾಡಪ್ರಭು ಕೆಂಪೇಗೌಡ ಪೌರಸಭಾಂಗಣ ಬಳಕೆಗೆ ತೀರ್ಮಾನಿಸಲಾಗಿದೆ. ಅದೇ ರೀತಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಮಲ್ಲೇಶ್ವರದ ಬಿಬಿಎಂಪಿಯ ಐಪಿಪಿ ಕಚೇರಿ ಕಟ್ಟಡ ಒದಗಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಆರ್.ಆರ್‌ನಗರದ ಹಾಲಿ ವಲಯ ಕಚೇರಿಯನ್ನು ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆರಂಭಿಸುವುದಕ್ಕೆ ಸೂಕ್ತ ಎಂಬ ಮಾಹಿತಿ ಲಭ್ಯವಾಗಿದೆ.
ಉಳಿದಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ ಕಚೇರಿಗಳಿಗೆ ಕಟ್ಟಡ ಹಾಗೂ ಹೊಸ ಕಟ್ಟಡ ಹುಡುಕಾಟ ಮುಂದುವರೆದಿದೆ. ಒಂದು ವೇಳೆ ಸೂಕ್ತ ಕಟ್ಟಡ ದೊರೆಯದಿದ್ದರೆ, ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ತಾತ್ಕಾಲಿಕವಾಗಿ ಕಚೇರಿ ಆರಂಭಿಸುವುದಕ್ಕೂ ಹುಡುಕಾಟ ನಡೆಸಲಾಗುತ್ತಿದೆ. ಕಟ್ಟಡ ಮತ್ತು ಸ್ಥಳ ಹುಡುಕಾಟದ ಜವಾಬ್ದಾರಿಯನ್ನು ಆಯಾ ವ್ಯಾಪ್ತಿಯ ವಲಯ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ.
ಅಧಿಕಾರಿ ಸಿಬ್ಬಂದಿ ವಿಭಜನೆಗೂ ಸಿದ್ಧತೆ:
ಐದು ನಗರ ಪಾಲಿಕೆ ಕರಡು ಅಧಿಸೂಚನೆ ಹೊರಡಿಸುತ್ತಿದಂತೆ ಬಿಬಿಎಂಪಿಯ ವಿಭಾಗವಾರು ಅಧಿಕಾರಿ ಸಿಬ್ಬಂದಿಯ ಮಾಹಿತಿಯನ್ನು ಆಯಾ ವಿಭಾಗದ ಅಧಿಕಾರಿಗಳು ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. ಹಾಲಿ ಇರುವ ಅಧಿಕಾರಿ ಸಿಬ್ಬಂದಿಯನ್ನು 5 ನಗರ ಪಾಲಿಕೆಗಳಿಗೆ ಹೇಗೆ ಹಂಚಿಕೆ ಮಾಡಬಹುದು ಎಂಬ ಲೆಕ್ಕಾಚಾರದೊಂದಿಗೆ ಪಟ್ಟಿ ಸಿದ್ಧಪಡಿಕೊಳ್ಳಲಾಗುತ್ತಿದೆ.
ಅಧಿಕಾರಿ ಸಿಬ್ಬಂದಿ ಲಾಬಿ ಶುರು
ಹೊಸದಾಗಿ ರಚನೆಯಾಗುವ ಐದು ನಗರ ಪಾಲಿಕೆಗಳ ಪೈಕಿ ತಾವು ಯಾವ ನಗರ ಪಾಲಿಕೆಗೆ ವರ್ಗಾವಣೆ ಆಗಬೇಕು. ಯಾವ ನಗರ ಪಾಲಿಕೆಗೆ ಹೋದರೆ ಅನುಕೂಲ ಎಂಬ ಆಲೋಚನೆ ಮಾಡುತ್ತಿರುವ ಬಿಬಿಎಂಪಿಯ ಅಧಿಕಾರಿ, ಸಿಬ್ಬಂದಿಯು ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನಾ ಲಾಭಿ ಆರಂಭಿಸಿದ್ದಾರೆ.
ಸೆ.2ಕ್ಕೆ ನಗರ ಪಾಲಿಕೆ ಅಸ್ತಿತ್ವಕ್ಕೆ
ಐದು ನಗರ ಪಾಲಿಕೆ ಗಡಿ ಗುರುತಿಸಿ ಕರಡು ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರವು, ಆಕ್ಷೇಪಣೆ ಸಲ್ಲಿಸುವುದಕ್ಕೆ 30 ದಿನ ಕಾಲಾವಕಾಶ ನೀಡಿದೆ. ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಿ ಆ.25ರ ವೇಳೆಗೆ ಅಂತಿಮ ಅಧಿಸೂಚನೆ ಹೊರಡಿಸಲಿದ್ದು, ಸೆ.2ಕ್ಕೆ ಅಧಿಕೃತವಾಗಿ 5 ನಗರ ಪಾಲಿಕೆಗಳು ಅಸ್ಥಿತ್ವಕ್ಕೆ ಬರಲಿವೆ. ಆ ಬಳಿಕ 5 ನಗರ ಪಾಲಿಕೆಗಳ ವಾರ್ಡ್ ಮರು ವಿಂಗಡಣೆ ಸೇರಿದಂತೆ ಮೊದಲಾದ ಪ್ರಕ್ರಿಯೆ ಆರಂಭವಾಗಲಿವೆ. ಅದನ್ನು ಆಯಾ ನಗರ ಪಾಲಿಕೆ ಆಯುಕ್ತರು ನಿರ್ವಹಿಸಲಿದ್ದಾರೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.