ಸಾಹಿತ್ಯದಿಂದ ಸಮಾಜ ಕಟ್ಟುವ ಕೆಲಸ: ಪ್ರೇಮಾ ಟಿ.ಎಂ.ಆರ್.

| Published : Jan 10 2025, 12:48 AM IST

ಸಾರಾಂಶ

ಮನಸ್ಸುಗಳನ್ನು ಹಾಗೂ ಭಾವನೆಗಳನ್ನು ಬೆಸೆಯುವುದು ಭಾಷೆಯಿಂದ ಮಾತ್ರ ಸಾಧ್ಯ. ಮನುಷ್ಯನ ಬದುಕಿಗೆ ಶಕ್ತಿ ನೀಡುವುದು ತಾಯಿಯ ಭಾವವಾದರೆ, ಬದುಕನ್ನು ಕಟ್ಟಿಕೊಡುವುದು ನಮ್ಮ ಮಾತೃಭಾಷೆಯಾಗಿದೆ.

ಭಟ್ಕಳ: ಸಾಹಿತ್ಯದ ಉದ್ದೇಶ ಬರೀ ಮನರಂಜನೆಯಲ್ಲ. ಸಾಹಿತ್ಯ ಜವಾಬ್ದಾರಿಯಿಂದ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಕೃತಿ, ಸಾಹಿತ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಸಾಹಿತ್ಯ ಮಾಡುತ್ತಿದೆ ಎಂದು ಲೇಖಕಿ ಪ್ರೇಮಾ ಟಿ.ಎಂ.ಆರ್. ತಿಳಿಸಿದರು.

ಶಿರಾಲಿಯ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಬುಧವಾರ ಸಂಜೆ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮನಸ್ಸುಗಳನ್ನು ಹಾಗೂ ಭಾವನೆಗಳನ್ನು ಬೆಸೆಯುವುದು ಭಾಷೆಯಿಂದ ಮಾತ್ರ ಸಾಧ್ಯ. ಮನುಷ್ಯನ ಬದುಕಿಗೆ ಶಕ್ತಿ ನೀಡುವುದು ತಾಯಿಯ ಭಾವವಾದರೆ, ಬದುಕನ್ನು ಕಟ್ಟಿಕೊಡುವುದು ನಮ್ಮ ಮಾತೃಭಾಷೆಯಾಗಿದೆ ಎಂದರು.

ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ನಮ್ಮ ಎದೆಯಲ್ಲಿ ಮಾತೃಭಾಷೆ ಇದ್ದಾಗ ಮಾತ್ರ ಮಾನವರಾಗಲು ಸಾಧ್ಯ ಎಂದ ಅವರು, ನಮ್ಮ ಭಾಷೆಯನ್ನು ತಲೆಯ ಮೆಲೆ ಇಟ್ಟುಕೊಂಡು ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಭಟ್ಕಳದಲ್ಲಿ ಅದ್ಧೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕು ಸಮಿತಿಯವರು ನಡೆಸಿಕೊಟ್ಟಿದ್ದಾರೆ. ಇನ್ನು ಮುಂದೆಯೂ ಕನ್ನಡ ಕಟ್ಟುವ ಕೆಲಸ ಇವರಿಂದ ಆಗಲಿದೆ ಎನ್ನುವ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಅಧ್ಯಕ್ಷರಾದ ನಾರಾಯಣ ಯಾಜಿ ಮಾತನಾಡಿದರು. ಸಿದ್ಧಾರ್ಥ ಕಾಲೇಜಿನ ಮುಖ್ಯಸ್ಥೆ ಅರ್ಚನಾ ಯು., ಪತ್ರಕರ್ತರಾದ ವಿವೇಕ ಮಹಾಲೆ, ಮನಮೋಹನ ನಾಯ್ಕ, ಸುಬ್ರಹ್ಮಣ್ಯ ದಾಸನಕುಡಿಗೆ, ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಲಕ್ಷೀಶ ನಾಯ್ಕ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿ.ಡಿ. ಮೊಗೇರ, ಅರ್ಚನಾ ಯು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಲಕ್ಷ್ಮೀಶ ನಾಯ್ಕ, ಪೌರಕಾರ್ಮಿಕ ಗಜೇಂದ್ರ ಶಂಕರ ಶಿರಾಲಿ, ಪತ್ರಕರ್ತರಾದ ವಿವೇಕ ಮಹಾಲೆ, ಸುಬ್ರಮಣ್ಯ ದಾಸನಕುಡಿಗೆ ಮತ್ತು ಮನಮೋಹನ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕ ಗಣೇಶ ಯಾಜಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ವಂದಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ, ಪೂರ್ಣಿಮಾ ಮುರ್ಡೇಶ್ವರ ಕಾರ್ಯಕ್ರಮ ನಿರೂಪಿಸಿದರು.ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಸಿದ್ದಾಪುರ: ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ವಿವಿಧೆಡೆ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ತಾಲೂಕು ಆಡಳಿತ ಸೌಧದಲ್ಲಿ ಅಭಿಲೇಖಾಲಯದ ಡಿಜಿಟಲೀಕರಣಕ್ಕೆ ಚಾಲನೆ ನೀಡಿ, ನಂತರ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯಿಂದ ಮೂಲ ಸೌಲಭ್ಯಗಳ ಮಾಹಿತಿ ಪಡೆದು ರೋಗಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಸೂಚಿಸಿದರು.ತಾಲೂಕಿನ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಸಿದ್ದಾಪುರ- ಕುಮಟಾ ಮಾರ್ಗದ ಕಲಕೈ ಎಸ್‌ಸಿ ಕೇರಿಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಕಾಲಮಿತಿಯೊಳಗೆ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಸೂಚಿಸಿದರು.

ನಂತರ ಹಲಗೇರಿ ಗ್ರಾಪಂ ವ್ಯಾಪ್ತಿಯ ಮಾವಿನಗುಂಡಿ ಮುಖ್ಯ ರಸ್ತೆಯಿಂದ ಮಂಜಿಮನೆ ರಸ್ತೆಯ ಮೋರಿಯಿಂದ ಸಹಿಪ್ರಾ ಶಾಲೆ ಹಿಂಬದಿಯ ಎಸ್‌ಸಿ ಕೇರಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದರು.