ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಬುಕ್ಕಾಪಟ್ಟಣ ಗ್ರಾಮದ ಕಾವಲಮ್ಮನಗರದಲ್ಲಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದ್ದು, ಚರಂಡಿ ನೀರಿನಲ್ಲಿ ಪ್ರತಿನಿತ್ಯ ಅಂಗನವಾಡಿ ಮಕ್ಕಳ, ಗ್ರಾಮಸ್ಥರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಎಚ್.ಎನ್.ನಾಗರಾಜು ಕೊರಟಗೆರೆ

ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಬುಕ್ಕಾಪಟ್ಟಣ ಗ್ರಾಮದ ಕಾವಲಮ್ಮನಗರದಲ್ಲಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದ್ದು, ಚರಂಡಿ ನೀರಿನಲ್ಲಿ ಪ್ರತಿನಿತ್ಯ ಅಂಗನವಾಡಿ ಮಕ್ಕಳ, ಗ್ರಾಮಸ್ಥರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಾವಲಮ್ಮನಗರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮನೆಗಳು ನಿರ್ಮಾವಾಗಿದ್ದು ಇಲ್ಲಿಗೆ ಮೂಲ ಸೌಕರ್ಯ ಮರೀಚಿಕಯಾಗಿದೆ. ಚರಂಡಿ ನೀರು ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಮುಂದೆ ಹರಿಯುತ್ತಿದ್ದು, ಚರಂಡಿ ಕೊಳಚೆ ನೀರು ರಸ್ತೆ ತುಂಬ ಹರಿಯುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಕಚೇರಿಗೆ ಸೀಮಿತವಾಗಿದ್ದಾರೆ.

ರಸ್ತೆಯಲ್ಲಿ ಸಿಸಿ ರಸ್ತೆಯ ಮಧ್ಯೆದಲ್ಲಿ ಕಾಲುವೆ ಮಾಡಿ ನೀರು ಹೋಗಲು ಮಾಡಿದ್ದಾರೆ. ಆ ಕಾಲುವೆಗೆ ಈಗಾಗಲೇ ಅನೇಕರು ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಗಳು ಕಾಣಬಹುದಾಗಿದೆ. ವಾಹನ ಸವಾರರ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಲಷಿತ ನೀರು ರಸ್ತೆಯ ಮೇಲೆ ಹರಿದು ಕಸ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿದೆ.ಕೊಳಚೆ ಪ್ರದೇಶದಿಂದ ಎಲ್ಲಾ ಕಡೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸೌಜನ್ಯಕ್ಕಾದರೂ ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಒಳಚರಂಡಿ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.ಸರ್ಕಾರಿ ಪ್ರೌಢಶಾಲೆ ಮುಂದೆ ಖಾಲಿ ಇರುವ ಪೆಟ್ಟಿಗೆ ಅಂಗಡಿಯನ್ನ ತೆರವು ಮಾಡಿಸಿದರೆ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುತ್ತದೆ. ಆದರೆ ಅಧಿಕಾರಿಗಳು ಪೆಟ್ಟಿಗೆ ಅಂಗಡಿ ತೆರವು ಮಾಡಿಸಲು ಮೀನಾಮೇಷ ಏಣಿಸುತ್ತಿದ್ದಾರೆ. ಕೂಡಲೇ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸಿ, ರಸ್ತೆ ದುರಸ್ತಿ ಮಾಡಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿಸಬೇಕು. ತುರ್ತಾಗಿ ಚರಂಡಿ ನಿರ್ಮಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಟ್;

ಸುಮಾರು ೪೦ಕ್ಕೂ ಹೆಚ್ಚು ಮನೆಗಳು ಇರುವ ಕಾವಲಮ್ಮನಗರದಲ್ಲಿ ಚರಂಡಿ ಇಲ್ಲದೇ ಮನೆಯ ಬಚ್ಚಲ ಮನೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಇದರಿಂದ ಗ್ರಾಮದಲ್ಲಿರುವ ಅಂಗನವಾಡಿ ಮಕ್ಕಳು ಹಾಗೂ ವೃದ್ದರಿಗೆ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಚರಂಡಿ ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವಂತೆ ಆಗಿದೆ. ಜಯಲಕ್ಷ್ಮೀ ಸ್ಥಳೀಯರು.

ಈಗಾಗಲೇ ಜೀ ರಾಮ್ ಜೀ ಯೋಜನೆಯಲ್ಲಿ ಸಮುದಾಯ ಇಂಗು ಗುಂಡಿ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ರಸ್ತೆ ಪಕ್ಕದಲ್ಲಿರುವ ಪೆಟ್ಟಿಗೆ ಅಂಗಡಿ ತೆರವು ಮಾಡಲಾಗುವುದು.ಅಲ್ಲಿ ಜನರ ಆರೋಗ್ಯ ಕಪಾಡುವುದು ನಮ್ಮ ಕರ್ತವ್ಯ ಅಲ್ಲಿನ ಜನರಿಗೆ ಯಾವುದೇ ತೊಂದರೆ ಆಗದಂತೆ ನಮ್ಮ ಗ್ರಾಪಂ ನೋಡಿಕೊಳ್ಳಲಾಗುವುದು. ಪ್ರದೀಪ್‌ಕುಮಾರ್ ಗ್ರಾಪಂ ಪಿಡಿಒ ಬುಕ್ಕಾಪಟ್ಟಣ.