ಗದಗ ಜಾನುವಾರು ಸಂತೆಯು ಈಗ ಕೇವಲ ವ್ಯಾಪಾರದ ಕೇಂದ್ರವಾಗಿರದೆ, ರೈತರ ಭರವಸೆಯ ತಾಣವಾಗಿ ಮಾರ್ಪಟ್ಟಿದೆ.
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಸುರಿದ ಹಿನ್ನೆಲೆ ರೈತರು ಈಗ ಕೃಷಿ ಚಟುವಟಿಕೆಗಳಿಗೆ ಅಣಿಯಾಗುತ್ತಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ನಗರದ ಎಪಿಎಂಸಿ ಆವರಣದಲ್ಲಿ ಎತ್ತುಗಳನ್ನು ಹಾಗೂ ಹೈನುಗಾರಿಕೆಗೆ ಜಾನುವಾರುಗಳ ಖರೀದಿ ಜೋರಾಗಿದೆ.ಕಳೆದ ಹಿಂಗಾರು ಹಂಗಾಮಿನಲ್ಲಿ ಉತ್ತಮ ಇಳುವರಿ ಬಂದಿರುವುದು ರೈತರ ಕೈ ಹಿಡಿದಿದೆ. ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಂಡಿರುವ ರೈತರು, ಈ ಬಾರಿ ಮುಂಗಾರು ಸಿದ್ಧತೆಗಾಗಿ ಬಲಶಾಲಿ ಎತ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಗದಗ ಜಾನುವಾರು ಸಂತೆಯು ಈಗ ಕೇವಲ ವ್ಯಾಪಾರದ ಕೇಂದ್ರವಾಗಿರದೆ, ರೈತರ ಭರವಸೆಯ ತಾಣವಾಗಿ ಮಾರ್ಪಟ್ಟಿದೆ.
ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಯುಗಾದಿಯ ದಿನದಿಂದಲೇ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುವುದು ಸಾಮಾನ್ಯ. ಅದರ ಭಾಗವಾಗಿಯೇ ಕೆಲವಾರು ರೈತರು ಹೊಸ ಎತ್ತುಗಳನ್ನು ಖರೀದಿಸಿದರೆ. ಹೈನುಗಾರಿಕೆ ನಂಬಿದವರು ಎಮ್ಮೆ, ಆಕಳುಗಳನ್ನು ಖರೀದಿಸುತ್ತಾರೆ. ಕೃಷಿ ಪ್ರಧಾನವಾದ ಗದಗ ಜಿಲ್ಲೆಯಲ್ಲಿ ಎತ್ತುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ.₹1.20 ಲಕ್ಷಕ್ಕೆ ಮಾರಾಟ: ಗದಗ ಎಪಿಎಂಸಿ ಆವರಣದ ದನದ ಸಂತೆಯಲ್ಲಿ ಜೋಡಿ ಎತ್ತುಗಳ ಬೆಲೆ ಆಕಾಶ ಮುಟ್ಟುತ್ತಿದ್ದರೂ ರೈತರ ಉತ್ಸಾಹ ಮಾತ್ರ ಕುಗ್ಗಿಲ್ಲ. ಆಕಾರ, ಬಣ್ಣ ಮತ್ತು ಬಲವನ್ನು ನೋಡಿ ಎತ್ತುಗಳ ಬೆಲೆ ನಿರ್ಧಾರವಾಗುತ್ತಿದೆ.
ಸಾಮಾನ್ಯ ಜೋಡಿ ಎತ್ತುಗಳು ₹60 ಸಾವಿರದಿಂದ ಆರಂಭವಾಗಿ, ಉತ್ತಮ ತಳಿಯ ಹಾಗೂ ಬಲಿಷ್ಠ ಎತ್ತುಗಳು ₹1.20 ಲಕ್ಷಗಳವರೆಗೂ ಮಾರಾಟವಾಗುತ್ತಿವೆ.ಇಲ್ಲಿನ ವ್ಯಾಪಾರ ಕೇವಲ ನೋಟಕ್ಕೆ ಸೀಮಿತವಾಗಿಲ್ಲ. ರೈತರು ಅತ್ಯಂತ ಚತುರತೆಯಿಂದ ಎತ್ತುಗಳನ್ನು ಪರೀಕ್ಷಿಸುತ್ತಿದ್ದಾರೆ. ಎತ್ತುಗಳನ್ನು ಕೊಳ್ಳುವ ಮೊದಲು ಗಳೆ ಹೊಡೆದು (ನೇಗಿಲು ಹೂಡಿ) ಅವುಗಳ ನಡಿಗೆ, ವೇಗ ಮತ್ತು ಭಾರ ಎಳೆಯುವ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಭೂಮಿ ತಾಯಿಯನ್ನು ಉಳುಮೆ ಮಾಡಲು ಸಮರ್ಥವಾಗಿರುವ ಎತ್ತುಗಳನ್ನು ಆಯ್ದುಕೊಳ್ಳುವಲ್ಲಿ ರೈತರು ಮಗ್ನರಾಗಿದ್ದಾರೆ.
ಎತ್ತುಗಳೇ ಆಸ್ತಿ: ಹೋದ ಸಲ ಬೆಳೆ ಚೆನ್ನಾಗಿ ಬಂದಿದೆ. ಈ ಸಲ ಮಳೆ ಅವಧಿಗಿಂತ ಮೊದಲೇ ಶುರುವಾಗಿದೆ. ಹಾಗಾಗಿ ಮನೆಯಲ್ಲಿ ಹೊಸ ಎತ್ತುಗಳು ಇರಲಿ ಅಂತ ಬಂದಿದ್ದೇವೆ. ಎಷ್ಟೇ ಬೆಲೆಯಾದರೂ ಮಣ್ಣಿನ ಮಗನಿಗೆ ಎತ್ತುಗಳೇ ಆಸ್ತಿ ಎಂದು ಮುಂಡರಗಿ ತಾಲೂಕಿನ ರೈತ ಸಂಗಪ್ಪ ತಳವಾರ ತಿಳಿಸಿದರು.