ಕಾರ್ಕಳ: ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರಿಗೆ ತೊಂದರೆ ಉಂಟುಮಾಡುತ್ತಿದ್ದ ಕೊಬ್ಬಿದ ಗೂಳಿಯನ್ನು ಗ್ರಾಮಸ್ಥರು ಹಾಗೂ ಇಲಾಖೆ ಸಹಕಾರದಿಂದ ಸೆರೆಹಿಡಿಯಲಾಗಿದೆ.
ಹೆಬ್ರಿ ತಾಲೂಕು ನಾಡ್ಪಾಲು ಸೀತಾನದಿ ತಿಂಗಳೆ ಭಾಗದ ಗೂಳಿಯು ಮೆಗದ್ದೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರಿಗೆ ಆತಂಕ ಉಂಟುಮಾಡುತ್ತಿತ್ತು. 25ಕ್ಕೂ ಹೆಚ್ಚು ಮನೆಗಳಿರುವ ಈ ಭಾಗದ ನಿವಾಸಿಗಳು ಗೂಳಿಯ ಕಾಟದಿಂದ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವುದು, ಹಟ್ಟಿಗಳಿಗೆ ನುಗ್ಗುವುದು, ಜನರನ್ನು ಓಡಿಸುವುದು ಮುಂತಾದ ಘಟನೆಗಳು ಆಗಾಗ ನಡೆಯುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದರು.ಶಾಲೆಗೆ ಹೋಗುವ ಮಕ್ಕಳನ್ನು ಕೂಡ ಗೂಳಿ ಅಟ್ಟಿಸಿಕೊಂಡು ಹೋಗುತ್ತಿದ್ದುದಾಗಿ ಗ್ರಾಮಸ್ಥರು ದೂರಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 20ಕ್ಕೂ ಹೆಚ್ಚು ಬಾರಿ ಮಕ್ಕಳು ಗೂಳಿಯಿಂದ ಓಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಕಳೆದ ವರ್ಷವೇ ಪೋಲಿಸ್ ಠಾಣೆಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಳಿಕ ಸಮಸ್ಯೆ ಗಂಭೀರವಾಗುತ್ತಿದ್ದಂತೆ ಹೆಬ್ರಿ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದರು. ಸಬ್ ಇನ್ಸ್‌ಪೆಕ್ಟರ್ ರವಿ ಬಿ.ಕೆ. ಹಾಗೂ ತಹಸೀಲ್ದಾರ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿ ಗೂಳಿಯನ್ನು ಹಿಡಿಯುವಂತೆ ಒತ್ತಾಯಿಸಿದ್ದರು.ಧರಣಿ ಬಳಿಕ ಗ್ರಾಮಸ್ಥರ ಒತ್ತಡದ ಮೇರೆಗೆ ಇಲಾಖೆಯ ಸಹಕಾರದೊಂದಿಗೆ ಸ್ಥಳೀಯರು ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿ ಗೂಳಿಯನ್ನು ಸೆರೆಹಿಡಿದರು. ಶನಿವಾರ ಸಂಜೆ ಸೆರೆ ಹಿಡಿದ ಗೂಳಿಯನ್ನು ಹೆಬ್ರಿಯ ಗಿಲ್ಲಾಳಿಯ ಗೋಶಾಲೆಗೆ ಒಪ್ಪಿಸಲಾಗಿದೆ.ಈ ಸಂದರ್ಭ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ಕುಮಾರ್, ವಿಜಯ ಕುಮಾರ್ ಶೆಟ್ಟಿ ಸೀತಾನದಿ, ಭಾಸ್ಕರ್ ಶೆಟ್ಟಿ ಗುಲ್ಕಾಡು, ರಮೇಶ್ ಶೆಟ್ಟಿ ಅಜ್ಜೊಳ್ಳಿ, ರಾಜೇಶ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸುದರ್ಶನ್ ಹೆಗ್ಡೆ ಅಜ್ಜೊಳ್ಳಿ, ಸದಾಶಿವ ಗೌಡ, ಮಹೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಗುಡ್ಡೆಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.