ಬಂಟರು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕ್ರೀಡೆಯಿಂದ ದೈಹಿಕ ಕ್ಷಮತೆಗೆ ಪ್ರಯೋಜನವಾಗುತ್ತದೆ. ಕ್ರೀಡೆಯಲ್ಲಿ ಬಂಟರ ಸಾಧನೆ ಉತ್ತುಂಗದಲ್ಲಿದೆ. ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಕ್ರೀಡೆಯಲ್ಲಿ ಬಂಟ ಪ್ರತಿಭಾವಂತ ಕ್ರೀಡಾಳುಗಳು ಪಾಲ್ಗೊಳ್ಳುವಂತಾಗಲಿ. ಕ್ರೀಡೆಯ ಮೂಲಕ ಸಮಾಜ ಬಾಂಧವರನ್ನು ಒಟ್ಟು ಸೇರಿಸಿ ಸಂಘಟನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಬಂಟ ಕ್ರೀಡೋತ್ಸವ-2026ರ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಉದ್ಯಮಿ ಗಿರೀಶ್ ಎಂ.ಶೆಟ್ಟಿ ಕಟೀಲು ಮಾತನಾಡಿ, ಬಂಟರು ಶಿಸ್ತನ್ನು ಕಾಪಾಡಿ ಬೇರೆ ಸಮುದಾಯದವರನ್ನೂ ಪ್ರೀತಿಸಿದವರು. ಕ್ರೀಡೆಯ ಮೂಲಕ ಬಂಟರು ಸಂಘಟಿತರಾಗಿ ಕೆಲಸ ಮಾಡುವಂತಾಗಲಿ ಎಂದರು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯoತಾಯ ಅಡ್ಯಾರುಗುತ್ತು ಮಾತನಾಡಿ, ಕ್ರೀಡಾಕೂಟ ಹಮ್ಮಿಕೊಂಡ ಸಂಘಟಕರನ್ನು ಅಭಿನಂದಿಸಿದರು.ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮೋಟಾರ್ ರ್‍ಯಾಲಿ ಚಾಂಪಿಯನ್ ಅಶ್ವಿನ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಉಳ್ಳಾಲ ಬಂಟರ ಸಂಘ ಪ್ರಥಮ, ನೀರುಮಾರ್ಗ ಬಂಟರ ಸಂಘ ದ್ವಿತೀಯ, ಪುರುಷರ ಹಗ್ಗ ಜಗ್ಗಾಟದಲ್ಲಿ ಜಪ್ಪಿನ ಮೊಗರು ಬಂಟರ ಸಂಘ ಪ್ರಥಮ, ಪುತ್ತೂರು ಬಂಟರ ಸಂಘ ದ್ವಿತೀಯ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಸುರತ್ಕಲ್ ಬಂಟರ ಸಂಘ ಎ ಪ್ರಥಮ, ಸುರತ್ಕಲ್ ಬಂಟರ ಸಂಘ ಬಿ ದ್ವಿತೀಯ, ಗುರುಪುರ ಬಂಟರ ಮಾತೃ ಸಂಘ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು.

ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಟಾನದ ಟ್ರಸ್ಟಿಗಳಾದ ಕೃಷ್ಣಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಡಾ.ಆಶಾಜ್ಯೋತಿ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಎಂ.ಕರುಣಾಕರ ಶೆಟ್ಟಿ, ಉಪಾಧ್ಯಕ್ಷ ಹೇಮಾನಾಥ ಶೆಟ್ಟಿ ಕಾವು, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮಮೋಹನ್ ರೈ, ಮಾಜಿ ಕಾರ್ಯದರ್ಶಿ ಎಂ.ಸುಂದರ ಶೆಟ್ಟಿ, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಮತ್ತಿತರರು ಇದ್ದರು.

ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಸ್ವಾಗತಿಸಿದರು. ಬಂಟ ಕ್ರೀಡಾ ಕೂಟದ ಸಂಚಾಲಕ ಜಗದೀಶ್ ಶೆಟ್ಟಿ ಬಿಜೈ ವಂದಿಸಿದರು. ಗಣೇಶೋತ್ಸವ ಸಮಿತಿ ಸಮನ್ವಯಕಾರ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಸನ್ಮಾನಿತರ ಪರಿಚಯಿಸಿದರು. ಭಾಗ್ಯರಾಜ್ ಶೆಟ್ಟಿ ನಿರೂಪಿಸಿದರು.

----