ಕನ್ನಡಪ್ರಭವಾರ್ತೆ ಚಿತ್ರದುರ್ಗ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ಮಾಡಿದ್ದ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಸತ್ಯವಾಗಿದೆ ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರದುರ್ಗದ ಮಹಿಳಾ ಹೋರಾಟಗಾರ್ತಿ ರಮಾ ನಾಗರಾಜ್ ಸೇರಿದಂತೆ ನಟ ಪ್ರಕಾಶ್ ರಾಜ್ ಹೆಸರುಗಳನ್ನು ಈ ಪ್ರಕರಣದಲ್ಲಿ ಎಳೆತಂದು ವಿಷಯದ ಗಂಭೀರತೆಯನ್ನು ಬೇರೆಡೆ ಸೆಳೆಯುವ ಯತ್ನವಾಗಿದೆ ಎಂದು ವಿವರಿಸಿದರು.

ಈಚೆಗೆ ಮೂರು ಶವಗಳ ಡಿಎನ್ಎ ಪರೀಕ್ಷೆಯ ಗುರುತು ಸಿಕ್ಕಿವೆ. ಇದರಲ್ಲಿ ಮಹಿಳೆಯರದು ಇಲ್ಲ. ಬರೀ ಪುರುಷರದೇ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಪ್ರಕರಣವನ್ನು ದಾರಿ ತಪ್ಪಿಸುವ ಕಡೆಗೆ ಹಂತಹಂತವಾಗಿ ಪ್ರಯತ್ನಿಸಲಾಗುತ್ತಿದೆ. ನೇತ್ರಾವತಿಯಲ್ಲಿ ಹರಿದು ಹೋದ ಶವಗಳು ಎಂದು ನಮೂದಿಸುವ ಇವರಿಗೆ ಮನುಷ್ಯ ಎಂಬುದನ್ನು ಮರೆತಿದ್ದಾರಾ? ಎಂದು ಪ್ರಶ್ನಿಸಿದರು.

ಎಫ್ಎಸ್ಎಲ್ ಕೊಟ್ಟ ವರದಿಗಳು ನಮ್ಮ ಬಳಿ ಇವೆ. ಆದ್ದರಿಂದ ಎಸ್ಐಟಿ ವರದಿಯನ್ನು ಬಹಿರಂಗಪಡಿಸಬೇಕಿದೆ. ಗುಡ್ಡದಲ್ಲಿ ಸಿಕ್ಕ ಮೂಳೆಗಳು ಮಹಿಳೆಯರ ಅಥವಾ ಪುರುಷರವೋ ಎಂಬುದು ತಿಳಿದುಬರಿಲಿದೆ. ನಮ್ಮ ಬಳಿಯೂ ಸಾಕಷ್ಟು ಮಾಹಿತಿಗಳಿವೆ ಎಂದು ಪ್ರದರ್ಶಿಸಿದರು. ಚಿನ್ನಯ್ಯನ ಆರೋಪಗಳಿಗೆ ನ್ಯಾಯಾಲಯ ತಿರಸ್ಕಾರ ಮಾಡಿದೆ. ಚಿನ್ನಯ್ಯನ ಆರೋಪಗಳು ಸತ್ಯಕ್ಕೆ ದೂರವಾದವು. ನಾನು ಯಾರೊಂದಿಗೂ ಹಣಕಾಸಿನ ವ್ಯವಹಾರ ಮಾಡಿಲ್ಲ. ಅಗತ್ಯವಿದ್ದರೆ ನನ್ನ ಎಲ್ಲಾ ಬ್ಯಾಂಕ್ ಖಾತೆಗಳ ವಿವರ ನೋಡಬಹುದು. ನಾನೊಬ್ಬ ನ್ಯಾಯಾಧೀಶರ ಮಗಳಾಗಿ ತಪ್ಪು ಮಾಡುವುದಿಲ್ಲ ಎಂದು ಮಹಿಳಾ ಹೋರಾಟಗಾರ್ತಿ ರಮಾ ನಾಗರಾಜ್ ವಿವರಿಸಿದರು.

ಸಮಾಜದಲ್ಲಿ ನೊಂದ ಮಹಿಳೆಯರ ಪರವಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ನ್ಯಾಯ ಒದಗಿಸಿದ್ದೇನೆ. ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದರು. ಚಿತ್ರದುರ್ಗದ ಹಿರಿಯ ಪತ್ರಕರ್ತ, ಸಾಹಿತಿ ಜಿ.ಎಸ್. ಉಜ್ಜಿನಪ್ಪ ಅವರ ನಿಧನ ನಮಗೆ ನೋವು ತರಿಸಿದೆ. ಅವರು ತಂದೆಯ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡಿದ್ದರು ಎಂದು ಸ್ಮರಿಸಿದರು.