ತಾಲೂಕಿನ ಲಕ್ಕುಂಡಿ ಗ್ರಾಮದ ನಾಲ್ಕು ವಾರ್ಡ್‌ಗಳಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿದ್ದು, ಇದರ ದುರಸ್ತಿ ಕಾಮಕಾರಿ ಕೈಗೊಳ್ಳದ ಗ್ರಾಪಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗದಗ

ತಾಲೂಕಿನ ಲಕ್ಕುಂಡಿ ಗ್ರಾಮದ ನಾಲ್ಕು ವಾರ್ಡ್‌ಗಳಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿದ್ದು, ಇದರ ದುರಸ್ತಿ ಕಾಮಕಾರಿ ಕೈಗೊಳ್ಳದ ಗ್ರಾಪಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಜಲಮೂಲಗಳಲ್ಲಿ ನೀರು ಇಲ್ಲದೇ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸುವುದರೊಂದಿಗೆ ಉಗ್ರವಾದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಹಾಲಗೊಂಡ ಬಸವೇಶ್ವರ ಕೆರೆಯ ದಡದ ಮೇಲಿರುವ ಓಹರ್ ಹೆಡ್ ಟ್ಯಾಂಕಿನಿಂದ 6ನೇ ವಾರ್ಡಿನ ಮೂಲಕ 7,8 ಮತ್ತು 9ನೇ ವಾರ್ಡಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ ಕಳೆದ 6 ತಿಂಗಳಿನಿಂದ ಮಹಿಳಾ ಶೌಚಾಲಯದ ಸಮೀಪದಲ್ಲಿಯ ಗಟಾರು ಪಕ್ಕಕ್ಕೆ ಇರುವ ಪೈಪ್‌ಲೈನ್ ಒಡೆದು ಪ್ರತಿನಿತ್ಯ ನೀರು ಪೋಲಾಗುತ್ತಿದೆ. ಮತ್ತು ತೆಗ್ಗು ಪ್ರದೇಶದಲ್ಲಿ ನೀರು ಸಂಗ್ರವಾಗಿ ಸೊಳ್ಳೆಗಳ ಹಾಗೂ ಹಂದಿಗಳ ತಾಣವಾಗಿದೆ. ಇನ್ನೂ ಈ ಸ್ಥಳದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಯಾಗಿರುವುದಿಲ್ಲ. ಇದರಿಂದ ಅಕ್ಕ ಪಕ್ಕದ ಮನೆಯಲ್ಲಿ ಹಗಲು, ರಾತ್ರಿಯನ್ನದೇ ಸೊಳ್ಳೆಗಳು ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರಲ್ಲಿ ಮೂಡಿದೆ. ಈ ಅವ್ಯವಸ್ಥೆಯಿಂದ ಕಂಗೆಟ್ಟ ಸಾರ್ವಜನಿಕರು ಇಲ್ಲಿಂದ ಮನೆಯನ್ನೇ ಸ್ಥಳಾಂತರಗೊಳಿಸಬೇಕಾಗಿದೆ ಎಂದು ಗ್ರಾಪಂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಸಮಸ್ಯೆಗೆ ಸ್ಪಂದನೆ ಇಲ್ಲ:

ಈ ಕುರಿತು ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ದೂರು ನೀಡಿ 3 ತಿಂಗಳು ಕಳೆದಿವೆ. ಇನ್ನೂ ಮೌಖಿಕವಾಗಿ ಹಾಗೂ ಪತ್ರದ ಮೂಲಕ ಮತ್ತು ವಾರ್ಡ್‌ ಸಭೆ, ಗ್ರಾಮ ಸಭೆಯಲ್ಲಿ ವಿಷಯ ತಿಳಿಸಿದರೂ ಸಹ ಗ್ರಾಪಂ ಅಧಿಕಾರಿಗಳು ಪೈಪ್‌ ಲೈನ್ ದುರಸ್ತಿ ಮಾಡುವ ಕಾಳಜಿ ತೋರಿಸುತ್ತಿಲ್ಲ ಎಂದು ನಾಗರಿಕರು ದೂರಿದರು.

ಒಂದು ವಾರದೊಳಗೆ ದುರಸ್ತಿ ಕಾಮಗಾರಿ ಕೈಗೊಳ್ಳದಿದ್ದರೆ ಲೋಕಾಯುಕ್ತ ಕಚೇರಿಗೆ ದೂರು ನೀಡುವ ಮೂಲಕ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಹಮ್ಮದ್‌ರಫಿಕ ಹುಬ್ಬಳ್ಳಿ, ಅಲ್ಲಾಭಕ್ಷಿ ಗದಗ,ಹಸನಸಾಬ ತಲಾಲಚೂರು, ನೂರಅಹ್ಮದ ಯರಗುಡಿ, ಬಸಪ್ಪ ಸೋಮನಕಟ್ಟಿ, ಮಾಬುಸಾಬ ಯಲಿಗಾರ, ಮಾಭೂಬಿ ಮುಂಡರಗಿ, ಆಸ್ಮಾ ಗದಗ, ಹಮೀನಾಬೇಗಂ ಹುಬ್ಬಳ್ಳಿ, ಮಮತಾಜ ಬೇಗಂ ತಲಾಲಚೂರು, ನೀಲಮ್ಮ ಬೇವಿನಮರದ ಸೇರಿದಂತೆ ವಾರ್ಡಿನ ನಾಗರಿಕರು ಎಚ್ಚರಿಸಿದ್ದಾರೆ.