ಬಸ್-ಬೈಕ್ ಮಧ್ಯೆ ಡಿಕ್ಕಿ: ದಂಪತಿ ಸಾವು

| Published : Mar 30 2025, 03:03 AM IST

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ದಂಪತಿ ಮೃತಪಟ್ಟ ಘಟನೆ ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಕೆಎಸ್‌ಆರ್‌ಟಿಸಿ ಬಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ದಂಪತಿ ಮೃತಪಟ್ಟ ಘಟನೆ ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ನಿವಾಸಿ ಶಂಕ್ರಪ್ಪ ಸಿದ್ದಪ್ಪ ಲಕ್ಷ್ಮೇಶ್ವರ (50), ಶ್ರೀದೇವಿ ಶಂಕ್ರಪ್ಪ ಲಕ್ಷ್ಮೇಶ್ವರ (46) ಮೃತ ದಂಪತಿ. ಶನಿವಾರ ಮಧ್ಯಾಹ್ನ ಮುಗಳಖೋಡದಿಂದ ಮಳಲಿ ಗ್ರಾಮಕ್ಕೆ ದ್ವಿಚಕ್ರವಾಹನ ಮೇಲೆ ಹೊರಟಿದ್ದಾಗ ಚಿಕ್ಕೋಡಿಯಿಂದ ಶ್ರೀಶೈಲಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಗಳಖೋಡ ಕ್ರಾಸ್ ಬಳಿ ಬಸ್ ಬೈಕ್್ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ದ್ವಿಚಕ್ರವಾಹದಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಅಲ್ಲದೆ, ಬಸ್‌ನಲ್ಲಿದ್ದ 53 ಪ್ರಯಾಣಿಕರು ಗಾಯಗೊಂಡಿದ್ದು, ಮುಧೋಳ ಮತ್ತು ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ, ಕೆಲವರನ್ನು ಮುಧೋಳ ಮತ್ತು ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಧೋಳ ಸರ್ಕಾರಿ ಆಸ್ಪತ್ರೆಯಲ್ಲಿ 38 ಜನ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 6 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಶೋಕ ಸೂರ್ಯವಂಶಿ ಪತ್ರಿಕೆಗೆ ತಿಳಿಸಿದರು.

ಸಂಸದ ಕಾರಜೋಳ ಭೇಟಿ:

ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಪರಿಹಾರ ಮತ್ತು ಚಿಕಿತ್ಸಾ ವೆಚ್ಚ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಸೈಯ್ಯದ್‌ ರೋಷನ್ ಎಸ್., ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್ಐ ಅಜೀತಕುಮಾರ ಹೊಸಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.