ಬಸ್‌-ಬೈಕ್‌ ಡಿಕ್ಕಿ: ತಂದೆ, ಮಗ ದಾರುಣ ಸಾವು

| Published : May 11 2025, 11:47 PM IST

ಸಾರಾಂಶ

ಕೆಎಸ್ಸಾರ್ಟಿಸಿ ಬಸ್ಸು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮತ್ತು ಮಗ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿ ನಡೆದಿದೆ. ಮೃತ ಬಾಲಕ ಶನಿವಾರವಷ್ಟೇ ಪಿಯುಸಿ ತರಗತಿಗೆ ಸೇರ್ಪಡೆಯಾಗಿದ್ದ.

ಕನ್ನಡಪ್ರಭ ವಾರ್ತೆ ಪುತ್ತೂರು/ಬಂಟ್ವಾಳ

ಕೆಎಸ್ಸಾರ್ಟಿಸಿ ಬಸ್ಸು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮತ್ತು ಮಗ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ನರಿಕೊಂಬು ಬಳಿಯ ನಾಯಿಲ ಬೋರುಗುಡ್ಡೆ ಎಂಬಲ್ಲಿನ ನಿವಾಸಿ ನರಿಕೊಂಬು ಗ್ರಾ.ಪಂ. ಸದಸ್ಯ ಹಾಗೂ ಸಮಾಜಸೇವಾ ಬ್ಯಾಂಕ್ ನಿರ್ದೇಶಕ ಅರುಣ್ ಕುಲಾಲ್ (೪೫) ಮತ್ತು ಅವರ ಪುತ್ರ ಧ್ಯಾನ್ (೧೫) ಮೃತರು. ಮಾಣಿ- ಮೈಸೂರು ರಾ.ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿನ ತಿರುವಿನಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಮತ್ತು ಬೈಕ್ ನಡುವೆ ಡಿಕ್ಕಿ ಸಂಭಿಸಿತ್ತು. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟ ಅರುಣ್ ಕುಲಾಲ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪುತ್ರ ಧ್ಯಾನ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬಡಗಿ ವೃತ್ತಿ ನಡೆಸುತ್ತಿದ್ದ ಅರುಣ್ ಕುಲಾಲ್ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಅರುಣ್ ಕುಲಾಲ್ ಅವರು ಪತ್ನಿ ಜಯಮಾಲಿನಿ ಹಾಗೂ ೮ನೇ ತರಗತಿಯಲ್ಲಿ ಓದುತ್ತಿರುವ ಪುತ್ರ ರೋಶನ್‌ನ್ನು ಅಗಲಿದ್ದಾರೆ.

ಅರುಣ್ ಕುಲಾಲ್‌ ಕುಟುಂಬದ ಪೋಷಣೆಗಾಗಿ ತನ್ನ ಮನೆಯಲ್ಲಿಯೇ ಮರದ ಸಾಮಾಗ್ರಿಗಳ ರಚನಾ ಕೆಲಸ ನಿರ್ವಹಿಸುತ್ತಿದ್ದರು. ಪತ್ನಿ ಜಯಮಾಲಿನಿ ಬೀಡಿ ಕಟ್ಟುತ್ತಿದ್ದರು. ತಂದೆ ಮತ್ತು ಮಗ ಸುಳ್ಯದ ಮದುವೆಗಾಗಿ ಬೈಕ್‌ನಲ್ಲಿ ಹೊರಟಿದ್ದರೆ, ತಾಯಿ ಜಯಮಾಲಿನಿ ಬಸ್ಸಿನಲ್ಲಿ ಅದೇ ಮದುವೆಗೆ ತೆರಳುತ್ತಿದ್ದರು. ಬಡಕುಟುಂಬದ ಯಜಮಾನ ಅರುಣ್ ಕುಲಾಲ್ ಹಾಗೂ ಅವರ ಪ್ರಥಮ ಪುತ್ರ ಧ್ಯಾನ್ ಸಾವಿನೊಂದಿಗೆ ಈ ಕುಟುಂಬದ ಅರುಣ್‌ ಅವರ ಪತ್ನಿ ಜಯಮಾಲಿನಿ ಮತ್ತು 8ನೇ ತರಗತಿ ಓದುತ್ತಿರುವ ಪುತ್ರ ರೋಶನ್ ಅನಾಥವಾಗಿದ್ದಾರೆ.ಶಂಭೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಧ್ಯಾನ್ ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಶನಿವಾರವಷ್ಟೇ ಪ್ರಥಮ ಪಿಯುಸಿಗೆ ದಾಖಲಾಗಿದ್ದ. ಘಟನೆಯಿಂದಾಗಿ ಮಾಣಿ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.