ಬಸ್ ಭಸ್ಮ ಪ್ರಕರಣ: ವಿಮಾ ಪರಿಹಾರಕ್ಕಾಗಿ ಪ್ರತಿಭಟನೆ

| Published : Apr 20 2024, 01:10 AM IST

ಬಸ್ ಭಸ್ಮ ಪ್ರಕರಣ: ವಿಮಾ ಪರಿಹಾರಕ್ಕಾಗಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮಾ. 13ರಂದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಏ. 10ರೊಳಗೆ ವಿಮೆ ಪರಿಹಾರ ನೀಡುವುದಾಗಿ ಹೇಳಲಾಗಿತ್ತು. ಆದರೆ ಇನ್ನೂ ತನಕ ಪರಿಹಾರದ ಹಣ ವಿತರಿಸಿಲ್ಲ ಎಂದು ಆರೋಪಿಸಲಾಗಿದೆ.

ಭಟ್ಕಳ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟಿದ್ದ ಬಸ್ಸಿಗೆ ಐದು ತಿಂಗಳಾದರೂ ವಿಮೆ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಶ್ರೀಕುಮಾರ ರೋಡ್‌ಲೈನ್ಸ್‌ ಮಾಲೀಕ ವೆಂಕಟ್ರಮಣ ಹೆಗಡೆ ಮತ್ತು ಅವರ ತಂಡ ಶುಕ್ರವಾರ ಪಟ್ಟಣದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‌ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಶ್ರೀಕುಮಾರ ರೋಡ್‌ಲೈನ್ಸ್‌ನ ಮಾಲೀಕ ವೆಂಕಟ್ರಮಣ ಹೆಗಡೆ ಮಾತನಾಡಿ, ಕಳೆದ 2023ರ ಅ. 30ರಂದು ಬೆಂಗಳೂರಿನ ಬನಶಂಕರಿಯಲ್ಲಿರುವ ಎಸ್.ವಿ. ಕೋಚ್ ಫ್ಯಾಕ್ಟರಿಯಲ್ಲಿ ನಮ್ಮ ಬಸ್ ಶಾರ್ಟ್‌ ಸರ್ಕ್ಯೂಟ್ ಅವಘಡದಿಂದ ಬೆಂಕಿಗೆ ಆಹುತಿಯಾಗಿತ್ತು. ಈ ಬಗ್ಗೆ ವಿಚಾರಣೆಗೆ ಬಂದ ತನಿಖಾಧಿಕಾರಿಗಳು ₹೨೫ ಲಕ್ಷ ಹಾನಿಯ ವರದಿಯನ್ನು ಯುನೈಟೆಡ್ ಇನ್ಸೂರೆನ್ಸ್‌ ಕಚೇರಿಗೆ ಸಲ್ಲಿಸಿದ್ದಾರೆ. ವರದಿ ಕೈಸೇರಿ 5 ತಿಂಗಳಾದರೂ ವಿಮೆ ಕಂಪನಿಯವರು ಪರಿಹಾರ ಮೊತ್ತ ನೀಡಲಿಲ್ಲ. ಈ ಬಗ್ಗೆ ಹುಬ್ಬಳ್ಳಿ, ಬೆಂಗಳೂರು ಕಚೇರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ವಿಮೆ ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡಿ ಸಾಕಾಗಿದೆ ಎಂದರು.

ಕಳೆದ ಮಾ. 13ರಂದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಏ. 10ರೊಳಗೆ ವಿಮೆ ಪರಿಹಾರ ನೀಡುವುದಾಗಿ ಹೇಳಲಾಗಿತ್ತು. ಆದರೆ ಇನ್ನೂ ತನಕ ಪರಿಹಾರದ ಹಣ ವಿತರಿಸಿಲ್ಲ ಎಂದರು.

ಶಾಖಾ ವ್ಯವಸ್ಥಾಪಕ ತಿಮ್ಮಣ್ಣ ಗೊಂಡ ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಶಾಖಾ ವ್ಯವಸ್ಥಾಪಕ ತಿಮ್ಮಣ್ಣ ಗೊಂಡ ಅವರು ಹುಬ್ಬಳ್ಳಿ ಕಚೇರಿಯಿಂದ ಡಿವಿಜನಲ್ ಮ್ಯಾನೇಜರ್ ಚಂದ್ರಮೌಳಿ ಅವರ ಬಳಿ ಮಾತನಾಡಿದರು. 10 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಇ ಮೇಲ್ ಮೂಲಕ ಹುಬ್ಬಳ್ಳಿ ಕಚೇರಿಯಿಂದ ಪತ್ರ ಕಳುಹಿಸಿದ್ದರಿಂದ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಈ ಸಂದರ್ಭದಲ್ಲಿ ನಾಗರಾಜ ಭಟ್ಟ ಬೇಂಗ್ರೆ, ಭಟ್ಕಳ ಟೆಂಪೋ ಮಾಲೀಕರ ಸಂಘದ ಪ್ರಮುಖ ಗಣೇಶ ನಾಯ್ಕ, ಹೊನ್ನಾವರ ಟೆಂಪೋ ಮಾಲೀಕರ ಸಂಘದ ಪ್ರಮುಖ ನಾಗರಾಜ ಯಾಜಿ, ಜಗದೀಶ ಜೈನ್, ಎಂ.ಎಸ್. ಹೆಗಡೆ ಕಣ್ಣಿ, ಸುಭಾಸ ಗೌಡ್, ನಾಗೇಶ ನಾಯ್ಕ, ಶ್ಯಾಮ ಶಾನಭಾಗ, ಉಮೇಶ ಹೆಗಡೆ, ಶಂಕರ ನಾಯ್ಕ ಸೇರಿದಂತೆ ಶ್ರೀಕುಮಾರ ರೋಡ್‌ಲೈನ್ಸ್‌ನ ಸಿಬ್ಬಂದಿ ಇದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು.