ಕೈಮುಗಿದು ಏರು, ಇದು ಕನ್ನಡದ ತೇರು

| Published : Nov 02 2023, 01:00 AM IST

ಸಾರಾಂಶ

ಪ್ರತಿವರ್ಷ ಒಂದೊಂದು ರೀತಿ ಬಸ್ಸನ್ನು ಕನ್ನಡಮಯವಾಗಿಸುವ ಈತ ಈ ಬಾರಿ ಬಸ್ಸಿನ ಮುಂಭಾಗ ಸುತ್ತಲೂ ಕೆಂಪು, ಹಳದಿ ಬಣ್ಣದ ಬಾವುಟ ಸುತ್ತಿ, ಬಲೂನ್‌ಗಳನ್ನು ಹಾರವಾಗಿ ಮಾಡಿ ಹಾಕಿದ್ದಾರೆ.

ಬಿ. ರಾಮಪ್ರಸಾದ್ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ವಿವಿಧ ಕಲಾವಿದರು, ಕನ್ನಡ ಪುಸ್ತಕಗಳು, ಶಿಕ್ಷಣ ಸಂಸ್ಥೆಗಳ ಪರಿಚಯ, ಯುವ ಸಾಹಿತಿಗಳ ಮಾಹಿತಿ, ತಳಿರು ತೋರಣ, ಬಾಳೆಕಂಬದಿಂದ ಸಿಂಗಾರ, ಕನ್ನಡ ಧ್ವಜದ ಹಾರಾಟ, ಕನ್ನಡ ಹಾಡುಗಳ ನಿನಾದ...

-ಇದು ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದರಲ್ಲಿ ರಾಜ್ಯೋತ್ಸವದ ದಿನವಾದ ಬುಧವಾರ ಕಂಡುಬಂದ ದೃಶ್ಯ. ತಾಲೂಕಿನ ಚಿಗಟೇರಿ ಗ್ರಾಮದ ಬಸ್ ಕಂಡಕ್ಟರ್ ನಾಗರಾಜ ಕಳೆದ 10 ವರ್ಷಗಳಿಂದ ಸಾರಿಗೆ ಬಸ್ಸನ್ನು ರಾಜ್ಯೋತ್ಸವದಂದು ಕನ್ನಡ ರಥವನ್ನಾಗಿ ಮಾರ್ಪಡಿಸಿ ಕನ್ನಡ, ಸಾಹಿತ್ಯ, ಹಾಡುಗಳು, ಸಾಹಿತಿ, ಕವಿಗಳನ್ನು ಬಸ್‌ನಲ್ಲಿ ಪರಿಚಯಿಸಿ ಪ್ರಯಾಣಿಕರ ಗಮನ ಸೆಳೆಯುತ್ತಾ ಬಂದಿದ್ದಾರೆ.

ಪ್ರತಿವರ್ಷ ಒಂದೊಂದು ರೀತಿ ಬಸ್ಸನ್ನು ಕನ್ನಡಮಯವಾಗಿಸುವ ಈತ ಈ ಬಾರಿ ಬಸ್ಸಿನ ಮುಂಭಾಗ ಸುತ್ತಲೂ ಕೆಂಪು, ಹಳದಿ ಬಣ್ಣದ ಬಾವುಟ ಸುತ್ತಿ, ಬಲೂನ್‌ಗಳನ್ನು ಹಾರವಾಗಿ ಮಾಡಿ ಹಾಕಿದ್ದಾರೆ.

ಒಳಗಡೆ ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಗಿರೀಶ ಕಾರ್ನಾಡ, ಹೀಗೆ ಸಾಹಿತ್ಯ, ವಿಜ್ಞಾನ, ಸಾಂಸ್ಕೃತಿಕ, ರಂಗಭೂಮಿ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಭಾವಚಿತ್ರ ಅಂಟಿಸಿದ್ದಾರೆ.

ಕರ್ನಾಟಕದ ಹೆಸರಾಂತ ಸ್ಥಳಗಳ ಪರಿಚಯ, ಭಾವಚಿತ್ರ, ಮಾಹಿತಿ, ಕವಿಗಳ, ಸಾಹಿತಿಗಳ ಪರಿಚಯ ಹಾಗೂ ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಬರಹವಿದೆ.

ಇವೆಲ್ಲವುಗಳ ಮಧ್ಯೆ ಕನ್ನಡದ ನಾಡು, ನುಡಿಗೆ ಸಂಬಂಧಪಟ್ಟ ಅಂದರೆ ಸರ್ಕಾರ ಈ ಬಾರಿ ನಿರ್ದೇಶನ ನೀಡಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರೂ ಇರು ಎಂತಾದರು ಇರು, ಒಂದೇ ಒಂದೇ ಕರ್ನಾಟಕ ಒಂದೇ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಹಾಗೂ ಹೊತ್ತಿತು ಹೊತ್ತಿತು ಕನ್ನಡ ದೀಪ ಹೀಗೆ ಇಂಪಾದ ಹಾಡುಗಳ ನೀನಾದ, ಒಟ್ಟಿನಲ್ಲಿ ಬಸ್ಸಿನಲ್ಲಿ ಹತ್ತಿದರೆ ಇಳಿಯಲು ಮನಸ್ಸು ಬರುವುದಿಲ್ಲ. ಈ ಬಸ್ಸು ಹರಪನಹಳ್ಳಿ- ಕೊಟ್ಟೂರು ಮಾರ್ಗದಲ್ಲಿ ಸಂಚರಿಸುತ್ತದೆ.

ಕಂಡಕ್ಟರ್‌ ನಾಗರಾಜ ಅವರ ಈ ಕನ್ನಡದ ಕೆಲಸಕ್ಕೆ ಸ್ಥಳೀಯ ಡಿಪೋ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಪ್ರೋತ್ಸಾಹ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಕಂಡಕ್ಟರ್ ನಾಗರಾಜ ಬಸ್ಸಿನ ಮೂಲಕ ಕಳೆ ನೀಡಿದ್ದರು.

ಸಹಕಾರ:

ಕನ್ನಡ, ಸಾಹಿತ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಲಿ ಎಂಬ ಸದಾಶಯದಿಂದ ಪ್ರತಿವರ್ಷ ವಿಭಿನ್ನ ವಾಗಿ ಬಸ್ಸನ್ನು ಕನ್ನಡಮಯವಾಗಿಸುತ್ತೇನೆ. ಪ್ರತಿವರ್ಷ ಸ್ವಂತ ಖರ್ಚಿನಲ್ಲಿ ಮಾಡುತ್ತಾ ಬಂದಿದ್ದೇನೆ. ಈ ಬಾರಿ ನಮ್ಮ ಸಿಬಂದಿ ಸಹಕಾರ ನೀಡಿದ್ದಾರೆ. ಮೆಕ್ಯಾನಿಕ್‌ಗಳಾದ ರಮೇಶ ಹಾಗೂ ಗಜನಾಯ್ಕ ಅವರು ಬಸ್ಸಿನ ಅಲಂಕಾರಕ್ಕೆ ಕೈಜೋಡಿಸಿದ್ದಾರೆ ಎಂದರು ನಿರ್ವಾಹಕ ಬಿ.ಎಂ. ನಾಗರಾಜ

.