ಕಾರಟಗಿ: ತಮ್ಮ ಗ್ರಾಮಕ್ಕೆ ಸಾರಿಗೆ ಬಸ್‌ಗಳು ಸಕಾಲಕ್ಕೆ ಬಾರದ ಹಿನ್ನೆಲೆಗೆ ಸಾರಿಗೆ ಸಂಸ್ಥೆಯ ವಿರುದ್ಧ ರಸ್ತೆ ತಡೆ, ಪ್ರತಿಭಟನೆ ನಡೆಸಲು ಮುಂದಾಗಿದ್ದ ಸಮೀಪದ ಮೈಲಾಪುರ ಗ್ರಾಮಸ್ಥರು ಪೊಲೀಸರ ಮಧ್ಯಸ್ಥಿಕೆಯಿಂದ ಬಿಟ್ಟಿದ್ದಾರೆ.

ತಾಲೂಕಿನ ಮೈಲಾಪುರಕ್ಕೆ ಹಲವು ತಿಂಗಳಿಂದ ಸಾರಿಗೆ ಸಂಸ್ಥೆಯ ಬಸ್‌ಗಳು ಸಕಾಲಕ್ಕೆ ಮತ್ತು ನಿಯಮಿತವಾಗಿ ಬರುತ್ತಿರಲಿಲ್ಲ. ಹೀಗಾಗಿ ಗ್ರಾಮಸ್ಥರು ಜೂ. ೨ರಂದು ಕಾರಟಗಿ-ಕನಕಗಿರಿ ರಾಜ್ಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಗೆ ಇಲ್ಲಿನ ಪೊಲೀಸ್ ಠಾಣೆಗೂ ಮನವಿ ಸಲ್ಲಿಸಿದ್ದರು. ಆದರೆ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡದೆ, ಪ್ರತಿಭಟನೆ ಕೈ ಬಿಡುವಂತೆ ಗ್ರಾಮಸ್ಥರಿಗೆ ತಾಕೀತು ಮಾಡಿದ್ದರು. ಆನಂತರ ಇಲ್ಲಿನ ಠಾಣೆ ಪಿಐ ಸುಧೀರ್ ಬೆಂಕಿ ಗ್ರಾಮಸ್ಥರು ಮತ್ತು ಕೆಎಸ್‌ಆರ್‌ಟಿಸಿ ಗಂಗಾವತಿ ಘಟಕದ ಅಧಿಕಾರಿಗಳ ನಡುವೆ ಸೋಮವಾರ ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಪ್ರತಿಭಟನೆ ಕೈಬಿಡುವಂತೆ ಮಾಡಿದ್ದಾರೆ.

ಕಾರಟಗಿ-ಕನಕಗಿರಿ ಮುಖ್ಯರಸ್ತೆ ಮೂಲಕ ದಿನ ನಿತ್ಯ ಹತ್ತಾರು ಬಸ್‌ಗಳು ಓಡಾಡುತ್ತಿದ್ದರೂ ಮೈಲಾಪುರ ಗ್ರಾಮದೊಳಕ್ಕೆ ತೆರಳದೇ, ಹೊರವಲಯದಲ್ಲಿನ ಕ್ರಾಸ್‌ನಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದವು. ಸಾರಿಗೆ ಇಲಾಖೆ ಬಸ್‌ಗಳ ಚಾಲಕ, ನಿರ್ವಾಹಕರ ವರ್ತನೆ ಖಂಡಿಸಿ ಗ್ರಾಮಸ್ಥರು ಸಚಿವ ಶಿವರಾಜ ತಂಗಡಗಿ ಅವರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿರಲಿಲ್ಲ.

ಪಿಐ ಸುಧೀರ್ ಬೆಂಕಿ ಗಂಗಾವತಿ ಡಿಪೋ ಮ್ಯಾನೇಜರ್ ಪ್ರವೀಣ್ ಯರನಾಳ ಹಾಗೂ ಗ್ರಾಮಸ್ಥರನ್ನು ಸೋಮವಾರ ಪೊಲೀಸ್ ಠಾಣೆಗೆ ಕರೆಸಿ, ಸಮಸ್ಯೆ ಇತ್ಯರ್ಥಕ್ಕೆ ವೇದಿಕೆ ನಿರ್ಮಿಸಿದರು.

ಗ್ರಾಮಸ್ಥರ ಪರವಾಗಿ ಅಮರೇಗೌಡ ಮಾಲಿಪಾಟೀಲ್ ಮಾತನಾಡಿ, ಪ್ರತಿನಿತ್ಯ ಕಾರಟಗಿ-ಕನಕಗಿರಿ, ಕನಕಗಿರಿ- ಕಾರಟಗಿ ನಡುವೆ ಹತ್ತಾರು ಬಸ್‌ಗಳು ಓಡಾಡುತ್ತಿದ್ದರೂ ಮೈಲಾಪುರ ಗ್ರಾಮದೊಳಕ್ಕೆ ಹೋಗದೇ, ಕ್ರಾಸ್‌ನಲ್ಲಿಯೇ ನಿಲ್ಲಿಸುವುದರಿಂದ ಅಲ್ಲಿಂದ ಒಂದೂವರೆ ಕಿ.ಮೀ. ದೂರ ಗ್ರಾಮಸ್ಥರು ನಡೆದುಕೊಂಡೇ ಹೋಗಬೇಕು. ೮ಕ್ಕೂ ಹೆಚ್ಚು ಬಸ್‌ಗಳು ಮೈಲಾಪುರ ಮೂಲಕ ಓಡಾಡುತ್ತಿದ್ದರೂ, ನಮ್ಮ ಊರಿಗೆ ಸ್ಟೇಜ್ ಕೊಡದ ಕಾರಣಕ್ಕೆ ಕ್ರಾಸ್‌ನಲ್ಲೂ ನಿಲ್ಲಿಸದೇ ಓಡಾಡುತ್ತಿವೆ. ಇದರಿಂದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಗಡಿ ಗ್ರಾಮವಾದ ಮೈಲಾಪುರ ಗ್ರಾಮಸ್ಥರಿಗೆ, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರಿಗೂ, ವಿದ್ಯಾರ್ಥಿಗಳಿಗೂ ಓಡಾಡಲು ಸಮಸ್ಯೆಯಾಗಿದೆ. ಕೂಡಲೇ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಒತ್ತಾಯಿಸಿದರು.


ರೂಟ್ ೭೩-೭೪ ಬಸ್ ಕೂಡಾ ಕನಕಗಿರಿಯಿಂದ ಮೈಲಾಪುರ ಗ್ರಾಮಕ್ಕೆ ಬೆಳಗ್ಗೆ ೭.೩೦ಕ್ಕೆ ಬರುತ್ತದೆ. ಆದರೆ, ಅದು ತುಂಬಿಕೊಂಡಿರುತ್ತದೆ. ನಮ್ಮೂರಿನ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆ ಬಸ್‌ನಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೈಲಾಪುರದಿಂದಲೇ ಒಂದು ಬಸ್ ಬಿಟ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಎಲ್ಲ ಬೇಡಿಕೆಗಳನ್ನು ಆಲಿಸಿದ ಡಿಪೋ ಮ್ಯಾನೇಜರ್ ಪ್ರವೀಣ್, ನಮ್ಮ ಡಿಪೋ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಸ್‌ಗಳು ಮೈಲಾಪುರ ಗ್ರಾಮದೊಳಕ್ಕೆ ತೆರಳುವಂತೆ ಸೂಚಿಸುತ್ತೇನೆ. ಇನ್ನುಳಿದಂತೆ ಕುಷ್ಟಗಿ, ಯಲಬುರ್ಗಾ ಡಿಪೋಗಳ ಬಸ್‌ಗಳು ಇದ್ದು ಆ ಡಿಪೋಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಮಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು, ಮಾತು ತಪ್ಪಿದರೆ ರಸ್ತೆ ತಡೆ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ಕಾರಟಗಿ ಬಸ್ ನಿಲ್ದಾಣದ ಕಂಟ್ರೋಲರ್ ಪರಶುರಾಮ್ ಬಣ್ಣದ್, ಗ್ರಾಪಂ ಮಾಜಿ ಅಧ್ಯಕ್ಷ ವೀರನಗೌಡ ಮಾಲಿ ಪಾಟೀಲ್, ವೆಂಕಣ್ಣ ಸಾಹುಕಾರ್, ಸೋಮಶೇಖರಪ್ಪ ತಳವಾರ, ದೊಡ್ಡಪ್ಪ ಮೊಕಾಶಿ, ಬಸವರಾಜ್ ಪಾಟೀಲ್, ಯಲ್ಲಪ್ಪ ಮಡಿವಾಳ, ದೊಡ್ಡನಗೌಡ ಗಾದಿಗನೂರು, ಮಲ್ಲನಗೌಡ ಮಾಲಿಪಾಟೀಲ್, ವಿಶ್ವನಾಥ ಮೊಕಾಶಿ, ಕಲ್ಲನಗೌಡ ಮಾಲಿಪಾಟೀಲ್, ರಮೇಶ ಬಸಾಪಟ್ಟಣ, ದೊಡ್ಡಪ್ಪ ಪನ್ನಾಪುರ, ಅಮರೇಶ ಗೋಡಿನಾಳ, ಆಂಜನೇಯ ಉಪ್ಪಾರ, ಚನ್ನಬಸವ ಮಾಲಿ ಪಾಟೀಲ್ ಇನ್ನಿತರರು ಇದ್ದರು.