ಸಾರಾಂಶ
ಅನಧಿಕೃತವಾಗಿ ಟೋಲ್‌ನಲ್ಲಿ ಬಸ್‌ಗಳಿಂದ ಹೆಚ್ಚುವರಿ ಸುಂಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಕೆನರಾ ಬಸ್ ಮಾಲಕರ ಸಂಘ ಹಾಗು ಕರಾವಳಿ ಬಸ್ ಮಾಲಕರ ಸಂಘ ಫೆ.5 ರಂದು ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಅನಧಿಕೃತವಾಗಿ ಟೋಲ್‌ನಲ್ಲಿ ಬಸ್‌ಗಳಿಂದ ಹೆಚ್ಚುವರಿ ಸುಂಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಕೆನರಾ ಬಸ್ ಮಾಲಕರ ಸಂಘ ಹಾಗು ಕರಾವಳಿ ಬಸ್ ಮಾಲಕರ ಸಂಘ ಫೆ.5 ರಂದು ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರಾವಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್ ಮಾಹಿತಿ ನೀಡಿದರು.
ಉಡುಪಿಯಿಂದ ಮಂಗಳೂರು ಹಾಗೂ ಕುಂದಾಪುರಕ್ಕೆ ತೆರಳುವ ಬಸ್‌ಗಳಿಗೆ ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಸುಂಕ ಪಾವತಿಸುತ್ತೇವೆ. ಆದರೆ ಟೋಲ್‌ನವರು ಫಾಸ್ಟ್‌ಟ್ಯಾಗ್ ವ್ಯಾಲೆಟ್‌ನಲ್ಲಿರುವ ಹಣವನ್ನು ಹೆಚ್ಚುವರಿಯಾಗಿ ಕಡಿತಗೊಳಿಸುತ್ತಿದ್ದು, ಸುಮಾರು 8-10 ಲಕ್ಷ ರು.ಗಳನ್ನು ಬಸ್ ಮಾಲಕರಿಂದ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಫಾಸ್ಟ್‌ಟ್ಯಾಗ್ ಇನ್ಸೂರೆನ್ಸ್ ಮತ್ತು ವೆಹಿಕಲ್ ಕ್ಲಾಸಿಫಿಕೇಶನ್ ದಾಖಲೆಯ ಪ್ರಕಾರ ಜಿವಿಡ್ಲ್ಯೂ 7,500 ರಿಂದ 12,000 ಕೆ.ಜಿ.ಯವರೆಗೆ 2 ಎಎಕ್ಸ್ಐಎಲ್ ಮಿನಿ ಬಸ್‌ಗಳಾಗಿ ಟ್ಯಾಗ್(5) ಅನ್ನು ಕೊಡುತ್ತಿದ್ದು, ಟೋಲ್ ಪಾಸ್ ಆಗುವಾಗ ಸುಂಕ ಕಡಿತಗೊಳುತ್ತದೆ. ಆದರೆ ಇದನ್ನು ಹೊರತುಪಡಿಸಿ ಒಂದು ಟ್ರಿಪ್ ಗೆ 100-150 ರು.ವರೆಗೆ ಹೆಚ್ಚುವರಿ ಸುಂಕ ಕಡಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆಯೂ ಇದೇ ರೀತಿ ಅಕ್ರಮವಾಗಿ ಸುಂಕ ವಸೂಲಿ ನಡೆಸಿದಾಗ, ಜಿಲ್ಲಾಧಿಕಾರಿ ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಿದ್ದರು. ಈಗ ಮತ್ತೊಮ್ಮೆ ಸಮಸ್ಯೆ ಎದುರಾಗಿದೆ. ಈ ಬಾರಿ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಉಪಾಧ್ಯಕ್ಷ ಸದಾನಂದ ಚಾತ್ರ, ಪ್ರಮುಖರಾದ ಇಮ್ತಿಯಾಜ್ ಅಹಮದ್, ಇಮ್ರಾನ್, ಸಂದೀಪ್, ಜಗನ್ನಾಥ್ ಶೆಟ್ಟಿ ಇದ್ದರು.