ಬಸ್ ತಂಗುದಾಣ ಮಾಯ, ಪ್ರಯಾಣಿಕರ ಪರದಾಟ

| Published : Dec 19 2024, 12:34 AM IST

ಸಾರಾಂಶ

ಪುರ್ತಗೇರಿ ಕ್ರಾಸ್ ಬಳಿಯಿರುವ ಅನ್ನದಾನೇಶ್ವರ ಕಾಲೇಜಿಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸುತ್ತಾರೆ. ಆದರೆ ಈಗ ವಿದ್ಯಾರ್ಥಿಗಳಿಗೆ ಆಶ್ರಯತಾಣವಾಗಿದ್ದ ಬಸ್ ನಿಲ್ದಾಣದ ಜಾಗ ಭಾಗಶಃ ಖಾಸಗಿ ವ್ಯಕ್ತಿಗಳ ಪಾಲಾದಂತಾಗಿದೆ

ಎಸ್.ಎಂ.ಸೈಯದ್ ಗಜೇಂದ್ರಗಡ

ನೂರಾರು ವಿದ್ಯಾರ್ಥಿ ಹಾಗೂ ಪ್ರಯಾಣಿಕರಿಗೆ ಆಶ್ರಯ ತಾಣವಾಗಿದ್ದ ಪುರ್ತಗೇರಿ ಕ್ರಾಸ್‌ ಬಸ್ ನಿಲ್ದಾಣವು ಬಾಣಾಪೂರ-ಗದ್ದನಕೇರಿ ಹೆದ್ದಾರಿ ನಿರ್ಮಾಣ ವೇಳೆ ತೆರವುಗೊಳಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡು ತಿಂಗಳು ಗತಿಸಿದ್ದರೂ ಸಹ ಬಸ್ ನಿಲ್ದಾಣ ಮರು ಸ್ಥಾಪನೆಗೆ ಮನಸ್ಸು ಮಾಡದ ಅಧಿಕಾರಿಗಳು ಇದೀಗ ಅದೇ ಜಾಗದಲ್ಲಿ ಪರವಾನಗಿ ಪಡೆಯದೆ ಅಂಗಡಿಗಳು ತಲೆ ಎತ್ತಿದ್ದರೂ ಸುಮ್ಮನಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ.

ಸಮೀಪದ ರಾಮಾಪುರ ಗ್ರಾಪಂ ವ್ಯಾಪ್ತಿಯ ಪುರ್ತಗೇರಿ ಕ್ರಾಸ್ ಬಳಿ ಹಾದು ಹೋಗಿರುವ ಬಾಣಾಪೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ ೩೬೭ನಿರ್ಮಾಣದ ವೇಳೆ ಕಾಮಗಾರಿ ಉದ್ಧೇಶದಿಂದ ಬಸ್ ತಂಗುದಾಣ ತೆರವುಗೊಳಿಸಲಾಗಿತ್ತು ಎನ್ನಲಾಗಿದೆ. ಆದರೆ ಈಗ ಬಸ್ ನಿಲ್ದಾಣ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ದೊಡ್ಡ, ದೊಡ್ಡ ಹೊಟೇಲ್‌, ಬೀಡಾ ಅಂಗಡಿ ನಿರ್ಮಿಸಿದ್ದು ಫುಟ್‌ಪಾತ್ ಸಹ ಅತಿಕ್ರಮಣ ಮಾಡಿಕೊಂಡಿದ್ದಾರೆ. ಪರಿಣಾಮ ಬಸ್‌ಗಾಗಿ ನಡುರಸ್ತೆಯಲ್ಲಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಿಲ್ಲುವ ದುಸ್ಥಿತಿ ನಿರ್ಮಾಣವಾಗಿದೆ.

ಪುರ್ತಗೇರಿ ಕ್ರಾಸ್ ಬಳಿಯಿರುವ ಅನ್ನದಾನೇಶ್ವರ ಕಾಲೇಜಿಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸುತ್ತಾರೆ. ಆದರೆ ಈಗ ವಿದ್ಯಾರ್ಥಿಗಳಿಗೆ ಆಶ್ರಯತಾಣವಾಗಿದ್ದ ಬಸ್ ನಿಲ್ದಾಣದ ಜಾಗ ಭಾಗಶಃ ಖಾಸಗಿ ವ್ಯಕ್ತಿಗಳ ಪಾಲಾದಂತಾಗಿದೆ.

ಹೊಟೇಲ್ ಹಾಗೂ ಬೀಡಾ ಅಂಗಡಿಗಳಲ್ಲಿ ನಿಷೇಧಿತ ಗುಟುಕಾ, ಸಿಗರೇಟ್ ಮಾರಾಟ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳು, ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳ ಎದರೇ ಕೆಲವರು ಗುಟ್ಕಾ ಹಾಕಿಕೊಳ್ಳುತ್ತಿದ್ದರೆ, ಬೀಡಿ, ಸಿಗರೇಟ್‌ ಸೇದು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ದುಶ್ಚಟಗಳು ಪರಿಣಾಮ ಬೀರುವ ಸಾಧ್ಯತೆಯಿದ್ದರೂ ಸಹ ರಾಮಾಪೂರ ಗ್ರಾಪಂ ಆಡಳಿತ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ ಎಂದು ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನೊಟೀಸ್, ಮೌಖಿಕ ಎಚ್ಚರಿಕೆಗಿಲ್ಲ ಕಿಮ್ಮತ್ತು: ಪುರ್ತಗೇರಿ ಕ್ರಾಸ್ ಬಳಿ ವ್ಯಾಪಾರ, ವಹಿವಾಟು ನಡೆಸುತ್ತಿರುವ ಅಂಗಡಿಗಳ ಪರವಾನಗಿ ಪಡೆಯಲು ಹಾಗೂ ಅತಿಕ್ರಮಣ ಜಾಗ ಖಾಲಿ ಮಾಡುವಂತೆ ರಾಮಾಪುರ ಗ್ರಾಪಂನಿಂದ ಅಂಗಡಿಕಾರರಿಗೆ ಈಗಾಗಲೇ ೨ ಬಾರಿ ನೊಟೀಸ್‌ ಹಾಗೂ ಮೌಖಿಕ ಎಚ್ಚರಿಕೆ ನೀಡಿದರೂ ಸಹ ವ್ಯಾಪಾರಿಗಳು ಗ್ರಾಪಂ ನೊಟೀಸ್‌ಗೆ ಕ್ಯಾರೆ ಎನ್ನುತ್ತಿಲ್ಲ. ಬದಲಾಗಿ ಜಾಗದ ಮಾಲಕರಿಗೆ ನಾವು ಬಾಡಿಗೆ ನೀಡುತ್ತಿದ್ದೇವೆ. ನೀವು ಅವರಿಗೆ ನೊಟೀಸ್‌ ನೀಡಿ ನಮಗೇಕೆ ಎಂದು ಅಧಿಕಾರಿಗಳಿಗೆ ಪ್ರತಿವಾದಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ನೊಟೀಸ್‌ ಮೇಲೆ ನೊಟೀಸ್‌ ನೀಡಿ ಕಾನೂನು ಕ್ರಮದ ಎಚ್ಚರಿಕೆಯ ಮೊರೆ ಹೋಗಿದ್ದಾರೆ.

ರಾಮಾಪೂರ ಗ್ರಾಪಂ ವ್ಯಾಪ್ತಿಯ ಪುರ್ತಗೇರಿ ಕ್ರಾಸ್ ಬಳಿ ನಿರ್ಮಾಣವಾಗಿರುವ ಅಂಗಡಿಗಳಿಗೆ ಪರವಾನಗಿ ಹಾಗೂ ಅತಿಕ್ರಮಣ ತೆರವಿಗೆ ನೊಟೀಸ್‌ ನೀಡಲಾಗಿದ್ದು, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಬಿ.ಎನ್. ಇಟಗಿಮಠ ತಿಳಿಸಿದ್ದಾರೆ.ಪುರ್ತಗೇರಿ ಕ್ರಾಸ್ ಬಳಿಯ ಬಸ್ ನಿಲ್ದಾಣ ಕಾಮಗಾರಿ ವೇಳೆ ತೆರವುಗೊಳಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಜಾಗದಲ್ಲಿ ನಿರ್ಮಾಣವಾಗಿರುವ ಅಂಗಡಿಗಳಿಗೆ ಪರವಾನಗಿ ಪಡೆಯಲು ಹಾಗೂ ಅತಿಕ್ರಮಣದಿಂದ ಹಿಂದೆ ಸರಿಯುವಂತೆ ಈಗಾಗಲೇ ನೊಟೀಸ್‌ ಜತೆಗೆ ಜಾಗೃತಿ ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಾಪೂರ ಗ್ರಾಪಂ ಸದಸ್ಯ ಬಾಳಾಜಿರಾವ್ ಭೋಸ್ಲೆ ತಿಳಿಸಿದ್ದಾರೆ.