ಆದಾಯವಿಲ್ಲವೆಂದು ಬಸ್‌ ನಿಲ್ದಾಣದ ಶೌಚಾಲಯಕ್ಕೆ ಬೀಗ

| Published : Jun 23 2025, 11:47 PM IST / Updated: Jun 23 2025, 11:48 PM IST

ಸಾರಾಂಶ

ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದ ಶೌಚಾಲಯ ಬಳಕೆಗೆ ನಿರ್ವಹಣೆ ಪಡೆದ ಗುತ್ತಿಗೆದಾರರು ಶುಲ್ಕ ವಿಧಿಸಿದ್ದಾರೆ. ಮಹಿಳಾ ಶೌಚಾಲಯಕ್ಕೆ ಶುಲ್ಕವಿಧಿಸಿದ್ದರೂ ನಿರೀಕ್ಷಿತ ಆದಾಯ ಬರುತ್ತಿದೆ. ಪುರುಷರ ಶೌಚಾಲಯಕ್ಕೆ ಶುಲ್ಕವಿಲ್ಲದೆ ಇರುವುದರಿಂದ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಕೊಪ್ಪಳ:

ನಗರದ ಕೇಂದ್ರೀಯ ಬಸ್ ನಿಲ್ದಾಣದ ಪುರುಷರ ಶೌಚಾಲಯಕ್ಕೆ ನಿರ್ವಹಣೆ ಕೊರತೆಯಿಂದ ಒಂದು ತಿಂಗಳಿಂದ ಬೀಗ ಜಡಿದಿದ್ದು ಸಾವಿರಾರು ಪ್ರಯಾಣಿಕರು ಬಯಲನ್ನೇ ಆಶ್ರಯಿಸಬೇಕಿದೆ. ಮಹಿಳಾ ಶೌಚಾಲಯವನ್ನು ಮಾತ್ರ ತೆರಲಾಗಿದೆ.

ಈ ಬಸ್‌ ನಿಲ್ದಾಣದಿಂದ ನಿತ್ಯವೂ ನೂರಾರು ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು ನಿತ್ಯವೂ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಆದರೆ, ನಿರ್ವಹಣೆ ನೆಪ ಇಟ್ಟುಕೊಂಡು ಪುರುಷರ ಶೌಚಾಲಯಕ್ಕೆ ಬೀಗ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಾರಿಗೆ ನಿಯಂತ್ರಣಕರು ಬೀಗ ತೆಗೆಸಿ ಜನರ ಬಳಕೆಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ದುರ್ನಾತ:

ಬಸ್‌ ನಿಲ್ದಾಣದ ಒಳಗಿನ ಹಾಗೂ ಆವರಣದಲ್ಲಿನ ಶೌಚಾಲಯಕ್ಕೆ ಬೀಗ ಜಡಿದಿರುವುದರಿಂದ ಪುರುಷ ಪ್ರಯಾಣಿಕರು ತಮ್ಮ ದೇಹಬಾಧೆಯನ್ನು ಬಯಲಿನಲ್ಲಿ ತೀರಿಸಿಕೊಳ್ಳುತ್ತಿದ್ದಾರೆ. ಇದರಿಂದ ನಿಲ್ದಾಣ ದುರ್ನಾತ ಬೀರುತ್ತಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್‌ಗಳಿಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದಾಯವಿಲ್ಲದೆ ಬೀಗ:

ಶೌಚಾಲಯ ಬಳಕೆಗೆ ನಿರ್ವಹಣೆ ಪಡೆದ ಗುತ್ತಿಗೆದಾರರು ಶುಲ್ಕ ವಿಧಿಸಿದ್ದಾರೆ. ಮಹಿಳಾ ಶೌಚಾಲಯಕ್ಕೆ ಶುಲ್ಕವಿಧಿಸಿದ್ದರೂ ನಿರೀಕ್ಷಿತ ಆದಾಯ ಬರುತ್ತಿದೆ. ಪುರುಷರ ಶೌಚಾಲಯಕ್ಕೆ ಶುಲ್ಕವಿಲ್ಲದೆ ಇರುವುದರಿಂದ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಶೌಚಾಲಯಕ್ಕೆ ಗುತ್ತಿಗೆದಾರರು ಬೀಗ ಜಡಿದಿದ್ದರೂ ಸಾರಿಗೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಅವರನ್ನು ಪ್ರಶ್ನಿಸುತ್ತಿಲ್ಲ. ಈ ಕುರಿತು ಪ್ರಯಾಣಿಕರು ಪ್ರಶ್ನಿಸಿದರೆ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬೇಕಿದ್ದರೇ ಮೇಲಾಧಿಕಾರಿಗಳನ್ನು ಕೇಳಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಷರ ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ ಸಮಸ್ಯೆಯಾಗಿದ್ದರೂ ಸಹ ಕೆಎಸ್ ಆರ್ ಟಿಸಿ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಿ ಇದನ್ನು ಇತ್ಯರ್ಥ ಮಾಡುವ ಗೋಜಿಗೆ ಹೋಗಿಲ್ಲ. ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಪ್ರಯಾಣಿಕರು ಬೀಗ ಹಾಕಿರುವ ಕುರಿತು ಕೇಳಿದರೂ ಅದಕ್ಕೂ ಉತ್ತರಿಸುವುದಿಲ್ಲ. ಮೇಲಾಧಿಕಾರಿಗಳನ್ನು ಕೇಳಿಕೊಳ್ಳಿ ಎಂದು ಬಸ್ ನಿಲ್ದಾಣದ ಸಿಬ್ಬಂದಿ ಉತ್ತರಿಸುತ್ತಾರೆ.ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪುರುಷರ ಶೌಚಾಲಯಕ್ಕೆ ಬೀಗ ಜಡಿದು ತಿಂಗಳಾಗಿದ್ದರೂ ಸಾರಿಗೆ ಅಧಿಕಾರಿಗಳು ಅದನ್ನು ಗುತ್ತಿಗೆದಾರರಿಗೆ ತೆಗೆಸುತ್ತಿಲ್ಲ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ಪ್ರಕಾಶ ಕೊಣಿಮನಿ ಕಾಲೇಜು ವಿದ್ಯಾರ್ಥಿ