ವಿದ್ಯಾರ್ಥಿಗಳಿಗೆ ನಿತ್ಯ ತಪ್ಪದ ಬಸ್ಸಿನ ಗೋಳು

| Published : Feb 08 2024, 01:33 AM IST

ಸಾರಾಂಶ

ತಾಲೂಕು ಕೇಂದ್ರವಾಗಿ ದಶಕಗಳೇ ಗತಿಸಿದರೂ ತಾಲೂಕು ಕೇಂದ್ರಕ್ಕೆ ಬರಲು-ಹೋಗಲು ಸಮರ್ಪಕವಾಗಿ ಬಸ್ ಸಂಚಾರ ವ್ಯವಸ್ಥೆಯಿಲ್ಲದೆ ನಿತ್ಯ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಹ ದುಸ್ಥಿತಿ ಬಂದಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕು ಕೇಂದ್ರವಾಗಿ ದಶಕಗಳೇ ಗತಿಸಿದರೂ ತಾಲೂಕು ಕೇಂದ್ರಕ್ಕೆ ಬರಲು-ಹೋಗಲು ಸಮರ್ಪಕವಾಗಿ ಬಸ್ ಸಂಚಾರ ವ್ಯವಸ್ಥೆಯಿಲ್ಲದೆ ನಿತ್ಯ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಹ ದುಸ್ಥಿತಿ ಬಂದಿದೆ.

ನೂತನ ತಾಲೂಕಿಗೆ ಅರೆಬರೆ ಕಚೇರಿಗಳ ಹೊರತಾಗಿ ಪೂರ್ಣ ಪ್ರಮಾಣದ ಕಚೇರಿಗಳನ್ನು ಆರಂಭಿಸದ ಸರ್ಕಾರ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿ ಆರಂಭಿಸದೇ ತಾಲೂಕು ಕೇಂದ್ರದಲ್ಲಿ ಇಲ್ಲಗಳ ಆಗರವನ್ನೇ ಸೃಷ್ಟಿಸುತ್ತಿದೆ. ತಾಲೂಕಿನ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ವಿದ್ಯಾರ್ಜನೆಗೆ ರಬಕವಿ-ಬನಹಟ್ಟಿಯ ವಿವಿಧ ಶಾಲೆ-ಕಾಲೇಜುಗಳಿಗೆ ಬರುತ್ತಾರೆ. ಆದರೆ, ಇಲ್ಲಿಗೆ ಬಂದು ಹೋಗಲು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ.

ಈ ಮಧ್ಯೆ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಹೆಚ್ಚುವರಿ ಬಸ್‌ ಓಡಿಸುತ್ತಿಲ್ಲ. ಸಾರಿಗೆ ಇಲಾಖೆ ಮೊದಲಿದ್ದ ನಾಲ್ಕು ಬಸ್‌ಗಳ ಜಾಗದಲ್ಲಿ ಈಗ ಒಂದೇ ಬಸ್ ಓಡಿಸುವ ಮೂಲಕ ಆದಾಯ ಸರಿದೂಗಿಸಿಕೊಳ್ಳುವ ಸರ್ಕಸ್‌ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಎಲ್ಲ ಕಾರಣಗಳಿಂದ ಬಸ್‌ಗಳು ಭರ್ತಿಯಾಗಿ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ವೇಳೆಗೆ ತರಗತಿಗೆ ಹಾಜರಾಗಲಾರದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಸರ್ವ ಶಿಕ್ಷಣ ಅಭಿಯಾನದ ಮೂಲ ಉದ್ದೇಶಕ್ಕೆ ಚ್ಯುತಿ ಬಂದಿದೆ.

ತಾಲೂಕಿನ ಹನಗಂಡಿ, ತೇರದಾಳ, ತಮದಡ್ಡಿ, ಗೊಲಬಾಂವಿ, ಚಿಮ್ಮಡ, ಮಹಾಲಿಂಗಪುರ, ಢವಳೇಶ್ವರ, ಸಮೀರವಾಡಿ, ಜಗದಾಳ, ನಾವಲಗಿ, ಯಲ್ಲಟ್ಟಿ, ಕಲ್ಲೊಳ್ಳಿ, ಮದನಮಟ್ಟಿ, ಹಳಿಂಗಳಿ ಸೇರಿದಂತೆ ಹೀಗೆ ಹತ್ತು ಹಲವು ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ತಾಲೂಕು ಕೇಂದ್ರಕ್ಕೆ ಬರುತ್ತಾರೆ. ಆದರೆ, ಇಲ್ಲಿಗೆ ಬರಲು ಹಾಗೂ ಶಾಲೆ ಮುಗಿಸಿ ಮರಳಿ ಮನೆಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಇದ್ದ ಬಸ್‌ಗಳಲ್ಲಿಯೇ ನೇತಾಡಿಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಇನ್ನು ಬಸ್‌ನಲ್ಲಿ ನಿಂತು ಹೋಗಲು ಸ್ಥಳಾವಕಾಶ ದೊರೆಯದ ಮಕ್ಕಳು ದಿನನಿತ್ಯ ಹಿಡಿಶಾಪ ಹಾಕುತ್ತ ಅಳುತ್ತ ಪೋಷಕರಿಗೆ ಫೋನ್ ಮಾಡಿ ಕರೆದೊಯ್ಯುವಂತೆ ಗೋಗರೆಯುವ ದೃಶ್ಯಗಳೂ ಮಾಮೂಲಿಯಾಗಿವೆ.

ತಾಲೂಕು ಕೇಂದ್ರವಾಗಿದ್ದರಿಂದ ರಬಕವಿ-ಬನಹಟ್ಟಿಯಿಂದಲೇ ನೇರವಾಗಿ ಬಸ್‌ಗಳನ್ನು ಗ್ರಾಮೀಣ ಭಾಗಗಳಿಗೆ ಬಿಡುವ ವ್ಯವಸ್ಥೆಯಾಗಬೇಕು. ಶಕ್ತಿ ಯೋಜನೆಯಿಂದ ಎಲ್ಲ ಬಸ್‌ಗಳು ಭರ್ತಿಯಾಗಿಯೇ ಓಡುತ್ತಿದ್ದು, ಸಮೀಪದ ಜಮಖಂಡಿ, ತೇರದಾಳ, ಮಹಾಲಿಂಗಪುರ, ಮುಧೋಳ ಸುತ್ತಲಿಲ ಪ್ರದೇಶಗಳಿಂದ ಆಗಮಿಸುವ ಜನತೆಗೂ ತೀವ್ರ ಸಮಸ್ಯೆಯಾಗಿದೆ. ನಿತ್ಯ ದುಡ್ಡು ಕೊಟ್ಟು ಪ್ರಯಾಣಿಸುವ ಪುರುಷ ನೌಕರರು, ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ಮತ್ತು ಬೆಳಗಾವಿ ಮೊದಲಾದೆಡೆ ಸಂಚರಿಸುವ ಪ್ರಯಾಣಿಕರು ಸ್ತ್ರೀಶಕ್ತಿ ಎದುರು ಕಂಗಾಲಾಗಿದ್ದು, ಖಾಸಗಿ ವಾಹನಗಳ ಓಡಾಟಕ್ಕಾದರೂ ಸರ್ಕಾರ ಅವಕಾಶ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಬೇಕೆಂದು ಅಲವತ್ತುಕೊಂಡಿದ್ದಾರೆ.

ಹೆಚ್ಚುವರಿ ಬಸ್ ಓಡಿಸಲು ಆಗ್ರಹ:

ಈ ಹಿಂದೆ ಕಾರ್ಯಾಚರಿಸುತ್ತಿದ್ದ ಬಸ್‌ಗಳ ಸೇವೆ ಪುನಾರಂಭಿಸಬೇಕು ಮತ್ತು ಸ್ತ್ರೀಶಕ್ತಿ ಯೋಜನೆಯಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಮುಖವಾಗಿ ಸ್ಥಗಿತಗೊಂಡಿರುವ ಚಿಕ್ಕೋಡಿ-ಪರಳಿ, ಮುಧೋಳ-ಮುಂಬೈ, ಬೆಳಗಾವಿ-ಲಾತೂರ, ವಿಜಯಪುರ-ಪಣಜಿ, ತೇರದಾಳ-ಉಡುಪಿ, ಬನಹಟ್ಟಿ-ಬೆಂಗಳೂರು ಸೇರಿದಂತೆ ಹಲವಾರು ಬಸ್‌ಗಳ ಸಂಚಾರ ಪುನಾರಂಭಿಸುವಂತೆ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಮುರಳೀಧರ ಕಾಬರಾ ಒತ್ತಾಯಿಸಿದ್ದಾರೆ.

-----------ಕೋಟ್‌ಸ್ತ್ರೀಶಕ್ತಿ ಯೋಜನೆ ಜಾರಿಯಾದಾಗಿನಿಂದ ನಿಗದಿತ ಸಮಯದಲ್ಲಿ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ದಿನವೂ ತೊಂದರೆಯಾಗುತ್ತಿದೆ. ಪ್ರಯಾಣಿಕರ ದಟ್ಟನೆ ಕಾರಣ ಬಸ್‌ಗಳಲ್ಲಿ ನಿಲ್ಲಲೂ ಜಾಗ ಸಿಗದೇ ಬಳಿಕ ಬಂದ ಬಸ್‌ನಲ್ಲಿ ಹರಸಾಹಸ ಪಟ್ಟು ತೆರಳಿದರೂ ಸಮಯ ಮೀರಿ ತರಗತಿಗೆ ತೆರಳುವಂತಾಗಿದೆ. ನಿತ್ಯ ತರಗತಿಗಳಿಗೆ ಗೈರಾಗುವ ಮೂಲಕ ತುಂಬ ತೊಂದರೆ ಅನುಭವಿಸುತ್ತಿದ್ದೇವೆ.

- ಜ್ಯೋತಿ ಕಾಡದೇವರ ವಿದ್ಯಾರ್ಥಿನಿ ಬನಹಟ್ಟಿ.

---

ಸ್ತ್ರೀಶಕ್ತಿ ಯೋಜನೆ ಜಾರಿಗೊಳಿಸಿದ ಸರ್ಕಾರ ಸಂಚಾರ ದಟ್ಟಣೆಯ ಕುರಿತು ಪೂರ್ವದಲ್ಲೇ ಯೋಚಿಸಿ ಹೆಚ್ಚುವರಿ ಬಸ್‌ ಬಿಡಬೇಕಿತ್ತು. ಸಾರಿಗೆ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಮೊದಲಿದ್ದ ರೂಟ್‌ ರದ್ದುಪಡಿಸಿದ್ದಲ್ಲದೆ ಹೆಚ್ಚುವರಿ ಬಸ್‌ಗಳ ಓಡಿಸದೆ ಕೆಲವೇ ಬಸ್‌ಗಳಲ್ಲಿ ಎಲ್ಲರನ್ನೂ ಸಾಂತ್ವನಗೊಳಿಸುವ ಮೂರ್ಖತನಕ್ಕಿಳಿದಿದೆ. ಸಾರಿಗೆ ನಿಗಮಕ್ಕೆ ಮಹಿಳಾ ಪ್ರಯಾಣಿಕರ ದುಡ್ಡು ತುಂಬಬಹುದಾದರೂ ದುಡ್ಡು ಕೊಟ್ಟು ಪ್ರಯಾಣಿಸುವ ಪುರುಷ ಪ್ರಯಾಣಿಕರ ಸ್ಥಿತಿ ನರಕಕ್ಕೂ ಕಡಿಮೆಯಲ್ಲ. ಸಾಲದ್ದಕ್ಕೆ ಮಹಿಳಾ ಪ್ರಯಾಣಿಕರ ಶಕ್ತಿ ಸಹಿಸಿಕೊಳ್ಳಬೇಕಿದೆ. ಸರ್ಕಾರ ತನಗೆ ಸಾಧ್ಯವಾಗದಿದ್ದರೆ, ಸ್ಥಳೀಯ ಖಾಸಗಿ ವಾಹನಗಳಿಗೆ ಅನುಮತಿ ನೀಡಿ ಪುರುಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು.

- ಶಿವಾನಂದ ಮಠದ ಚಹಾಪುಡಿ ವರ್ತಕರು, ರಬಕವಿ.