ದಿವ್ಯಾಂಗರಿಗೆ ಶೇ.5 ಅನುದಾನ ಮೀಸಲು ಕಡ್ಡಾಯ: ಡಾ.ಎಂ.ವಿ.ವೆಂಕಟೇಶ್

| Published : Feb 08 2024, 01:33 AM IST

ಸಾರಾಂಶ

ವಿಕಲಚೇತನ ವ್ಯಕ್ತಿಗಳಿಗೆ ಸರ್ಕಾರದ ಯೋಜನೆಗಳ ಮೂಲಕ ಒಂದು ಪರಿಪೂರ್ಣವಾದ ಮತ್ತು ಉತ್ತಮವಾದ ಬದುಕನ್ನು ಕಟ್ಟಿಕೊಡಬೇಕು ಎಂದು ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಮಾಜದಲ್ಲಿ ರೀತಿಯ ವಿಕಲಚೇತನರನ್ನು ನಾವು ಕಾಣುತ್ತೇವೆ, ಎಲ್ಲರಂತೆ ಸಮಾನರಾಗಿ ಇವರು ಸಹ ಮುಖ್ಯವಾಹಿನಿ ಯಲ್ಲಿರಬೇಕೆಂದು ಸರ್ಕಾರವು ಶೇ.5 ರಷ್ಟು ಅನುದಾನವನ್ನು ಮೀಸಲಿರಿಸಲು ಆದೇಶಿಸಿದ್ದು ಎಲ್ಲಾ ಇಲಾಖೆಗಳು ಇವರ ಅಭಿವೃದ್ಧಿಗಾಗಿ ಅನುದಾನ ಮೀಸಲಿರಿಸುವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಬುಧವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಮತ್ತು ಸ್ಫೂರ್ತಿ ಸಂಸ್ಥೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಇದು ಒಂದು ಉತ್ತಮವಾದ ಕಾರ್ಯಕ್ರಮವಾಗಿದೆ. ವಿಕಲಚೇತನರಗಿರುವಂತಹ ವ್ಯಕ್ತಿಗಳಿಗೆ ಒಂದು ಪರಿಪೂರ್ಣವಾದ ಮತ್ತು ಉತ್ತಮವಾದ ಬದುಕನ್ನು ಕಟ್ಟಿಕೊಡಬೇಕು. ಸರ್ಕಾರದ ಯೋಜನೆಗಳ ಮೂಲಕ ಇಲಾಖೆಗಳ ವತಿಯಿಂದ ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಒಂದು ದಿನ ಚಿಂತನ, ಮಂತನ ನಡೆಸಿ ವಿಕಲಚೇತನರಿಗೆ ಅವಶ್ಯಕತೆಗನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಕಾರ್ಯಾಗಾರ ಉತ್ತಮ ವೇದಿಕೆಯಾಗಲಿದೆ ಎಂದರು. ಸಮಾಜದಲ್ಲಿ 21 ಕ್ಕೂ ಹೆಚ್ಚು ವಿವಿಧ ರೀತಿಯ ದಿವ್ಯಾಂಗ ಜನರನ್ನು ಕಾಣುತ್ತೇವೆ, ಈ ಎಲ್ಲ ವಿಶೇಷಚೇತನರ ಧ್ವನಿಗೆ ಬೆಲೆ ಕೂಡಿಸುವಂತಹ ವಾತಾವರಣವನ್ನು ನಮ್ಮ ಸಮಾಜದಲ್ಲಿ ನಿರ್ಮಾಣ ಮಾಡಬೇಕಾಗಿದೆ. ಅವರಿಗೆ ಧ್ವನಿಯನ್ನು ಕೊಡಲು ಸರ್ಕಾರದ ಅನುದಾನದಲ್ಲಿ ಇವರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಅನುಷ್ಟಾನ ಮಾಡಬೇಕಾಗಿದೆ. ಈ ಜನರ ಅಂಗವಿಕಲತೆಯನ್ನು ಸರಿಪಡಿಸಲು ಸಾಧ್ಯವಾಗದಿರಬಹುದು. ಆದರೆ ಇವರ ಜೀವನವನ್ನು ಉತ್ತಮಗೊಳಿಸಲು ನಾವು ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ತಮ್ಮ ಅನುದಾನದಲ್ಲಿ ಶೇ 5 ರಷ್ಟು ಅನುದಾನ ಮೀಸಲಿರಿಸಬೇಕೆಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷಚೇತನರ ಹಕ್ಕುಗಳ ಅಧಿನಿಯಮ 2016 ರಲ್ಲಿ ಆದೇಶಿಸಿರುವಂತೆ ವಿಶೇಷಚೇತನ ವ್ಯಕ್ತಿಗಳಿಗೆ ಅವಶ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವ ಮೂಲಕ ಅವರು ಇತರರಂತೆ ಸ್ವಾವಲಂಬಿಗಳಾಗಿ ಘನತೆಯಿಂದ ಬದುಕಲು ಬೇಕಾದ ಪೂರಕ ವಾತಾವರಣ ಕಲ್ಪಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ವಿಶೇಷಚೇತನರ ಹಕ್ಕುಗಳ ಅಧಿನಿಯಮ 2016 ರ ಕಲಂ 2 ರ ಷೆಡ್ಯೂಲ್-1 ರಲ್ಲಿ ದೈಹಿಕ ವಿಕಲತೆ, ಬೌದ್ಧಿಕ ವಿಕಲತೆ, ಮಾನಸಿಕ ವರ್ತನೆಗಳು, ದೀರ್ಘಕಾಲಿಕ ನರವೈಜ್ಞಾನಿಕ ಸ್ಥಿತಿಯಿಂದ ಉಂಟಾದ ಅಂಗ ವೈಕಲ್ಯ, ಬಹುವಿಧ ವಿಕಲತೆ ಅಡಿಯಲ್ಲಿ ಒಟ್ಟು 21 ವಿಶೇಷಚೇತನ ವಿಧಗಳನ್ನು ಪಟ್ಟಿ ಮಾಡಲಾಗಿದೆ ಎಂದರು.

ಕಾಯ್ದೆಯಡಿ ಕಲಂ 3 ರ ಪಟ್ಟಿಯ ಪೈಕಿ ಯಾವುದೇ ರೀತಿಯ ಅಂಗವೈಕಲ್ಯವಿರುವ ವಿಶೇಷಚೇತನ ವ್ಯಕ್ತಿ ಮತ್ತು, ವ್ಯಕ್ತಿಗಳು ಸಾರ್ವಜನಿಕ ಸ್ಥಳ ಅಥವಾ ಕಚೇರಿಗಳಲ್ಲಿ ವ್ಯವಹರಿಸಲು ವಿಶೇಷಚೇತನ ಸ್ನೇಹಿ ವಾತಾವರಣ ಮತ್ತು ವ್ಯವಸ್ಥೆಗಳನ್ನು ಹೊಂದುವುದು ಅವರ ಹಕ್ಕಾಗಿರುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳು ವಿಶೇಷಚೇತನರ ಸ್ನೇಹಿ ಪಂಚಾಯತಿಗಳಾಗಿ ಕಾರ್ಯನಿರ್ವಹಿಸುವುದರ ಮೂಲಕ ವಿಶೇಷಚೇತನರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸ್ಫೂರ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಬಿ.ರೂಪ್ಲನಾಯ್ಕ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣಾಧಿಕಾರಿ ಡಾ.ಕೆ.ಪ್ರಕಾಶ, ಮಹಾನಗರ ಪಾಲಿಕೆಯ ಉಪನಿರ್ದೇಶಕಿ ನಳಿನಿ, ವಿ.ಹಿ.ನಾ.ಸ ಇಲಾಖೆಯ ರಾಜ್ಯ ಆಯುಕ್ತ ರಾಜಣ್ಣ, ರಾಷ್ಟ್ರೀಯ ದೃಷ್ಟಿದೋಷರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಂ.ವೀರೇಶ ಇತರರು ಇದ್ದರು.