ಸಾರಾಂಶ
- ಸಚಿವರಿಗೆ ನೂತನ ಖಾಸಗಿ ಬಸ್ ನಿಲ್ದಾಣ ಮಳಿಗೆಗಾರರ ಸಂಘ ಮನವಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಈಗ ಹೊಸ ನಿಲ್ದಾಣ ನಿರ್ಮಿಸಿ, 1 ಮತ್ತು 2ನೇ ಅಂತಸ್ತಿನಲ್ಲಿ ಮಳಿಗೆ ನೀಡಲಾಗಿದೆ. ದಿನಪೂರ್ತಿ ಅಂಗಡಿಯಲ್ಲಿದ್ದರೂ ನಯಾಪೈಸೆ ವ್ಯಾಪಾರವೂ ಆಗುತ್ತಿಲ್ಲ. ಈ ಹಿನ್ನೆಲೆ ನೆಲ ಅಂತಸ್ತಿನಲ್ಲೇ ಮಳಿಗೆಗಳ ಕಟ್ಟಿಸಿಕೊಡಬೇಕು ಎಂದು ಶಾಸಕ, ಸಚಿವರು, ಸಂಸದರಿಗೆ ಒತ್ತಾಯಿಸಿ ಡಾ.ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣ ಮಳಿಗೆಗಳ ವ್ಯಾಪಾರಸ್ಥರ ಸಂಘ ಒತ್ತಾಯಿಸಿತು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, 1976ರಿಂದಲೂ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ತಮಗೆ ಈಗ ಹೊಸದಾಗಿ ನಿರ್ಮಿಸಿದ ಖಾಸಗಿ ಬಸ್ ನಿಲ್ದಾಣದಲ್ಲಿ ನೆಲ ಅಂತಸ್ತಿನಲ್ಲಿ ಜಾಗವಿದ್ದರೂ, ಮಳಿಗೆ ಕಟ್ಟದೇ ಮೇಲಂತಸ್ತುಗಳಲ್ಲಿ ಮಳಿಗೆಗಳನ್ನು ನೀಡಿದ್ದು, ಇದರಿಂದ ತೀವ್ರ ತೊಂದರೆಯಾಗಿದೆ ಎಂದರು.ಪ್ರಧಾನ ಕಾರ್ಯದರ್ಶಿ ಎಲ್.ಹನುಮಂತ ಮಾತನಾಡಿ, ಖಾಸಗಿ ಬಸ್ ನಿಲ್ದಾಣದ ಕೆಲ ಭಾಗದಲ್ಲಿ ಜಾಗವಿದೆ. ಅಲ್ಲಿ ನಮಗೆ ಪುಟ್ಟ ಮಳಿಗೆಗಳನ್ನು ಕಟ್ಟಿಕೊಟ್ಟರೂ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಈಗ ಹಂಚಿಕೆ ಮಾಡಿರುವ ಮೊದಲು, 2ನೇ ಅಂತಸ್ತಿನ ಮಳಿಗೆಗಳಲ್ಲಿ ಯಾವೊಬ್ಬ ಗಿರಾಕಿಯೂ ಬರುತ್ತಿಲ್ಲ. ಹರಾಜು ಮೂಲಕ ಲಕ್ಷಾಂತರ ರು. ಕೊಟ್ಟು ವ್ಯಾಪಾರ ಮಳಿಗೆ ಪಡೆದಿದ್ದೇನೆ. ನಮಗೆ ದಿನವಿಡೀ ಇದ್ದರೂ ಬೋಣಿ ಸಹ ಆಗುತ್ತಿಲ್ಲ. ಪ್ರಯಾಣಿಕರು, ವ್ಯಾಪಾರಸ್ಥರು ಮಹಡಿ ಹತ್ತಿ ಬರದ ಕಾರಣ ನಮಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಮತ್ತೆ ಭೇಟಿ ಮಾಡಲಿದ್ದೇವೆ. ಮಳಿಗೆಗಳನ್ನು ಕಟ್ಟಲು ಅಲ್ಲಿ ಜಾಗವೂ ಇದೆ. ಈ ಹಿಂದೆಯೇ ಸಚಿವರು, ಆಯುಕ್ತರಿಗೆ ಮನವಿ ಮಾಡಿದ್ದೆವು. ಮಳಿಗೆಗಳನ್ನು ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಹ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುವುದಾಗಿ ಹೇಳಿದ್ದರು.ಸಂಘದ ಜಿ.ಸುರೇಶ, ಷರೀಫ್ ಸಾಬ್, ಮಂಜುನಾಥ, ಅಜೀಜ್, ವಸಂತ, ರಫೀಕ್, ಅಬ್ದುಲ್ ಖಾದರ್, ಬಸವರಾಜ, ಹೇಮಾವತಿ, ಮಂಜಪ್ಪ, ಈಶ್ವರ, ಹರ್ಷ, ರುದ್ರೇಶ, ದಿನೇಶ ಶೆಟ್ಟಿ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಸುದ್ದಿಗೋಷ್ಠಿ ಬಳಿಕ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ನಿಲ್ದಾಣದ ಮಳಿಗೆದಾರರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ, ಬೇಡಿಕೆಗಳ ಮನವಿ ಸಲ್ಲಿಸಿದರು.- - - -24ಕೆಡಿವಿಜಿ65:
ದಾವಣಗೆರೆಯಲ್ಲಿ ಸೋಮವಾರ ಡಾ.ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣ ಮಳಿಗೆಗಳ ವ್ಯಾಪಾರಸ್ಥರ ಸಂಘ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.