ತನಗೆ ಕೆಲಸ ಕೊಟ್ಟ ಒಡೆಯನ ಮನೆಗೆ ಸ್ನೇಹಿತರ ಮೂಲಕ ಕನ್ನ ಹಾಕಿಸಿದ್ದ ಉದ್ಯಮಿ ಕಾರು ಚಾಲಕ, ಮನೆಕೆಲಸದಾಳು ಹಾಗೂ ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನಗೆ ಕೆಲಸ ಕೊಟ್ಟ ಒಡೆಯನ ಮನೆಗೆ ಸ್ನೇಹಿತರ ಮೂಲಕ ಕನ್ನ ಹಾಕಿಸಿದ್ದ ಉದ್ಯಮಿ ಕಾರು ಚಾಲಕ, ಮನೆಕೆಲಸದಾಳು ಹಾಗೂ ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಚಂದನ್‌, ಮಂಜುನಾಥ್‌, ಎನ್‌.ನರೇಂದ್ರ ಹಾಗೂ ಬಿಹಾರ ಮೂಲದ ಮಂಜಿತ್‌ ರಾಮ್‌ ಬಂಧಿತರಾಗಿದ್ದು, ಆರೋಪಿಗಳಿಂದ 1.3 ಕೋಟಿ ರು. ಮೌಲ್ಯದ ಚಿನ್ನಾಭರಣ, 4 ಲಕ್ಷ ರು. ನಗದು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ವಡೇರಹಳ್ಳಿಯ ಉದ್ಯಮಿ ಗೋಪಾಲ್ ಶಿಂಧೆ ಅವರ ವಿಲ್ಲಾದಲ್ಲಿ ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಕಳ್ಳತನ ನಡೆದಿತ್ತು. ಈ ಕೃತ್ಯದ ತನಿಖೆಗಿಳಿದ ವಿದ್ಯಾರಣ್ಯಪುರ ಠಾಣೆ ಇನ್ಸ್‌ಪೆಕ್ಟರ್ ಸಿ.ಬಿ. ಶಿವಸ್ವಾಮಿ ನೇತೃತ್ವ ತಂಡ, ಘಟನಾ ಸ್ಥಳವನ್ನು ಪರಾಮರ್ಶಿಸಿದಾಗ ಪರಿಚಿತರ ಕೈವಾಡ ಶಂಕೆ ವ್ಯಕ್ತಪಡಿಸಿದೆ. ಈ ಗುಮಾನಿ ಮೇರೆಗೆ ಶಿಂಧೆ ಅವರ ಕಾರು ಚಾಲಕ ನರೇಂದ್ರ ಹಾಗೂ ಮನೆಕೆಲಸದಾಳು ಮಂಜಿತ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಮಿ ಜೊತೆಯಲ್ಲಿದ್ದೇ ಕಳ್ಳಾಟ!

ರಿಯಲ್ ಎಸ್ಟೇಟ್ ಉದ್ಯಮಿ ಮಹಾರಾಷ್ಟ್ರ ಮೂಲದ ಶಿಂಧೆ ವಡೇರಹಳ್ಳಿ ಸಮೀಪ ತಮ್ಮ ಕುಟುಂಬದ ಜತೆ ವಿಲ್ಲಾ ನೆಲೆಸಿದ್ದಾರೆ. ಕಳೆದೊಂದು ವರ್ಷದಿಂದ ಉದ್ಯಮಿ ಬಳಿ ನರೇಂದ್ರ ಕಾರು ಚಾಲಕನಾಗಿದ್ದರೆ, ವಿಲ್ಲಾದಲ್ಲಿ ಬಿಹಾರದ ಮಂಜಿತ್ ಸಹಾಯಕನಾಗಿದ್ದ. ತಮ್ಮ ಒಡೆಯನ ಶ್ರೀಮಂತಿಕೆ ಬಗ್ಗೆ ತಿಳಿದು ವಿಲ್ಲಾದಲ್ಲಿ ಚಿನ್ನಾಭರಣ ಕಳವಿಗೆ ಇಬ್ಬರು ಹೊಂಚು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.23 ರಂದು ತಮ್ಮ ಕುಟುಂಬ ಸಮೇತ ಮಹಾರಾಷ್ಟ್ರ ಸಿಂಧದುರ್ಗ ಜಿಲ್ಲೆಗೆ ಶಿಂಧೆ ತೆರಳಿದ್ದರು. ಆಗ ಕಾರು ಚಾಲನೆ ಮಾಡಿಕೊಂಡು ನರೇಂದ್ರ ಹೋಗಿದ್ದರೆ, ಉದ್ಯಮಿ ಕುಟುಂಬದ ಜತೆ ಮಂಜಿತ್ ಸಹ ಬಂದಿದ್ದ. ಆ ದಿನವೇ ವಿಲ್ಲಾದಲ್ಲಿ ತನ್ನ ಸ್ನೇಹಿತರ ಮೂಲಕ ಕಳ್ಳತನಕ್ಕೆ ನರೇಂದ್ರ ಸಂಚು ರೂಪಿಸಿ ಕಾರ್ಯರೂಪಕ್ಕಿಳಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಬಿರಿಯಾನಿ ನೀಡಿದ ಸುಳಿವು!

ಒಂದು ವಾರದ ಬಳಿಕ ವಿಲ್ಲಾಗೆ ಶಿಂಧೆ ಕುಟುಂಬ ಮರಳಿದಾಗ ಕಳ್ಳತನ ಕೃತ್ಯ ಗೊತ್ತಾಗಿದೆ. ಕೂಡಲೇ ವಿದ್ಯಾರಣ್ಯಪುರ ಠಾಣೆಗೆ ಅವರು ದೂರು ನೀಡಿದರು. ಈ ವೇಳೆ ನರೇಂದ್ರ ಸಹ ಜೊತೆಯಲ್ಲೇ ಇದ್ದ. ಪೊಲೀಸರು ತನಿಖೆ ಆರಂಭಿಸಿದರು. ತಮ್ಮ ಮೇಲೆ ಅನುಮಾನ ಮೂಡದಂತೆ ಕಾರು ಚಾಲಕ ಹಾಗೂ ಮನೆಕೆಲಸದಾಳು ವರ್ತಿಸುತ್ತಿದ್ದರು. ಪ್ರಾರಂಭದಲ್ಲಿ ಪೊಲೀಸರಿಗೆ ಸಹ ಇಬ್ಬರ ಮೇಲೆ ಶಂಕೆ ಮೂಡಿಲ್ಲ. ಆದರೆ ಕೊನೆಗೆ ಬಿರಿಯಾನಿ ಅವರಿಗೆ ಜೈಲಿನ ಹಾದಿ ತೋರಿಸಿದೆ.

ಈ ಘಟನಾ ಸ್ಥಳದ ಸುತ್ತಮುತ್ತಲ ಸುಮಾರು 100ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದರು. ಆಗ ಹೋಟೆಲ್‌ವೊಂದರಲ್ಲಿ ಇಬ್ಬರು ಅವಸರದಲ್ಲಿ ಬಿರಿಯಾನಿ ಸವಿದು ತೆರಳಿದ್ದ ದೃಶ್ಯ ಪತ್ತೆಯಾಗಿದೆ. ಈ ನಡವಳಿಕೆ ಮೇಲೆ ಶಂಕೆಗೊಂಡ ಪೊಲೀಸರು, ಆ ಯುವಕರ ಜಾಡು ಹಿಡಿದಾಗ ಶಿಂಧೆ ಕೆಲಸಗಾರರ ಕಳ್ಳಾಟ ಬಯಲಾಗಿದೆ.