ಅರಿಸಿನಗುಪ್ಪೆ ಗ್ರಾಮದಲ್ಲಿ 18 ಎಕರೆಯಲ್ಲಿ ಬೆಣ್ಣೆ ಹಣ್ಣಿನ ಕೃಷಿ!

| Published : Feb 18 2024, 01:34 AM IST

ಸಾರಾಂಶ

ಎಂಬಿಎ ಪದವೀಧರ ತಮ್ಮ ತಂದೆ ಮಾಡಿದ ಕೃಷಿಯ ಹಾದಿಯನ್ನೇ ಮುಂದುವರೆಸುವಲ್ಲಿ ಒಲವು ತೋರಿದ್ದಾರೆ.

ವಿಘ್ನೇಶ್‌ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿಕೃಷಿಯತ್ತ ಯುವಕರು ಹಿಂದೆ ಸರಿಯುತ್ತಿರುವುದು ಸಾಮಾನ್ಯ. ಆದರೆ ಇಲ್ಲಿ ಎಂಬಿಎ ಪದವೀಧರ ತಮ್ಮ ತಂದೆ ಮಾಡಿದ ಕೃಷಿಯ ಹಾದಿಯನ್ನೇ ಮುಂದುವರೆಸುವಲ್ಲಿ ಒಲವು ತೋರಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಅರಿಸಿನಗುಪ್ಪೆಯ ಸಾಧಕ ಕೃಷಿಕ ಬೇಬಿ ಅವರು ತಮಗಿದ್ದ ಸುಮಾರು 18 ಎಕರೆ ಕಾಫಿ ತೋಟದಲ್ಲಿ ಕಾಫಿ ಗಿಡಗಳನ್ನು ತೆರವುಗೊಳಿಸಿ ಬೆಣ್ಣೆಹಣ್ಣಿನ ಕೃಷಿಯನ್ನು ಆರಂಭಿಸಿದರು. ಈಗ ಮಗ ಬಿಪಿನ್ ಥೋಮಸ್ ಅವರು ಎಂಬಿಎ ವ್ಯಾಸಂಗ ಮುಗಿಸಿ ಬೆಣ್ಣೆಹಣ್ಣಿನ ಕೃಷಿಯಲ್ಲೇ ನಿರತರಾಗಿದ್ದಾರೆ. ತಮ್ಮ 18 ಎಕರೆ ತೋಟದಲ್ಲಿ ಸುಮಾರು 3 ಸಾವಿರ ಬೆಣ್ಣೆಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದು, ಈಗ ಅದರ ಫಸಲನ್ನು ತೆಗೆಯುತ್ತಿದ್ದಾರೆ. ವಾರ್ಷಿಕವಾಗಿ ಸುಮಾರು 30 ಲಕ್ಷ ರು. ಆದಾಯದ ನಿರೀಕ್ಷೆಯಲ್ಲಿದ್ದಾರೆ. ಇವರಲ್ಲಿ 20ಕ್ಕೂ ಅಧಿಕ ಬಗೆಯ ಬೆಣ್ಣೆಹಣ್ಣಿನ ತಳಿಗಳಿದ್ದು, ಒಂದೊಂದು ಕೂಡ ವಿಭಿನ್ನ ಗಾತ್ರ, ಆಕಾರ ಹಾಗೂ ಬಣ್ಣದಲ್ಲಿ ಬದಲಾವಣೆಯಿಂದ ಕೂಡಿರುವುದು ವಿಶೇಷ. ಇದೀಗ ಬೇಸಿಗೆಯಾಗಿರುವುದರಿಂದ ಬೆಣ್ಣೆಹಣ್ಣಿಗೆ ಭಾರಿ ಬೇಡಿಕೆ ಇರುವುದರಿಂದ ಇವರ ತೋಟಕ್ಕೆ ನಿತ್ಯವೂ ವಿವಿಧ ಭಾಗಗಳಿಂದ ವ್ಯಾಪಾರಿಗಳು ಬಂದು ದಿನಕ್ಕೆ ಸಾವಿರಾರು ಕೆ.ಜಿ. ಬೆಣ್ಣೆಹಣ್ಣನ್ನು ಕೊಯ್ಲು ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೇರಳದ ವಯನಾಡು, ಕೊಡಗಿನ ಸೋಮವಾರಪೇಟೆಯಿಂದ ಬೆಣ್ಣೆಹಣ್ಣಿನ ಬೀಜದ ಗಿಡಗಳನ್ನು ಖರೀದಿಸಿದರು. ಒಂದು ಗಿಡಕ್ಕೆ ಅಂದು 130 ರು. ಬೆಲೆ ಇತ್ತು. ನಾಟಿ ಮಾಡಿ 2.5 ವರ್ಷದ ಬೀಜದ ಗಿಡದಲ್ಲೇ ಇವರಿಗೆ ಸುಮಾರು ಇದೀಗ 800ಕ್ಕೂ ಅಧಿಕ ಗಿಡಗಳು ಫಸಲು ನೀಡುತ್ತಿರುವುದರಿಂದ ಈಗಾಗಲೇ ಆದಾಯವನ್ನು ಗಳಿಸುತ್ತಿದ್ದಾರೆ. ಫೆಬ್ರವರಿಯಿಂದ ಹಣ್ಣು ಆರಂಭವಾಗಿ ಆಗಸ್ಟ್ ತಿಂಗಳ ವರೆಗೆ ಫಸಲು ದೊರಕುತ್ತಿದೆ. ಮರದಲ್ಲಿ ಬಿಡುವ ಫಸಲಿನ ಹೂವಿಗೆ ಪರಾಗಸ್ಪರ್ಶಕ್ಕಾಗಿ ಹತ್ತಕ್ಕೂ ಅಧಿಕ ಜೇನು ಪೆಟ್ಟಿಗೆಗಳನ್ನು ಕೂಡ ಇಟ್ಟಿದ್ದು, ಹೂವಿನ ಪರಾಗಸ್ಪರ್ಶಕ್ಕೂ ಅನುಕೂಲವಾಗಿದೆ. ಇದರಿಂದ ಅಧಿಕ ಫಸಲು ಪಡೆಯುತ್ತಿದ್ದಾರೆ. ಗಿಡಗಳಿಗೆ ಎರಡು ದಿನಕ್ಕೊಮ್ಮೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಡ್ರಿಪ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಗಿಡಗಳಿಗೆ ಸಗಣಿ, ಕೋಳಿ ಹಾಗೂ ಕುರಿ ಸಾವಯವ ಗೊಬ್ಬರವನ್ನೇ ನೀಡುತ್ತಿರುವುದರಿಂದ ಗಿಡಗಳಲ್ಲಿ ಹೆಚ್ಚಿನ ರೋಗ ಬಾಧೆಯೂ ಕಂಡುಬಂದಿಲ್ಲ. ಬೇಸಗೆ ಅವಧಿಯಲ್ಲಿ ಫಸಲು ಬಂದರೆ ಈ ಬೆಣ್ಣೆಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಕೆ.ಜಿಯೊಂದಕ್ಕೆ 100 ರು. ರಿಂದ 200 ರು. ವರೆಗೂ ನಮ್ಮಲ್ಲಿ ವ್ಯಾಪಾರಸ್ಥರು ಕೊಂಡೊಯ್ಯುತ್ತಾರೆ. ಆದರೆ ಮಳೆಗಾಲದಲ್ಲಿ ಬೆಲೆ ಕಡಿಮೆ ಇರುತ್ತದೆ ಎನ್ನುತ್ತಾರೆ ಬಿಪಿನ್ ಥೋಮಸ್. ನಮ್ಮ ಮಲೆನಾಡು ಭಾಗದಲ್ಲಿ ಈ ಬೆಣ್ಣೆಹಣ್ಣು ಗಿಡಗಳು ಉತ್ತಮವಾಗಿ ಬರುತ್ತದೆ. ಬೆಣ್ಣೆಹಣ್ಣನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಉತ್ತಮ ಪ್ರಯೋಜನ ಇರುವುದರಿಂದ ಇದಕ್ಕೆ ತುಂಬಾ ಬೇಡಿಕೆಯಿದೆ. ಅಲ್ಲದೆ ಹೆಚ್ಚಾಗಿ ಬೆಣ್ಣೆಹಣ್ಣು ಜ್ಯೂಸ್ ಮಾಡಲು ಬಳಕೆಯಾಗುತ್ತಿದೆ ಎನ್ನುತ್ತಾರೆ ಬಿಪಿನ್. ಅಂದು ಕಾಫಿ ತೋಟ, ಇಂದು ಬೆಣ್ಣೆ ಹಣ್ಣಿನ ತೋಟ!: ನಾಲ್ಕು ವರ್ಷಗಳ ಹಿಂದೆ ಇವರು 18 ಎಕರೆ ಜಾಗದಲ್ಲಿ ಕಾಫಿ ಕೃಷಿ ಮಾಡುತ್ತಿದ್ದರು. ಆದರೆ ಕಾರ್ಮಿಕರ ಸಮಸ್ಯೆಯಿಂದಾಗಿ ಬೇಸತ್ತು, ಇಡೀ ಕಾಫಿ ಗಿಡಗಳನ್ನೇ ತೆರವು ಮಾಡಿ ಸಂಪೂರ್ಣ ಬಟರ್ ಫ್ರೂಟ್ ಗಿಡಗಳನ್ನು ಹಾಕಲು ನಿರ್ಧಾರ ಮಾಡಿದರು. ವಿವಿಧ ಕಡೆಗಳಿಂದ ಗಿಡಗಳನ್ನು ತಂದು ನಾಟಿ ಮಾಡಿ ಈಗ ಅದರಿಂದ ಫಸಲು ಪಡೆಯಲು ಆರಂಭಿಸಿದ್ದಾರೆ. ಅಲ್ಲದೆ ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದಾರೆ. ಈಗ ಭಾರಿ ಡಿಮ್ಯಾಂಡ್!: ಇದೀಗ ಬೆಣ್ಣೆಹಣ್ಣಿನ ಸೀಜನ್ ಶುರುವಾಗಿದ್ದು, ಹಣ್ಣಿಗೆ ಭಾರಿ ಡಿಮ್ಯಾಂಡ್ ಕಂಡುಬಂದಿದೆ. ಬಿಪಿನ್ ಥೋಮಸ್ ಅವರ ತೋಟದಲ್ಲಿ ಈಗಾಗಲೇ ವ್ಯಾಪಾರಿಗಳು ಪ್ರತಿ ದಿನವೂ ಆಗಮಿಸಿ ಹಣ್ಣನ್ನು ಕೊಯ್ಲು ಮಾಡಿ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಮುಂಬೈನಲ್ಲಿ ಹೆಚ್ಚು ಬೇಡಿಕೆಯಿದೆ. ಬೆಣ್ಣೆಹಣ್ಣಿಗೆ ಈಗ ತುಂಬಾ ಬೇಡಿಕೆ ಇದೆ. ಇದರಿಂದ ಕಳೆದ ಮೂರು ವರ್ಷದ ಹಿಂದೆ 18 ಎಕರೆ ಜಾಗದಲ್ಲಿ ಕಾಫಿ ಗಿಡಗಳನ್ನು ಸಂಪೂರ್ಣವಾಗಿ ತೆಗೆದು ಬೆಣ್ಣೆಹಣ್ಣಿನ ಗಿಡಗಳನ್ನು ನಮ್ಮ ತಂದೆಯವರು ಕೃಷಿ ಮಾಡಿದರು. ಈಗ ಅದರ ಫಲ ಸಿಗುತ್ತಿದೆ. ವಾತಾವರಣ ಉತ್ತಮವಾಗಿರುವುದರಿಂದ ಬೀಜದ ಗಿಡದಲ್ಲೇ 2.5 ವರ್ಷದಿಂದ ಫಸಲು ದೊರಕುತ್ತಿದೆ. ನಮ್ಮಲ್ಲಿ 20 ಬಗೆಯ ಬೆಣ್ಣೆಹಣ್ಣು ತಳಿಗಳಿದೆ ಎಂದು ಅರಿಸಿನಗುಪ್ಪೆ ಗ್ರಾಮ ಬೆಣ್ಣೆಹಣ್ಣು ಬೆಳೆಗಾರ ಬಿಪಿನ್ ಥೋಮಸ್ ತಿಳಿಸಿದರು.