ಹಿಡಕಲ್ ಜಲಾಶಯ ಅಂಗಳದಲ್ಲಿ ಅರಳಿದ ಚಿಟ್ಟೆ ಪಾರ್ಕ್

| Published : Dec 16 2024, 12:46 AM IST

ಸಾರಾಂಶ

ಅಳಿವಿನಂಚಿಲ್ಲಿರುವ ಕೀಟ ಸಂಕುಲ ಸಂರಕ್ಷಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಚಿಟ್ಟೆ (ಪಾತರಗಿತ್ತಿ) ಪಾರ್ಕ್ ಸಿದ್ಧಗೊಂಡು ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಅರಣ್ಯ ಇಲಾಖೆಯ ಚಿಟ್ಟೆ ಪಾರ್ಕ್ ನಿರ್ಮಾಣದಿಂದ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗೆ ಬಲ ಬರಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗುವ ಆಶಾಭಾವ ಮೂಡಿಸಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಅಳಿವಿನಂಚಿಲ್ಲಿರುವ ಕೀಟ ಸಂಕುಲ ಸಂರಕ್ಷಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಚಿಟ್ಟೆ (ಪಾತರಗಿತ್ತಿ) ಪಾರ್ಕ್ ಸಿದ್ಧಗೊಂಡು ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಅರಣ್ಯ ಇಲಾಖೆಯ ಚಿಟ್ಟೆ ಪಾರ್ಕ್ ನಿರ್ಮಾಣದಿಂದ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗೆ ಬಲ ಬರಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗುವ ಆಶಾಭಾವ ಮೂಡಿಸಿದೆ.

ಸಸ್ಯ ಮತ್ತು ಜೀವ ಸಂಕುಲ ಉಳಿಸಿಕೊಳ್ಳುವ ಯತ್ನ ನಡೆಯುವುದು ಸಹಜ. ಆದರೆ, ನಶಿಸಿ ಹೋಗುತ್ತಿರುವ ಕೀಟ ಪ್ರಬೇಧಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ ಬಲು ಅಪರೂಪ. ಇಂಥ ಮಹತ್ತರ ಕೆಲಸವನ್ನು ಹುಕ್ಕೇರಿ ಪ್ರಾದೇಶಿಕ ಅರಣ್ಯ ಇಲಾಖೆ ಕೈಗೊಂಡಿದ್ದು ತಾಲೂಕಿನ ಹಿಡಕಲ್ ಡ್ಯಾಮ್‌ನ ರಾಜಾ ಲಖಮಗೌಡ ಸರದೇಸಾಯಿ ಜಲಾಶಯದ ಅಂಗಳದಲ್ಲಿ ಬಹುನಿರೀಕ್ಷಿತ ಚಿಟ್ಟೆ ಪಾರ್ಕ್ ಅರಳಿ ನಿಂತಿದೆ.

ನಿರ್ಮಾಣ ಹಂತದ ಉದ್ಯಾನಕಾಶಿಯ ಭಾಗವಾಗಿ ಈ ಚಿಟ್ಟೆ ಪಾರ್ಕ್ ತಲೆ ಎತ್ತಿದೆ. 10 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಮಾನವ ಪ್ರಾಣಿ ಸಂಘರ್ಷ ಲೆಕ್ಕ ಶೀರ್ಷಿಕೆಯ 2 ಕೋಟಿ ವೆಚ್ಚದಲ್ಲಿ ಈ ಚಿಟ್ಟೆ ಪಾರ್ಕ್ ಸ್ಥಾಪಿಸಲಾಗಿದೆ. ಆಕರ್ಷಣೀಯವಾಗಿ ರೂಪಗೊಂಡಿರುವ ಚಿಟ್ಟೆ ಪಾರ್ಕ್‌ನಿಂದ ಜಲಾಶಯದ ಸಿರಿ ಮತ್ತಷ್ಟು ಹೆಚ್ಚಾಗಿದ್ದು ವೈಭವದ ಸೊಬಗು ಸೂಸುತ್ತಿದೆ.

ನಿಸರ್ಗ ರಮಣೀಯ ಕ್ಷಣಗಳನ್ನು ಸವಿಯುವ ವಿಹಾರಿಗಳಿಗೆ ಪಾರ್ಕ್ ಪ್ರಾಕೃತಿಕ ಸೊಬಗಿನ ಅನುಭವ ನೀಡಲಿದೆ. ವಿವಿಧ ನಯನ ಮನೋಹರ ದೃಶ್ಯಗಳಿದ್ದು ಈ ಪ್ರದೇಶ ಜನಾಕರ್ಷಣೆ ಕೇಂದ್ರವಾಗಿ ಹೊರಹೊಮ್ಮಿದೆ. ನಿರುಪಯುಕ್ತ ಸ್ಥಳದ ಚಿತ್ರಣವೇ ಇದೀಗ ಬದಲಾಗಿ ಚಿಟ್ಟೆಗಳ ಕಲರವ ಕೇಳಿ ಬರಲಿದೆ. ಇದರೊಂದಿಗೆ ಬನ್ನೇರುಘಟ್ಟ ಬಳಿಕ ರಾಜ್ಯದ ಅತಿ ದೊಡ್ಡ ತೆರೆದ ಪಾರ್ಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಾಪಂ ಇಒ ಟಿ.ಆರ್.ಮಲ್ಲಾಡದ, ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಬಿ.ಎಲ್.ಸನದಿ ಹೆಮ್ಮೆಯಿಂದ ಹೇಳಿದ್ದಾರೆ.

ಪಾರ್ಕ್‌ನಲ್ಲಿ ಏನೇನಿದೆ? :

ಚಿಟ್ಟೆಗಳಿಗೆ ಆಹಾರ ಮತ್ತು ಮಕರಂದ ಸವಿಯಲು 150 ವಿವಿಧ ಜಾತಿಯ 25 ಸಾವಿರ ಸಸಿಗಳನ್ನು ನೆಡಲಾಗಿದೆ. ಈಗಾಗಲೇ 25 ಜಾತಿಯ ಚಿಟ್ಟೆಗಳು ಉದ್ಯಾನವನದಲ್ಲಿವೆ. ಚಿಟ್ಟೆಗಳ ಸಂತಾನೋತ್ಪತ್ತಿ ಕೇಂದ್ರ, ನರ್ಸರಿ ಸಸ್ಯಾಗಾರ, ವಿಹಾರಿಗಳ ವಿಶ್ರಾಂತಿಗಾಗಿ 3 ತೆರೆದ ಮನೆ, ಕೆರೆ, 2 ಕಿರು ತೂಗು ಸೇತುವೆ, ಮಕ್ಕಳಿಗೆ ಆಟಿಕೆ, ವರ್ತುಲ ಆಕಾರಾದ ರಸ್ತೆ ನಿರ್ಮಿಸಲಾಗಿದೆ.

ವಾಟರ್ ಪಾರ್ಕ್, ರೋಜ್ ಗಾರ್ಡ್‌ನ್, ವಾಕಿಂಗ್ ಪಾಥ್, ಚಿಮ್ಮುವ ಕಾರಂಜಿ, ಗಜೊಬೋ, ಗೊಡಚಿನಮಲ್ಕಿ ಜಲಾಶಯದ ದೃಶ್ಯ ಸೃಷ್ಟಿಸಲಾಗಿದೆ. ಬಿದಿರು ಜೊತೆಗೆ ನಾನಾ ಜಾತಿಯ ಸಸ್ಯ ಸಂಪತ್ತು ನಳನಳಿಸುತ್ತಿದೆ. ತುಂತುರು ಹನಿ ನೀರಾವರಿ, ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಸುತ್ತಲೂ ತಂತಿಬೇಲಿ ಹಾಕಲಾಗಿದೆ.

ಯೋಜನೆ ರೂವಾರಿಗೆ ಗೌರವ :

ಕ್ಷೇತ್ರದ ಶಾಸಕರೂ ಆಗಿದ್ದ ಸಚಿವ ದಿ.ಉಮೇಶ ಕತ್ತಿ ಅವರ ಕನಸಿನ ಪ್ರಮುಖ ಯೋಜನೆಗಳಲ್ಲಿ ಈ ಚಿಟ್ಟೆ ಪಾರ್ಕ್ ಕೂಡ ಒಂದಾಗಿದೆ. ಹಾಗಾಗಿ ಈ ಚಿಟ್ಟೆ ಪಾರ್ಕ್‌ಗೆ ಉಮೇಶ ಕತ್ತಿ ಪಾರ್ಕ್ ಎಂದು ಹೆಸರಿಸಲಾಗಿದ್ದು ಪಾರ್ಕ್ ಪ್ರವೇಶ ದ್ವಾರ ಬಳಿ ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅಲ್ಲದೇ ಈ ಹಿಂದಿನ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಪ್ರಸನ್ ಬೆಲ್ಲದ, ಉದ್ಯಾನವನ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಹಿಂದಿನ ಅಧಿಕಾರಿಗಳಾದ ಉಮೇಶ ಸಿದ್ನಾಳ, ಎ.ಬಿ.ಪಟ್ಟಣಶೆಟ್ಟಿ ಮತ್ತಿತರ ಅಧಿಕಾರಿಗಳು ಅಗತ್ಯ ನೀಲನಕ್ಷೆ ರೂಪಿಸಿ ಪಾರ್ಕ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಾಕ್ಸ್ ---

ನಾಳೆ ಉದ್ಘಾಟನೆ

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ರಾಜಾ ಲಖಮಗೌಡ ಉದ್ಯಾನಕಾಶಿ ನಿರ್ಮಾಣ ಹಂತದ ಬಳಿ ನಿರ್ಮಿಸಿದ ಉಮೇಶ ಕತ್ತಿ ಚಿಟ್ಟೆ ಪಾರ್ಕ್‌ನ ಉದ್ಘಾಟನಾ ಸಮಾರಂಭವನ್ನು ಇದೇ ತಿಂಗಳು ಡಿ. 17 ರಂದು ಬೆಳಗ್ಗೆ 10 ಕ್ಕೆ ಏರ್ಪಡಿಸಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವರು, ಶಾಸಕರು, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸುವರು.ಈ ಭಾಗದ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿ ನಿರುದ್ಯೋಗಿ ನಿವಾರಿಸುವ ಗುರಿಯೊಂದಿಗೆ ಮೈಸೂರು ಬೃಂದಾವನ ಮಾದರಿಯಲ್ಲಿ ಉದ್ಯಾನಕಾಶಿ ನಿರ್ಮಾಣ ಹಂತದಲ್ಲಿದೆ. ಉದ್ಯಾನಕಾಶಿಯ ಮುನ್ನುಡಿಯಂತೆ ಚಿಟ್ಟೆ ಪಾರ್ಕ್ ಸ್ಥಾಪಿಸಲಾಗಿದೆ.

- ನಿಖಿಲ್ ಕತ್ತಿ, ಶಾಸಕರುನಶಿಸಿಹೋಗುತ್ತಿರುವ ಚಿಟ್ಟೆಗಳಿಗೆ ಜೀವ ತುಂಬುವ ಮಹತ್ವದ ಕೆಲಸ ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆ ಮೂಲಕ ಇಲ್ಲಿ ನಡೆದಿದೆ. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ವಿಶೇಷ ಆಸಕ್ತಿಯಿಂದ ಈ ಯೋಜನೆ ಅನುಷ್ಠಾನಗೊಂಡಿದೆ.

- ಬಿ.ಎಲ್.ಸನದಿ, ಆರ್‌ಎಫ್‌ಒ