ರೈತರ ಪ್ರಮುಖ ಹತ್ತು ಬೇಡಿಕೆಗಳನ್ನು ಸರ್ಕಾರವು ಏಳು ದಿನಗಳೊಳಗಾಗಿ ಜಾರಿಗೊಳಿಸದಿದ್ದರೆ ತಾಲೂಕು ಬಂದ್‌ಗೆ ಕರೆ ನೀಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.

ಕುಂದಗೋಳ:

ಈಗಾಗಲೇ ಖರೀದಿ ಕೇಂದ್ರಗಳಲ್ಲಿ ಗುಣಮಟ್ಟದ ನೆಪವೊಡ್ಡಿ ತಿರಸ್ಕರಿಸಿದ ಹೆಸರು ಕಾಳು ಬೆಳೆ ಮತ್ತು ಉದ್ದು ಬೆಳೆಗಳನ್ನು ಪುನಃ ಖರೀದಿಸಬೇಕೆಂದು ಒತ್ತಾಯಿಸಿ ರೈತ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪಟ್ಟಣದ ಗಾಳಿ ಮರೇಮ್ಮದೇವಿ ದೇವಸ್ಥಾನದ ಬಳಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಂಚಗೃಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು ಭಾಗವಹಿಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ರೈತ ಮುಖಂಡ ಮಾಣಿಕ್ಯ ಚಿಲ್ಲೂರ ಮಾತನಾಡಿ, ರೈತರ ಪ್ರಮುಖ ಹತ್ತು ಬೇಡಿಕೆಗಳನ್ನು ಸರ್ಕಾರವು ಏಳು ದಿನಗಳೊಳಗಾಗಿ ಜಾರಿಗೊಳಿಸದಿದ್ದರೆ ತಾಲೂಕು ಬಂದ್‌ಗೆ ಕರೆ ನೀಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅತಿಯಾದ ಮಳೆಯಿಂದ ಹಾಳಾದ ಹೆಸರನ್ನು ಗುಣಮಟ್ಟ ಸರಿ ಇಲ್ಲ ಎಂಬ ಕಾರಣ ನೀಡಿ ತಿರಸ್ಕರಿಸುತ್ತಿರುವುದನ್ನು ಖಂಡಿಸಿದರು. ಹೆಸರನ್ನು ತಕ್ಷಣ ಗ್ರೇಡ್ ಆಧಾರದಲ್ಲಿ ವರ್ಗೀಕರಿಸಿ ಮಳೆಯಿಂದ ಹಾಳಾದ ಬೆಳೆಯನ್ನು ಸರ್ಕಾರ ಕೂಡಲೇ ಖರೀದಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನಲ್ಲಿ ಬೆಳೆದ ಹತ್ತಿ ಮತ್ತು ಗೋವಿನಜೋಳದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ, ಅವುಗಳ ಖರೀದಿ ಕೇಂದ್ರ ತೆರೆಯಬೇಕು. ಗೋವಿನಜೋಳವನ್ನು ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಖರೀದಿಸಬೇಕು. ಬೆಣ್ಣೆ ಹಳ್ಳದಂತಹ ವಿವಿಧ ಹಳ್ಳಗಳ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾಳಾದ ಹೆಸರು, ಉದ್ದು ಜತೆಗೆ ಸೋಯಾಬಿನ್, ಶೇಂಗಾ, ಹತ್ತಿ, ಗೋವಿನಜೋಳ ಸೇರಿದಂತೆ ಎಲ್ಲಾ ಬೆಳೆಗಳಿಗೂ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಮಾದರಿಯಲ್ಲಿ ಬೆಳೆ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಪ್ರತಿಭಟನಾ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಆರ್. ಪಾಟೀಲ್ ರೈತರ ಸಮಸ್ಯೆ ಆಲಿಸಿದರು. ಹೆಸರು ಮತ್ತು ಸೋಯಾಬೀನ್ ಖರೀದಿ ಕೇಂದ್ರಗಳು ಈಗಾಗಲೇ ಪ್ರಾರಂಭಗೊಂಡಿವೆ. ಉಳಿದ ಬೆಳೆ ಖರೀದಿ ಮತ್ತು ತಪ್ಪು ಮ್ಯಾಪಿಂಗ್ ಸರಿಪಡಿಸುವ ಕುರಿತು ಸರ್ಕಾರ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿದ್ದು, ರೈತರ ಪರವಾಗಿ ಧ್ವನಿಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು. ಬಳಿಕ ತಹಸೀಲ್ದಾರ್‌ ರಾಜು ಮಾರ್ವಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಮುಖಂಡರಾದ ಚಂದ್ರು ಕುರುಬರ, ಮಲ್ಲಿಕಾರ್ಜುನ ಕುನ್ನೂರ, ಹೇಮನಗೌಡ ಬಸನಗೌಡ್ರ, ಗುರುಪಾದಪ್ಪ ಬಂಕದ, ಫಕೀರಪ್ಪ ಪೂಜಾರ, ಬಸವರಾಜ ಯೋಗಪ್ಪನವರ, ಮಲ್ಲಿಕಾರ್ಜುನ್ ಗುರನಳ್ಳಿ, ದೇವಪ್ಪ ಇಚ್ಚಂಗಿ, ಕಲ್ಲಪ್ಪ ಹರಕುಣಿ, ಅಂಖಡಪ್ಪ ಕಳಸೂರ, ಗಂಗಾಧರ ಧರೆಣ್ಣವರ, ವೆಂಕನಗೌಡ ಕಂಠೆಪ್ಪಗೌಡ್ರ, ವಿಜಯಾನಂದ ಹಾಲಿ, ಶಕ್ರು ಲಮಾಣಿ, ಬೀರಪ್ಪ ಕುರುಬರ, ಹನುಮಂತ ಕಂಬಳಿ, ನಿಂಗಪ್ಪ ಹಳ್ಳಿಕೇರಿ, ವೈ.ಎನ್. ಪಾಟೀಲ, ಬಸವರಾಜ ನಾವಳ್ಳಿ, ಬಸವರಾಜ ಶಿಗ್ಗಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.