ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಿ

| Published : Oct 25 2025, 01:00 AM IST

ಸಾರಾಂಶ

ಸಾಲ ಶೂಲ ಮಾಡಿ ಬೀಜ, ಗೊಬ್ಬರ, ಕಳೆನಾಶಕ, ಕೂಲಿ ಹೀಗೆ ಸುಮಾರು ₹೨೫ರಿಂದ ೩೦ ಸಾವಿರ ಖರ್ಚು ಮಾಡಿದ್ದಾರೆ. ಜತೆಗೆ ನಿರಂತರ ಮಳೆಗೆ ಬೆಳೆ ಹಾನಿ ನಡುವೆ ಅಳಿದುಳಿದ ಫಸಲು ಕೈಗೆ ಬಂದಿದ್ದು, ಬೆಲೆ ಇಳಿಕೆಯಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ

ಯಲಬುರ್ಗಾ: ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮುಖಾಂತರ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಶೇ. ೮೦ರಷ್ಟು ರೈತರು ಮೆಕ್ಕೆಜೋಳ ಬೆಳೆ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಸಲ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹೨೨೦೦ ವರೆಗೂ ಖರೀದಿ ನಡೆದಿತ್ತು. ಆದರೆ ಕಳೆದೆರಡು ವಾರಗಳಿಂದ ಬೆಲೆ ಇಳಿಕೆಯಾಗಿದ್ದು, ₹೧೬೦೦ರಿಂದ ₹೧೭೦೦ವರೆಗೆ ದರ ಇಳಿಕೆಯಾಗಿದೆ. ಸಾಲ ಶೂಲ ಮಾಡಿ ಬೀಜ, ಗೊಬ್ಬರ, ಕಳೆನಾಶಕ, ಕೂಲಿ ಹೀಗೆ ಸುಮಾರು ₹೨೫ರಿಂದ ೩೦ ಸಾವಿರ ಖರ್ಚು ಮಾಡಿದ್ದಾರೆ. ಜತೆಗೆ ನಿರಂತರ ಮಳೆಗೆ ಬೆಳೆ ಹಾನಿ ನಡುವೆ ಅಳಿದುಳಿದ ಫಸಲು ಕೈಗೆ ಬಂದಿದ್ದು, ಬೆಲೆ ಇಳಿಕೆಯಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯಾದ್ಯಂತ ಮೆಕ್ಕೆಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ರೈತರ ಪರಿಸ್ಥಿತಿ ಅರಿತು ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಮಾಡಬೇಕು. ಸರ್ಕಾರಗಳು ರೈತರು ಬೆಳೆದ ಮೆಕ್ಕೆಜೋಳ ಖರೀದಿಸಿ ಪಡಿತರದಾರರಿಗೆ ಜೋಳ, ರಾಗಿ ವಿತರಿಸಿದಂತೆ ಮೆಕ್ಕೆಜೋಳದ ರವೆ ಉತ್ಪಾದಿಸಿ ವಿತರಿಸಲು ಮುಂದಾಗಬೇಕು. ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ಕನಿಷ್ಠ ₹3000ಕ್ಕೆ ಖರೀದಿಸಬೇಕು. ಇದರಿಂದ ಪಡಿತರ ವಿತರಣೆಯಲ್ಲಿ ಸರ್ಕಾರಕ್ಕೆ ಹೊರೆ ತಪ್ಪುತ್ತದೆ. ಅಲ್ಲದೆ ರೈತರ ಕೈಹಿಡಿದಂತಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ರಾಜಶೇಖರ ಶ್ಯಾಗೋಟಿ, ಬಸವರಾಜ ಹಳ್ಳಿ, ಶಿವಕುಮಾರ ನಾಗನಗೌಡ್ರ, ಸಂತೋಷ ತೋಟದ, ಶಂಕರ ಮೂಲಿಮನಿ, ರಾಮಣ್ಣ ದಿವಾಣದ, ಬಸವರಾಜ ಮೂಲಿಮನಿ, ಹನುಮೇಶ ಬುಡಶೇಟ್ನಾಳ, ವೀರೇಂದ್ರ ಈಳಿಗೇರ, ವಿಜಯ ಶೇಷಗಿರಿ ಸೇರಿದಂತೆ ಮತ್ತಿತರರು ಒತ್ತಾಯಿಸಿದರು.