ವಿಧಾನಸಭಾ ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳು ರಾಜ್ಯ ವಿಧಾನಸಭೆಯ ಘನತೆಗೆ ಭಾರೀ ಧಕ್ಕೆ ಬಗ್ಗೆ ತಿಳಿದಿದ್ದರೂ ಸುಮ್ಮನಿದ್ದ ಸಭಾಧ್ಯಕ್ಷರು 24 ಗಂಟೆ ಒಳಗೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮುಖಂಡ ಹಾಗೂ ವಕೀಲರಾದ ಜಿ. ದೇವರಾಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲವನ್ನು ನೋಡುತ್ತಾ ಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದು ನೈತಿಕ ದೌರ್ಬಲ್ಯದ ಪರಮಾವಧಿ ಎಂದು ಕಿಡಿಕಾರಿದರು. ಸಭಾಧ್ಯಕ್ಷರು ಕೂಡಲೇ ನೈತಿಕ ಹೊಣೆ ಹೊತ್ತು 24 ಗಂಟೆಯೊಳಗೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ವಿಧಾನಸಭಾ ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳು ರಾಜ್ಯ ವಿಧಾನಸಭೆಯ ಘನತೆಗೆ ಭಾರೀ ಧಕ್ಕೆ ಬಗ್ಗೆ ತಿಳಿದಿದ್ದರೂ ಸುಮ್ಮನಿದ್ದ ಸಭಾಧ್ಯಕ್ಷರು 24 ಗಂಟೆ ಒಳಗೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮುಖಂಡ ಹಾಗೂ ವಕೀಲರಾದ ಜಿ. ದೇವರಾಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಇಂತಹ ಗಂಭೀರ ಘಟನೆ ನಡೆದರೂ ಸಭಾಧ್ಯಕ್ಷರು ನಗುತ್ತಾ ಕುಳಿತಿರುವುದು ಅತ್ಯಂತ ಖಂಡನೀಯ. ಸದನವು ಸಂವಿಧಾನದ ದೇವಾಲಯವಾಗಿದ್ದು, ಅಲ್ಲಿ ಬಳಸಿದ ಪದಗಳು ಎಲ್ಲರೂ ತಲೆತಗ್ಗಿಸುವಂತಾಗಿವೆ. ಮಹಿಳೆಯರ ಕುರಿತು, ಅದರಲ್ಲೂ ಹೆಣ್ಣುಮಗಳ ಬಗ್ಗೆ ಲಘುವಾಗಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವುದು ಕ್ಷಮಾರ್ಹವಲ್ಲ. ಆದರೆ ಈ ಎಲ್ಲವನ್ನು ನೋಡುತ್ತಾ ಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದು ನೈತಿಕ ದೌರ್ಬಲ್ಯದ ಪರಮಾವಧಿ ಎಂದು ಕಿಡಿಕಾರಿದರು. ಸಭಾಧ್ಯಕ್ಷರು ಕೂಡಲೇ ನೈತಿಕ ಹೊಣೆ ಹೊತ್ತು 24 ಗಂಟೆಯೊಳಗೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಆರ್‌ಎಸ್‌ಎಸ್ ಬಗ್ಗೆ ಶಾಸಕ ಶಿವಲಿಂಗೇಗೌಡ ಅವರು "ಛೀ, ಥೂ ಎಂಬ ಪದ ಬಳಸಿ "ಮಾತನಾಡಿರುವುದು ಅತ್ಯಂತ ಅಸಹ್ಯಕರ. ವಿಶ್ವಾದ್ಯಂತ ಒಪ್ಪಿಗೆಯಾದ ಸಂಘಟನೆಯಾದ ಆರ್‌ಎಸ್‌ಎಸ್ ಕಾರಣದಿಂದಲೇ ಇಂದು ರಾಜ್ಯದಲ್ಲಿ ಹಿಂದುತ್ವ ಉಳಿದಿದೆ. ಇಂತಹ ಸಂಘಟನೆಯ ಬಗ್ಗೆ ಸದನದಲ್ಲಿ ಲಘುವಾಗಿ ಮಾತನಾಡುವ ಧೈರ್ಯ ಅವರಿಗೆ ಹೇಗೆ ಬಂತು ಎಂದು ಪ್ರಶ್ನಿಸಿದರು. ಪಾಕಿಸ್ತಾನ ಅಥವಾ ಮುಸ್ಲಿಂ ಮಹಿಳೆಯರ ಕುರಿತು ಸದನದಲ್ಲಿ ಮಾತನಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಹಿಂದೂ ಮಹಿಳೆಯರ ಬಗ್ಗೆ ಅವಹೇಳನ ಮಾಡಿದಾಗ ಮೌನ ವಹಿಸುವುದು ದ್ವಂದ್ವ ನಿಲುವಿನ ಪರಾಕಾಷ್ಠೆ ಎಂದು ಸಭಾಧ್ಯಕ್ಷರ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷವು ಮಹಾನ್ ನಾಯಕರನ್ನು ಕೊಟ್ಟ ಪಕ್ಷವಾದರೂ, ಇಂದಿನ ಸ್ಥಿತಿ ಏನಾಗಿದೆ ಎಂದು ವ್ಯಂಗ್ಯವಾಡಿದರು.ಸರ್ಕಾರಿ ಪಾರ್ಕ್ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡ ಪ್ರಕರಣದಲ್ಲಿ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ `ಭೂಮಿ ಕಳ್ಳ " ಎಂದು ವರದಿ ಸಲ್ಲಿಸಲಾಗಿತ್ತು ಎಂದು ಹೇಳಿದರು. ಆ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕ್ಯಾಬಿನೆಟ್‌ನಲ್ಲಿ ಬದಲಿ ನಿವೇಶನ ನೀಡಲು ತೀರ್ಮಾನ ಮಾಡಿದ್ದು ದೊಡ್ಡ ತಪ್ಪು ಎಂದು ಆರೋಪಿಸಿದರು. ಪ್ರಕರಣ ಕೈಬಿಡುವಂತೆ ಕಾಲು ಹಿಡಿದು ಬೇಡಿಕೊಂಡಿದ್ದರು ಎಂಬುದನ್ನೂ ಬಹಿರಂಗಪಡಿಸಿದರು.

3 ಕೋಟಿ ರು. ಲಂಚ:

ಹಾಸನ ಮತ್ತು ಅರಸೀಕೆರೆ ನಗರ ಪ್ರದೇಶದಲ್ಲಿ ಪಾರ್ಕಿಗಾಗಿ ಮೀಸಲಿದ್ದ ಸರ್ವೆ ನಂ.290/2 ರ 10043 ಚದರ ಅಡಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿದರು. ಹೂಡಾ ಮೂಲಕ ಸೈಟ್ ಮಾರಾಟ ಮಾಡಿ ಅಧಿಕಾರಿಗಳಿಗೆ ಹಣ ಕೊಟ್ಟಿದ್ದಾರೆ. ಹಾಸನದಲ್ಲಿ ಉಳಿಯಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಹೂಡಾದಿಂದ ಮೂರು ಕೋಟಿ ರು. ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಮಾಡಿರುವ ದೇವರಾಜೇಗೌಡ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಿ, ಬೇಕಾದರೆ ಮಂಪರು ಪರೀಕ್ಷೆಗೂ ನಾನು ಸಿದ್ಧ ಎಂದು ಸವಾಲು ಹಾಕಿದರು.

* ಬಾಕ್ಸ್‌: ತಾಕತ್ ಇದ್ದರೆ ಕೂಡಲೇ ಶಿವಲಿಂಗೇಗೌಡರನ್ನು ಪಕ್ಷದಿಂದ ವಜಾಗೊಳಿಸಿ

2022ರ ಚುನಾವಣೆಯ ವೇಳೆ ಬ್ಲೂ ಫಿಲಂ ಹಂಚಿದ್ದೇನೆ ಎಂದು ನೀವೇ ಹೇಳಿದ್ದೀರಿ, ನೇರ ಚರ್ಚೆಗೆ ಬನ್ನಿ ಎಂದು ಶಿವಲಿಂಗೇಗೌಡರಿಗೆ ಸವಾಲು ಎಸೆದರು. ಸಿಟಿ ರವಿ ಅವರು ಮಹಿಳೆಯರ ಬಗ್ಗೆ ಮಾತನಾಡಿದಾಗ ಕಾಂಗ್ರೆಸ್ ಯಾವ ಕ್ರಮ ಕೈಗೊಂಡಿತು ಎಂಬುದನ್ನು ನೆನಪಿಸಿದ ದೇವರಾಜೇಗೌಡ, ಇದೇ ಮಾನದಂಡವನ್ನು ಶಿವಲಿಂಗೇಗೌಡ ಮೇಲೂ ಅನ್ವಯಿಸಬೇಕು ಎಂದು ಆಗ್ರಹಿಸಿದರು. ಡಿ ಕೆ ಶಿವಕುಮಾರ್‌ ಅವರಿಗೆ ಸವಾಲು ಹಾಕಿದ ಅವರು, ತಾಕತ್ ಇದ್ದರೆ ಕೂಡಲೇ ಶಿವಲಿಂಗೇಗೌಡರನ್ನು ಪಕ್ಷದಿಂದ ವಜಾಗೊಳಿಸಿ ಎಂದು ಒತ್ತಾಯಿಸಿದರು. ಕೂಡಲೇ ಶಾಸಕ ಶಿವಲಿಂಗೇಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಬೇಕು ಎಂದು ದೇವರಾಜೇಗೌಡ ಆಗ್ರಹಿಸಿದರು.

ಇದೇ ವೇಳೆ ಬಿಜೆಪಿ ಮುಖಂಡ ಮನೋಹರ್‌, ವಕೀಲರು ಉಪಸ್ಥಿತರಿದ್ದರು.