ಅಕ್ಕಿ ಅಕ್ರಮ ದಂಧೆಯಲ್ಲಿ ಆಹಾರ, ಪೊಲೀಸ್‌ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಮಾಮೂಲಿ ಹೋಗುತ್ತಿದೆ, ಕೆಲ ಅಧಿಕಾರಿಗಳ ಜೇಬು ಕೂಡಾ ಭರ್ತಿಯಾಗುತ್ತಿದೆ ಎಂಬ ಆರೋಪ

ಹೂವಿನಹಡಗಲಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಅನ್ನಭಾಗ್ಯ ಯೋಜನೆಯ ಅಕ್ಕಿ, ರಾಗಿ ಕಾಳ ಸಂತೇಲಿ ಹೋಗುವ ದೊಡ್ಡ ದಂಧೆಯ ಜಾಲವಿದೆ. ಅಂತವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ ವಾಹನ ವಶಕ್ಕೆ ಪಡೆಯಬೇಕೆಂದು ಪಂಚ ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ, ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಎಚ್ಚರಿಕೆ ನೀಡಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ, ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನ್ನದ ಭಾಗ್ಯದ ಅಕ್ಕಿ ಹೊರ ರಾಜ್ಯ ಹಾಗೂ ವಿದೇಶಕ್ಕೂ ರಫ್ತಾಗುವ ಮಾಹಿತಿ ಮಾಧ್ಯಮದಿಂದ ತಿಳಿದಿದೆ. ಈ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಕಾಳ ಸಂತೇಲಿ ಖರೀದಿ ಅಕ್ರಮ ದಂಧೆಗೆ ವಾರದೊಳಗೆ ಕಡಿವಾಣ ಹಾಕಬೇಕೆಂದು ತಾಕೀತು ಮಾಡಿದರು.

ಈ ಅಕ್ಕಿ ಅಕ್ರಮ ದಂಧೆಯಲ್ಲಿ ಆಹಾರ, ಪೊಲೀಸ್‌ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಮಾಮೂಲಿ ಹೋಗುತ್ತಿದೆ, ಕೆಲ ಅಧಿಕಾರಿಗಳ ಜೇಬು ಕೂಡಾ ಭರ್ತಿಯಾಗುತ್ತಿದೆ ಎಂಬ ಆರೋಪವಿದೆ. ನ್ಯಾಯ ಬೆಲೆ ಅಂಗಡಿ ಪಕ್ಕದಲ್ಲೇ ಖರೀದಿ ನಡೆಯುತ್ತಿದೆ.ಇಂತಹ ವ್ಯವಸ್ಥೆ ವಿರುದ್ಧ ಬಿಗಿ ಕ್ರಮ ವಹಿಸಬೇಕೆಂದು ಸೂಚಿಸಿದರು.

ತಾಲೂಕಿನ ಕಾಲ್ವಿ ಭಾಗದ 9 ಗ್ರಾಮಗಳಲ್ಲಿ ಪಡಿತರ ಅಕ್ಕಿ ವಿತರಣೆಗೆ ಬಯೋಮೆಟ್ರಿಕ್‌ ಪಡೆದು 15 ದಿನಗಳಾದರೂ ಅಕ್ಕಿ ರಾಗಿ ವಿತರಿಸದೇ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆಹಾರ ನಿರೀಕ್ಷ ನಾಗೇಂದ್ರ ನಾಯ್ಕ ವಿರುದ್ಧ ಆಹಾರ ಸಚಿವ ಹರ್ಷಿದ್‌ ರಿಜ್ವಾನ್‌ ಶಿಸ್ತು ಕ್ರಮಕ್ಕೆ ಸೂಚಿಸಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ತಹಸೀಲ್ದಾರ್‌, ತಾಪಂ ಇಒ ಮೇಲೆ ಕ್ರಮ ವಹಿಸಬೇಕೆಂದು ಹೇಳಿದರು.

ಗೃಹಲಕ್ಷ್ಮೀ ಯೋಜನೆಯಲ್ಲಿ 49600 ಮಹಿಳೆಯರು ನೋಂದಣಿಯಾಗಿದ್ದು, 346.462 ಕೋಟಿ ಹಣ ಪಾವತಿಯಾಗಿದೆ. 49393 ಪಡಿತರ ಚೀಟಿಗಳಿಗೆ ಅಕ್ಕಿ, ರಾಗಿ ವಿತರಣೆಯಾಗಿದೆ. 34868 ಗೃಹ ಜ್ಯೋತಿ ಫಲಾನುಭವಿಗಳಿದ್ದು, ₹58.34 ಕೋಟಿ ವೆಚ್ಚವಾಗಿದೆ. ಶಕ್ತಿ ಯೋಜನೆಯಲ್ಲಿ ಈವರೆಗೂ 29353665 ಮಹಿಳೆಯರು ಸಂಚರಿಸಿದ್ದಾರೆ ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆಯಿಂದ ₹584.24 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ 500 ಬಸ್‌ಗಳ ಖರೀದಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಭಾಗಕ್ಕೂ ಹೊಸ ಬಸ್‌ಗಳು ಬರಲಿವೆ. ಬಸ್‌ ನಿಲ್ದಾಣದಲ್ಲಿ ಗ್ಯಾರಂಟಿ ಸಮಿತಿ ಸಭೆ ಮಾಡಬೇಕು, ಬಸ್‌ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ, ಶುದ್ಧ ಕುಡಿವ ನೀರು, ಮಹಿಳೆಯರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆ, ಶೌಚಾಲಯ ವ್ಯವಸ್ಥೆ ಇರಬೇಕೆಂದು ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್‌. ಶಾಂತನಗೌಡ, ಜಿಲ್ಲಾ ಸಮಿತಿ ಸಮಿತಿ ಸದಸ್ಯ ಗುರುವಿನ ರಾಜು, ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ, ತಾಪಂ ಇಒ ಜಿ. ಪರಮೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ಯಾರಂಟಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.