ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆ ದರ ಏರಿಕೆಯಾಗಿದ್ದರೂ ಸ್ಥಳೀಯ ವ್ಯಾಪಾರಿಗಳು ಅದಕ್ಕೆ ಅನುಗುಣವಾಗಿ ಕಾಫಿ ಖರೀದಿಸದೆ ಕಡಿಮೆ ದರಕ್ಕೆ ಖರೀದಿಸುವ ಮೂಲಕ ಬೆಳೆಗಾರರನ್ನು ವಂಚಿಸುತ್ತಿದ್ದಾರೆ. ಸ್ಥಳೀಯ ಬೆಳೆಗಾರರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಸಂಪೂರ್ಣ ಲಾಭ ಸಿಗುತ್ತಿಲ್ಲ ಎಂದು ಕೊಡಗು ಸಂರಕ್ಷಣಾ ವೇದಿಕೆ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪೊನ್ನಂಪೇಟೆಯಲ್ಲಿ ಈ ಬಗ್ಗೆ ಸಮಾಲೋಚನಾ ಸಭೆ ನಡೆಸಿದ ಪ್ರಮುಖರು ಈ ಬಗ್ಗೆ ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮೂಲಕ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆದು ನ್ಯಾಯ ಒದಗಿಸಲು ಒತ್ತಾಯಿಸಲು ನಿರ್ಣಯ ಕೈಗೊಂಡರು.
ಅಂತಾರಾಷ್ಟ್ರೀಯ ಕಾಫಿ ಖರೀದಿಸುವ ಸಂಸ್ಥೆಗಳು ತಮ್ಮದೇ ಆದ ಖರೀದಿ ವ್ಯವಸ್ಥೆ ಮಾಡಿ ಸ್ಥಳೀಯ ಬೆಳೆಗಾರರಿಂದ ನೇರವಾಗಿ ಕಾಫಿ ಖರೀದಿಸುವ ಮೂಲಕ ಬೆಳೆಗಾರರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ ಸಿಗುವಂತೆ ಬೆಳೆಗಾರರ ಹಿತ ಕಾಪಾಡಬೇಕು. ಮಧ್ಯವರ್ತಿಗಳಿಂದ ಕಾಫಿ ಖರೀದಿಸುವುದನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ನಿಲ್ಲಿಸಬೇಕು ಎಂದು ಮನವಿ ಮಾಡಿದರು.ಇದೀಗ ಕಾಫಿ ಖರೀದಿಸುವ ಸ್ಥಳೀಯ ವ್ಯಾಪಾರಿಗಳು, ಮದ್ಯವರ್ತಿಗಳು ನೇರವಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಕಾಫಿ ಮಾರಾಟ ಮಾಡುತ್ತಿಲ್ಲ. ಇದರಿಂದ ಮಧ್ಯವರ್ತಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಅನುಗುಣವಾಗಿ ದರ ನೀಡುತ್ತಿಲ್ಲ. ಜುಲೈ 21ಕ್ಕೆ 4,600 ಡಾಲರ್ ದರವಿದ್ದು ಇದರ ಅನುಗುಣವಾಗಿ ಕಾಫಿ ಬೇಳೆ ದರ ಅಂದರೆ ಇಪಿ 439 ಇರಬೇಕು. ಆದರೆ ಸ್ಥಳೀಯ ಮಧ್ಯವರ್ತಿಗಳು 395- 400 ಇಪಿ.ಗೆ ಖರೀದಿಸುತ್ತಿದ್ದಾರೆ. ಏಪ್ರಿಲ್ ಅಂತ್ಯದಲ್ಲಿ 4150 ಡಾಲರ್ ದರ ಇದ್ದರೂ ಇ ಪಿ ದರ 395 -400 ಕ್ಕೆ ಖರೀದಿಸಲಾಗುತ್ತಿತ್ತು. ಆದರೆ ಈಗ ಅಂತಾರಾಷ್ಟ್ರೀಯ ಕಾಫಿ ದರ 4,600 ಬಂದಿದ್ದರೂ ಸಹ ಇದೇ ಇ ಪಿ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ ಎಂದು ಸಂರಕ್ಷಣಾ ವೇದಿಕೆ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಫಿ ಮಂಡಳಿಯ ವಿಸ್ತರಣಾ ಘಟಕ ಅಂತಾರಾಷ್ಟ್ರೀಯ ಮಾರುಕಟ್ಟೆ ಅನುಗುಣ ಸ್ಥಳೀಯ ದರ ಪ್ರಕಟಿಸಬೇಕು. ಇವುಗಳನ್ನು ಸ್ಥಳೀಯ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವಂತೆ ಪ್ರಮುಖರು ಸಲಹೆ ನೀಡಿದರು.ಸಭೆಯಲ್ಲಿ ಕೊಡಗು ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ಪ್ರಮುಖರಾದ ನಿವೃತ್ತ ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಮಲ್ಲಮಾಡ ಪ್ರಭು ಪೂಣಚ್ಚ, ಆಣ್ಣೀರ ಹರೀಶ್ ಮಾದಪ್ಪ, ಉಳುವಂಗಡ ಲೋಹಿತ್ ಭೀಮಯ್ಯ, ಮಲಚೀರ ಶಾನ್ ಬೋಪಯ್ಯ, ತೀತಮಾಡ ಪೂವಣ್ಣ ಹಾಜರಿದ್ದರು.