ನಿಯಮ ಬಾಹಿರವಾಗಿದ್ದಕ್ಕೆ ಬಿವಿವಿ ಜಾಗ ರದ್ದು

| Published : Aug 11 2024, 01:37 AM IST

ಸಾರಾಂಶ

ಬಿವಿವಿ ಸಂಘಕ್ಕೆ ಬಿಟಿಡಿಎದಿಂದ ಪಡೆದುಕೊಂಡಿರುವ ಸೆಕ್ಟರ್ ನಂ.59ರಲ್ಲಿ ಜಾಗ ಕಾನೂನು, ನಿಯಮ ಬಾಹಿರವಾಗಿದೆ ಅಂತ ತನಿಖೆ ವೇಳೆ ಬಯಲಾಗಿದ್ದಕ್ಕೆ ರದ್ದುಗೊಳಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಅಡಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿವಿವಿ ಸಂಘಕ್ಕೆ ಬಿಟಿಡಿಎದಿಂದ ಪಡೆದುಕೊಂಡಿರುವ ಸೆಕ್ಟರ್ ನಂ.59ರಲ್ಲಿ ಜಾಗ ಕಾನೂನು, ನಿಯಮ ಬಾಹಿರವಾಗಿದೆ ಅಂತ ತನಿಖೆ ವೇಳೆ ಬಯಲಾಗಿದ್ದಕ್ಕೆ ರದ್ದುಗೊಳಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಅಡಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರ ಅವಧಿಯಲ್ಲಿ ನಿವೇಶನ, ಭೂಮಿಗಾಗಿ ವಿವಿಧ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅವುಗಳಿಗೆ ಅರ್ಜಿದಾರರ ಕೇಳಿದ್ದಕ್ಕಿಂತ ಕಡಿಮೆ ಭೂಮಿ ಹಂಚಿಕೆ ಮಾಡಲಾಗಿದೆ. ತಾವೇ ಸಂಘದ ಕಾರ್ಯಾಧ್ಯಕ್ಷರಾಗಿ, ಬಿಟಿಡಿಎ ಅಧ್ಯಕ್ಷರಾಗಿ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಹಂಚಿಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಜಾತಿ ರಾಜಕಾರಣ ಪ್ರಶ್ನೆ ಬರಲ್ಲ. ಅಧಿಕಾರವನ್ನು ಸ್ವಜನ ಪಕ್ಷಪಾತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟ ಮಾಡಿದ್ದಾರೆ ಎಂದರು.

4 ಎಕರೆಗೆ ₹400 ಕೋಟಿ ಬೆಲೆ ಬಾಳುವ ಜಮೀನು:

ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಕ್ಕೆ ಕಾನೂನು ನಿಯಮಾವಳಿ ಪ್ರಸ್ತಾಪಿಸಿ ಸಂಘಕ್ಕೆ ಹಂಚಿಕೆ ಯಾದ ಭೂಮಿ ಕುರಿತು ಎಳೆ ಎಳೆಯಾಗಿ ಬಿಡಿಸಿಟ್ಟರು. ಕಳೆದುಕೊಂಡಿದ್ದು 4 ಎಕರೆ ಭೂಮಿ, ಪಡೆದುಕೊಂಡಿದ್ದು ₹400 ಕೋಟಿ ಬೆಲೆ ಬಾಳುವ 20 ಎಕರೆ ಜಮೀನು. ತಮ್ಮ ತಪ್ಪು ಮುಚ್ಚಿಕೊಳ್ಳಲು ಜಾತಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಿಯಮ ಬಾಹಿರವಾಗಿ ಭೂಮಿ ಪಡೆದಿದ್ದರು:

ನಾವು ಬಿವಿವಿ ಸಂಘದ ವಿರೋಧಿಗಳಲ್ಲ. ಆ ಸಂಸ್ಥೆ ಬಗ್ಗೆ ಬಾಗಲಕೋಟೆ ಜನತೆಗೆ ಹೆಮ್ಮೆ ಇದೆ. ಈ ಹಿಂದೆ ಎಸ್.ನಿಜಲಿಂಗಪ್ಪ ಮುಖ್ಯ ಮಂತ್ರಿದ್ದಾಗ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ನೂರಾರು ಎಕರೆ ಭೂಮಿ ಲೀಜ್‌ ನೀಡಿ ನಂತರ ಅಧಿಕೃತವಾಗಿ ಸಂಸ್ಥೆಗೆ ಸರ್ಕಾರದಿಂದ ಹಸ್ತಾಂತರ ಮಾಡಲಾಗಿದೆ. ಆವಾಗ ಕಾಂಗ್ರೆಸ್ ವಿರೋಧ ಮಾಡಿಲ್ಲ. ಈಗ ಮಾಡುವ ಪ್ರಶ್ನೆ ಬರೋವುದಿಲ್ಲ. ಸರ್ಕಾರಕ್ಕಿಂತ ಕಾನೂನು, ಸಂವಿಧಾನ ದೊಡ್ಡದು. ಆದರ 59 ಸೆಕ್ಟರ್ ಭೂಮಿ ಹಂಚಿಕೆಯಲ್ಲಿ ಕಾನೂನು, ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಉಲ್ಲೇ ಖವಾಗಿದೆ. ಮುಧೋಳ ಪರಿವರ್ತನಾ ಸಂಸ್ಥೆಗೆ 5 ಎಕರೆ ಜಮೀನು ಇವರ ಅಧಿಕಾರ ಅವಧಿಯಲ್ಲಿ ನೀಡಲಾಗಿದೆ. ಅದಕ್ಕೆ ಸರ್ಕಾರದಿಂದ ಅನುಮತಿ ಇತ್ತು. ಆದರೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ತಾವೇ ಬಿಟಿಡಿಎ ಅಧ್ಯಕ್ಷರಾಗಿ, ಸಂಘದ ಕಾರ್ಯಾಧ್ಯಕ್ಷರಾಗಿ ನಿಯಮ ಬಾಹಿರವಾಗಿ ಭೂಮಿ ಪಡೆದುಕೊಂಡು ಬೇರೆಯವರ ಮೇಲೆ ಎತ್ತಿ ಕಟ್ಟುವುದು ತರವಲ್ಲ. ನಮ್ಮ ಶಾಸಕ ಎಚ್.ವೈ.ಮೇಟಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಜಾತಿ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

ಈ ವೇಳೆ ಮುಖಂಡರಾದ ಗೋವಿಂದ ಬಳ್ಳಾರಿ, ರಜಾಕ ಬೆಣ್ಣೂರ, ಶ್ರೀಧರ ನೀಲನಾಯಕ ಇತರರು ಇದ್ದರು.

----ಬಾಕ್

ಬಿಟಿಡಿಎ ನೀಡಿರುವ ಜಮೀನು

ತನಿಖೆಯಾಗಲಿ ಎಂದದ್ದು ಸ್ವಾಗತಾರ್ಹ

1983 ರಿಂದ ಬಿಟಿಡಿಎದಿಂದ ವಿತರಣೆಯಾಗಿರುವ ಜಮೀನು ಈವರೆಗೆ ತನಿಖೆ ನಡೆಸಲಿ ಅಂತ ಹೇಳಿರುವುದು ಸ್ವಾಗತಾರ್ಹ. ನಾವು ಕೂಡಾ ಇದಕ್ಕೆ ಒತ್ತಾಯ ಮಾಡುತ್ತೇವೆ. ಈ ವಿಷಯದಲ್ಲಿ ರಾಜಿ ಮಾಡುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಶಾಸಕ ಎಚ್.ವೈ.ಮೇಟಿ ಕೂಡಾ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಸತ್ಯಾಂಶ ಹೊರಗೆ ಬೀಳಲಿ ಎಂದು ತಿಳಿಸಿದರು.