2047ರ ವೇಳೆಗೆ ಭಾರತವು ಜ್ಞಾನ ಆಧಾರಿತ ಸೂಪರ್ ಪವರ್

| Published : Dec 13 2024, 12:49 AM IST

2047ರ ವೇಳೆಗೆ ಭಾರತವು ಜ್ಞಾನ ಆಧಾರಿತ ಸೂಪರ್ ಪವರ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಯುವ ಶಕ್ತಿಯಿಂದಲೇ 2047ರ ವೇಳೆಗೆ ಭಾರತವು ಜ್ಞಾನ ಆಧಾರಿತ ಸೂಪರ್ ಪವರ್ ಆಗಲಿದೆ. ಇಂದಿನ ಯುವಕರು ವಿಕಸಿತ ಭಾರತದ ಶಿಲ್ಪಿಗಳಾಗಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಂದಿನ ಯುವ ಶಕ್ತಿಯಿಂದಲೇ 2047ರ ವೇಳೆಗೆ ಭಾರತವು ಜ್ಞಾನ ಆಧಾರಿತ ಸೂಪರ್ ಪವರ್ ಆಗಲಿದೆ. ಇಂದಿನ ಯುವಕರು ವಿಕಸಿತ ಭಾರತದ ಶಿಲ್ಪಿಗಳಾಗಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣಿಸಿದರು.

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಹಮ್ಮಿಕೊಂಡ 7ನೇ ಆವೃತ್ತಿಯ ಫೈನಲ್ ಹಂತದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್)-2024 ದೇಶದಾದ್ಯಂತ 51 ನೋಡಲ್ ಕೇಂದ್ರಗಳಲ್ಲಿ ನಡೆದ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ಏಕಕಾಲದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಹ್ಯಾಕಥಾನ್‌ ಚಟುವಟಿಕೆಗಳಿಂದ ನಮ್ಮ ಯುವಜನರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಈ ಮೂಲಕ ಅವರು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ರಾಷ್ಟ್ರದ ಹಿತ ಮತ್ತು ಏಳಿಗೆಗಾಗಿ ಬಳಸುತ್ತಾರೆ ಎಂದರು.

ತಂತ್ರಜಾನ ಮೂಲಕವೇ ಪರಿಹಾರ ಕಂಡುಕೊಳ್ಳಲು ಸಂಘಟಿತ ಕೆಲಸ ಅವಶ್ಯ: ನ್ಯಾ.ಇನವಳ್ಳಿ

ಸವಾಲುಗಳನ್ನು ಎದುರಿಸಿ ತಂತ್ರಜಾನ ಮೂಲಕವೇ ಪರಿಹಾರ ಕಂಡುಕೊಳ್ಳಲು ಕಾನೂನು ಕ್ಷೇತ್ರದ ತಜ್ಞರು ಮತ್ತು ತಂತ್ರಜ್ಞರು ಸಹಯೋಗದಲ್ಲಿ ಕೆಲಸ ಮಾಡುವುದು ಅವಶ್ಯಕತೆ ಇದೆ ಎಂದು ಜಿಲ್ಲೆಯ ಮುಖ್ಯ ಮತ್ತು ಸೆಷನ್ಸ್‌ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಹೇಳಿದರು.ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಬುಧವಾರ ನಡೆದ 36 ತಾಸುಗಳ ಹ್ಯಾಕಥಾನ್ ಸ್ಪರ್ಧೆಗೆ ಚಾಲನೆ ನೀಡಿದ ಅವರು, ಈ ದೆಶೆಯಲ್ಲಿ ಈ ರೀತಿಯ ಸ್ಪರ್ಧೆಗಳು ಸುಲಭ ಪರಿಹಾರಗಳ ಜತೆಗೆ ತಾಂತ್ರಿಕ ಪರಿಕರಗಳನ್ನು ಕಂಡುಕೊಳ್ಳಬಹುದು ಎಂದು ತಂತ್ರಜ್ಞಾನವು ಕಾನೂನಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಕಾನೂನು ಕ್ಷೇತ್ರಗಳ ಮೇಲೆ ಸವಾಲುಗಳು ಸಹ ಹೆಚ್ಚುತ್ತಿವೆ ಎಂಬುವುದರ ಕುರಿತು ವಿವರಿಸಿದರು. ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 7ನೇ ಆವೃತ್ತಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್) 2024 ಫೈನಲ್ ನಡೆಸಲು ವಿಟಿಯು ನೋಡಲ್ ಕೇಂದ್ರವಾಗಿ ಆಯ್ಕೆಯಾಗಿದ್ದು ಒಂದು ಐತಿಹಾಸಿಕ ಕ್ಷಣ. ಇದಕ್ಕೆ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಈ) ನವ ದೆಹಲಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಈ ದಿಶೆಯಲ್ಲಿ ವಿಟಿಯು ಇವತ್ತಿನ ಅವಶ್ಯಕ ವಿಷಯಗಳಾದ ಆಟೊಮೇಷನ್, ಡ್ರೋನ್ ತಂತ್ರಜ್ಞಾನ, ವಿಎಲ್‌ಎಸ್‌ಐ ವಿನ್ಯಾಸ, ಎಐ ಮತ್ತು ಐಒಟಿ ಉತ್ಕೃಷ್ಟತಾ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ಪ್ರತಿಷ್ಠಿತ ಏನ್ವಿಡಿಯಾ, ಸ್ಯಾಂಸಂಗ್, ಸ್ನಾಯಡರ್, ಕಂಪನಿಗಳ ಸಹಯೋಗದಲ್ಲಿ ಹೆಚ್ಚಿನ ಅಧ್ಯಯನ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ನೋಡಲ್ ಕೇಂದ್ರದ ಮುಖ್ಯಸ್ಥ ಆನಂದ ಕುಲಕರ್ಣಿ, ನೋಡಲ್ ಕೇಂದ್ರದ ಪ್ರಭಾರಿ ಪ್ರೊ.ಎಸ್.ಎ.ಅಂಗಡಿ ಉಪಸ್ಥಿತರಿದ್ದರು.ಇವತ್ತಿನ ಹ್ಯಾಕಥಾನ್ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ, ಬದಲು ನಮ್ಮ ರಾಷ್ಟ್ರದ ಇತಿಹಾಸ, ಪರಂಪರೆ ಸಂಸ್ಕೃತಿಯನ್ನು ಸಹ ಒಳಗೊಂಡಿದೆ. ಈ ಹ್ಯಾಕಥಾನ್ ಕೇವಲ 2 ಅಥವಾ 5 ದಿನಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಇದು ಪ್ರತಿದಿನದ ಪ್ರಕ್ರಿಯೆಯಾಗಿದ್ದು, ನಮ್ಮ ದೈನಂದಿನ ಬದುಕಿನ ಭಾಗವಾಗಿದೆ.

-ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವರು.

ಹ್ಯಾಕಥಾನ್‌ ನಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೋತ್ಸಾಹಿಸುವ ವಿಟಿಯುನ ಉದ್ದೇಶಕ್ಕೆ ಮತ್ತಷ್ಟು ಬಲ ತುಂಬಿದೆ. ಇದು ಖಂಡಿತವಾಗಿಯೂ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತದೆ. ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಕೃತಿ ಉತ್ತೇಜಿಸಲು ವಿಟಿಯು ಬದ್ಧವಾಗಿದೆ. ವಿಟಿಯು ಕ್ಯಾಂಪಸ್‌ಗಳಲ್ಲಿ ಮಾತ್ರವಲ್ಲದೇ ಎಲ್ಲ ಸಂಯೋಜಿತ ಕಾಲೇಜುಗಳಲ್ಲಿಯು ಸಹ ಈ ಕೌಶಲ್ಯ, ಸಂಶೋಧನಾ ಮತ್ತು ನಾವಿನ್ಯತಾ ಅವಲಂಬಿತ ಕಲಿಕಾ ವಿಧಾನವನ್ನು ತರಲಾಗುತ್ತಿದೆ.

-ಪ್ರೊ.ವಿದ್ಯಾಶಂಕರ.ಎಸ್‌, ವಿಟಿಯು ಕುಲಪತಿ.