ಉಪಚುನಾವಣೆ: ವಿಘ್ನೇಶ್ವರನ ಮೊರೆಹೋದ ರಾಜಕಾರಣಿಗಳು!

| Published : Aug 23 2024, 01:06 AM IST

ಸಾರಾಂಶ

ಇನ್ನು ಗಣೇಶ ಮೂರ್ತಿಗಳ ವಿತರಣೆಯ ಹಿಂದೆ ಯುವಕರ ಸಂಘಟನೆಯ ಉದ್ದೇಶವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಯುವಕರನ್ನು ಸೆಳೆಯುವ ತಂತ್ರಗಾರಿಕೆ ಹಣೆಯಲಾಗಿದೆ. ಗಣೇಶ ವಿಗ್ರಹ ಪಡೆಯಲು ಬರುವ ಯುವಕರ ಮಾಹಿತಿ ಸಂಗ್ರಹಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಗಣೇಶ ಮೂರ್ತಿ ಪಡೆಯಲು ಹೆಸರು ನೋಂದಾಯಿಸಲು ಬರುವವರು ಕನಿಷ್ಠ ೧೦ ಜನರ ತಂಡದೊಂದಿಗೆ ಬರಬೇಕು, ಕಡ್ಡಾಯವಾಗಿ ಒಂದಿಬ್ಬರದಾದರೂ ಆಧಾರ್ ಕಾರ್ಡ್‌ಗಳನ್ನು ನೀಡಬೇಕು ಎಂಬ ಷರತ್ತನ್ನು ವಿಧಿಸಲಾಗಿದ್ದು, ಇದರ ಹಿಂದೆ ಯುವ ಪಡೆಯನ್ನು ಸೆಳೆಯುವ ಉದ್ದೇಶವಿರುವುದು ನಿಚ್ಚಳವಾಗಿದೆ.

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಗಣೇಶನ ಚತುರ್ಥಿ ಮತ್ತೆ ಮಹತ್ವ ಪಡೆದುಕೊಂಡಿದ್ದು, ಗಣೇಶನ ಹಬ್ಬದ ಮೇಲೆ ರಾಜಕೀಯ ಛಾಯೆ ಆವರಿಸಿದೆ. ಚುನಾವಣೆಗಾಗಿ ವಿಘ್ನೇಶ್ವರನ ಮೊರೆ ಹೋಗಿರುವ ರಾಜಕಾರಣಿಗಳು ಗಣೇಶನ ಮೂರ್ತಿ ವಿತರಣೆಗೆ ಸಜ್ಜಾಗಿದ್ದಾರೆ.

ಮುಂದಿನ ತಿಂಗಳು ೭ರಂದು ಗಣೇಶನ ಚತುರ್ಥಿ ಇದ್ದು, ಅದಕ್ಕಾಗಿ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಯುವಜನರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದು, ಈ ಹೊತ್ತಿನಲ್ಲೇ ಗಣೇಶ ಮೂರ್ತಿ ವಿತರಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿವೆ.

ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ಗಣೇಶಮೂರ್ತಿ ವಿತರಣೆಯ ಮೂಲಕ ಜನರನ್ನು ಸೆಳೆಯುವ ತಂತ್ರಗಾರಿಕೆ ನಡೆಸಿದ್ದಾರೆ. ಒಂದು ಕಡೆ ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿಗೆ ಮೂರ್ತಿಗಳನ್ನು ವಿತರಿಸಲು ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ತಯಾರಿ ನಡೆಸಿದ್ದರೆ, ಮಗದೊಂದು ಕಡೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮತ್ತೊಂದು ಬಾರಿ ಗಣೇಶನ ಮೂರ್ತಿಗಳನ್ನು ವಿತರಿಸಲು ಮುಂದಾಗಿದ್ದಾರೆ.

ಸಿಪಿವೈರಿಂದ ೧೦೦೦ ಮೂರ್ತಿ ವಿತರಣೆ:

ಈ ಬಾರಿಯ ಗಣೇಶನ ಚತುರ್ಥಿಗೆ ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ೧ಸಾವಿರ ಗಣೇಶನ ಮೂರ್ತಿಗಳನ್ನು ವಿತರಿಸಲು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಜ್ಜಾಗಿದ್ದಾರೆ. ೨೦೨೨ರಲ್ಲಿ ಒಮ್ಮೆ ಹಬ್ಬದ ವೇಳೆ ಗಣೇಶನ ಮೂರ್ತಿಗಳನ್ನು ವಿತರಿಸಿದ್ದ ಯೋಗೇಶ್ವರ್ ೨೦೨೩ರಲ್ಲಿ ಸುಮ್ಮನಾಗಿದ್ದರು. ಇದೀಗ ಉಪಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಗಣೇಶನ ಮೂರ್ತಿಗಳನ್ನು ವಿತರಿಸಲು ಸಜ್ಜಾಗಿದ್ದಾರೆ.

೭೦೦ ಮೂರ್ತಿ ವಿತರಣೆಗೆ ಜಯಮುತ್ತು ಸಜ್ಜು:

ಈ ಬಾರಿಯೂ ಸಹ ಗಣೇಶ ಚತುರ್ಥಿ ವೇಳೆ ಗಣೇಶನ ಮೂರ್ತಿಗಳನ್ನು ವಿತರಿಸಲು ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು ತಯಾರಿ ನಡೆಸಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು ೭೦೦ ಗಣೇಶನ ಮೂರ್ತಿಗಳನ್ನು ವಿತರಿಸುತ್ತಿದ್ದು, ಬೇಡಿಕೆಯಿದ್ದಲ್ಲಿ ಇನ್ನೂ ಹೆಚ್ಚಿನ ಮೂರ್ತಿಗಳನ್ನು ವಿತರಿಸಲು ಸಿದ್ಧತೆ ನಡೆಸಿದ್ದಾರೆ.

ಗಣೇಶನ ಮೂರ್ತಿ ವಿತರಣೆ ಕುರಿತು ಈಗಾಗಲೇ ಎರಡೂ ಪಕ್ಷಗಳವರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಹರಿಯಬಿಟ್ಟಿದ್ದು, ಯಾವ ಭಾಗದವರು ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಗಣೇಶಮೂರ್ತಿ ವಿತರಣೆಯ ಹಿಂದೆ ಸಂಘಟನೆ ಉದ್ದೇಶ:

ಇನ್ನು ಗಣೇಶ ಮೂರ್ತಿಗಳ ವಿತರಣೆಯ ಹಿಂದೆ ಯುವಕರ ಸಂಘಟನೆಯ ಉದ್ದೇಶವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಯುವಕರನ್ನು ಸೆಳೆಯುವ ತಂತ್ರಗಾರಿಕೆ ಹಣೆಯಲಾಗಿದೆ. ಗಣೇಶ ವಿಗ್ರಹ ಪಡೆಯಲು ಬರುವ ಯುವಕರ ಮಾಹಿತಿ ಸಂಗ್ರಹಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಗಣೇಶ ಮೂರ್ತಿ ಪಡೆಯಲು ಹೆಸರು ನೋಂದಾಯಿಸಲು ಬರುವವರು ಕನಿಷ್ಠ ೧೦ ಜನರ ತಂಡದೊಂದಿಗೆ ಬರಬೇಕು, ಕಡ್ಡಾಯವಾಗಿ ಒಂದಿಬ್ಬರದಾದರೂ ಆಧಾರ್ ಕಾರ್ಡ್‌ಗಳನ್ನು ನೀಡಬೇಕು ಎಂಬ ಷರತ್ತನ್ನು ವಿಧಿಸಲಾಗಿದ್ದು, ಇದರ ಹಿಂದೆ ಯುವ ಪಡೆಯನ್ನು ಸೆಳೆಯುವ ಉದ್ದೇಶವಿರುವುದು ನಿಚ್ಚಳವಾಗಿದೆ.

‘ನೀರಾವರಿ ಯೋಜನೆಯಿಂದಾಗಿ ತಾಲೂಕಿನ ಕೆರೆಗಳು ತುಂಬಿದ್ದು, ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಯುವಕರಲ್ಲಿ ಸ್ಫೂರ್ತಿ ಮೂಡಿಸುತ್ತವೆ. ಈ ಹಿನ್ನೆಲೆಯಲ್ಲಿ ಯುವಕರಲ್ಲಿ ಉತ್ಸಾಹ ಹೆಚ್ಚಿಸುವ ಉದ್ದೇಶದಿಂದ ಈ ಬಾರಿ ಗಣೇಶನ ಮೂರ್ತಿಗಳನ್ನು ವಿತರಿಸಲಾಗುತ್ತಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ.’

-ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ‘ನಮ್ಮ ತಾಯಿಯ ಹೆಸರಿನಲ್ಲಿರುವ ಚನ್ನಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ೨೦೦೯ರಿಂದ ಗಣೇಶನ ಮೂರ್ತಿಗಳನ್ನು ವಿತರಿಸುದ್ದೇನೆ. ಕೋವಿಡ್ ನಿಬಂಧನೆಗಳ ಕಾರಣದಿಂದ ಎರಡು ವರ್ಷ ಗಣೇಶನ ಮೂರ್ತಿಗಳನ್ನು ವಿತರಿಸಲಾಗಿರಲಿಲ್ಲ. ಗಣೇಶನ ಮೂರ್ತಿಗಳ ವಿತರಣೆ ಕಾರ್ಯವನ್ನು ನಾನೇನು ಹೊಸದಾಗಿ ಮಾಡುತ್ತಿಲ್ಲ. ಪ್ರತಿವರ್ಷ ಬೇಡಿಕೆ ಬಂದಷ್ಟು ಗಣೇಶನ ಮೂರ್ತಿಗಳನ್ನು ವಿತರಿಸುತ್ತಿದ್ದು, ಈ ವರ್ಷವೂ ವಿತರಿಸಲಾಗುವುದು.’

-ಎಚ್.ಸಿ.ಜಯಮುತ್ತು, ಜೆಡಿಎಸ್ ತಾಲೂಕು ಅಧ್ಯಕ್ಷ