ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದಲ್ಲಿ 150 ಕೋಟಿ ರುಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲಿಂಗ್ ವ್ಯವಸ್ಥೆ ಮಾಡುವುದಕ್ಕೆ ಇಲಾಖಾ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಬಾಶೆಟ್ಟಿಹಳ್ಳಿ ವಿಭಾಗದಲ್ಲಿ ಮೊದಲಿಗೆ ಈ ಕಾರ್ಯ ನಡೆಯಲಿದೆ. ಬಳಿಕ ನಗರದಲ್ಲೂ ವ್ಯವಸ್ಥೆ ಜಾರಿಗೆ ಬರುವ ವಿಶ್ವಾಸವಿದೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.ನಗರ ಭಾಗದ ಬೆಸ್ಕಾಂ ಕಚೇರಿ ಮುಂಭಾಗ ಆಯೋಜಿಸಿದ್ದ ಬೆಸ್ಕಾಂ ಗ್ರಾಹಕರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರ ರೀತಿಯೇ ನಗರದಲ್ಲಿ ವಿದ್ಯುತ್ ಮಗ್ಗಗಳ ನೇಕಾರರು ಸಹ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ತಾಲೂಕಿನ ರೈತರು ಪುಷ್ಪೋತ್ಯಮ ಮತ್ತು ಅಡಿಕೆ ಬೆಳೆಯುತ್ತಿದ್ದು, ಪಂಪ್‌ಸೆಟ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ತಾಲೂಕಿನಲ್ಲಿ 10140 ಡಿಸಿಗಳಿದ್ದು, 32 ಡಿಸಿಗಳನ್ನು ಉನ್ನತೀಕರಿಸಲಾಗಿದೆ ಎಂದರು.
ನಗರದಲ್ಲಿ ನೇಕಾರಿಕೆ ಉದ್ಯಮ ಪ್ರಮುಖವಾಗಿದ್ದು. ವಿದ್ಯುತ್ ವ್ಯತ್ಯಯ ಮತ್ತು ವೋಲ್ಟೇಜ್ ಸಮಸ್ಯೆಯಿಂದ ನೇಕಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರ ಗತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅವಶ್ಯಕ ಸಹಕಾರ ಕಲ್ಪಿಸುವ ಮೂಲಕ ತಾಲೂಕಿನ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳು ಎಫ್ 15 ಲೈನ್ ನಿಂದ ಎಫ್ 10ಗೆ ಬದಲಿಸುವಂತೆ ಮನವಿ ಮಾಡಿದರು. ಶ್ರೀ ರಾಮನಹಳ್ಳಿ ಗ್ರಾಮದಲ್ಲಿ 13 ಬೋರ್ ವೇಲ್ ಗೆ ಒಂದೇ ಟ್ರಾನ್ಸ್‌ಫಾರ್ಮರ್ ಇದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ರವಿಕುಮಾರ್ ಮನವಿ ಮಾಡಿದರು. ನಗರದ ಶಾಂತಿನಗರದಲ್ಲಿ ಸದಾ ಸಿಂಗಲ್ ಫೇಸ್ ಸಮಸ್ಯೆ ಎದುರಾಗುತ್ತಿದ್ದು, ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ನಿವಾಸಿಗಳು ಮನವಿ ಮಾಡಿದರು.
ಟ್ರಾನ್ಸ್‌ಫಾರ್ಮರ್‌ಗಳಿಂದ ಅಗತ್ಯಕ್ಕಿಂತ ಹೆಚ್ಚು ಸಂಪರ್ಕ ನೀಡುತ್ತಿರುವ ಕಾರಣ ವೋಲ್ಟೇಜ್ ಸಮಸ್ಯೆಯಾಗುತ್ತಿದ್ದು, ಈ ಸಮಸ್ಯೆಯಿಂದಾಗಿ ನೇಕಾರಿಗೆ ಉದ್ಯಮ ಸಂಪೂರ್ಣ ನೆಲಕಚ್ಚುತ್ತಿದೆ. ನೂತನ ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಕೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.ಸಭೆಯಲ್ಲಿ ನಗರಸಭಾ ಸದಸ್ಯರಾದ ಪದ್ಮನಾಬ್ , ಹಂಸಪ್ರಿಯ, ಬಂತಿ ವೆಂಕಟೇಶ್ , ನಾಗರತ್ನಮ್ಮ ಕೃಷ್ಣಮೂರ್ತಿ ಸೇರಿದಂತೆ ಬೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು.