ಸಾರಾಂಶ
ಗದಗ: ನಾನು ನೀಡುವ ಔಷಧ ಖೊಟ್ಟಿ (ಫೇಕ್), ನಾನು ಹಣ ಸುಲಿಗೆ ಮಾಡುತ್ತೇನೆ ಎಂಬೆಲ್ಲ ಗೊಂದಲ ಸೃಷ್ಟಿಸಬೇಡಿ, ನಾನು ಔಷಧಿ ಕೊಡುವುದನ್ನೇ ಬೇಕಾದರೆ ನಿಲ್ಲಿಸುತ್ತೇನೆ. ಆದರೆ ಯಾರಿಗೂ ಮೋಸ ಮಾಡುವುದಿಲ್ಲ, ಕೇವಲ ಬಾಯಿ ಪ್ರಚಾರ ಹಾಗೂ ಗುಣಮುಖರಾದವರ ಅನಿಸಿಕೆಗಳಿಂದಲೇ ಸಾವಿರಾರು ಜನರು ಆಗಮಿಸಿ ವಿವಿಧ ರೋಗಗಳಿಗೆ ಔಷಧ ಪಡೆದು ಆರೋಗ್ಯವಂತರಾಗುತ್ತಿದ್ದಾರೆ ಎಂದು ಪಾರಂಪರಿಕ ವೈದ್ಯ, ನರಗುಂದ ತಾಲೂಕಿನ ವಾಸನದ ಡಾ. ಹನಮಂತ ಮಳಲಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರೂವರೆ ದಶಕಗಳಿಂದಲೂ ನಾನು ಪಾರಂಪರಿಕ ವೈದ್ಯ ಪರಿಷತ್‌ನ ಅನುಮತಿ ಹಾಗೂ ಪ್ರಮಾಣ ಪತ್ರ ಪಡೆದು ಹಲವು ಕಾಯಿಲೆಗಳಿಗೆ ಔಷಧಿ ನೀಡುತ್ತಿದ್ದೇನೆ. ಆದರೆ, ಕಳೆದ ಕೆಲ ತಿಂಗಳಿಂದ ಕೆಲವರು ಅಪಪ್ರಚಾರ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.ಬೇರೆ, ಬೇರೆ ಜಿಲ್ಲೆ, ತಾಲೂಕು ಹಾಗೂ ರಾಜ್ಯಗಳಿಂದಲೂ ಜನರು ಬರುತ್ತಿದ್ದಾರೆ. ಕೆಲವೊಮ್ಮೆ ವಿದೇಶದಿಂದಲೂ ಔ।ಧಿ ಪಡೆಯಲು ಬರುತ್ತಿದ್ದಾರೆ. ಹಲವಾರು ಅಪರಿಚಿತರು, ಗುಣಮುಖರಾದವರ ಅಭಿಪ್ರಾಯ ಕೇಳಿಯೇ ಬರುತ್ತಿದ್ದಾರೆ. ಇದರಲ್ಲಿ ಫೇಕ್, ಮೋಸದ ಪ್ರಶ್ನೆ ಇಲ್ಲ ಎಂದರು.
ನಾನು ಧನ್ವಂತರಿ ವಾರ ಆಗಿರುವ ಪ್ರತಿ ಬುಧವಾರ ಹಲವು ಕಾಯಿಲೆಗಳಿಗೆ ಔಷಧ ನೀಡುತ್ತೇನೆ. ಆರಂಭದಲ್ಲಿ ೪೦-೫೦ಜನ ಬರುತ್ತಿದ್ದು, ನನ್ನ ಬಳಿ ಔಷಧಿ ತೆಗೆದುಕೊಂಡು, ಗುಣಮುಖರಾದವರು ಮಾಡಿದ ಪ್ರಚಾರದ ಪರಿಣಾಮ ಇಂದು ಪ್ರತಿವಾರ ಕನಿಷ್ಠ ಸಾವಿರ ಜನ ಬರುತ್ತಿದ್ದಾರೆ. ಈವರೆಗೆ ಅಂದಾಜು ೬ ಲಕ್ಷ ಜನರಿಗೆ ಔಷಧಿ ನೀಡಿದ್ದೇನೆ. ಅದರಲ್ಲಿ ಪೊಲೀಸ್ ಇಲಾಖೆ, ಅಲೋಪಥಿಕ್ ವೈದ್ಯರು, ನ್ಯಾಯಾಂಗ ಇಲಾಖೆ ಅಷ್ಟೇ ಏಕೆ, ಕೆಲ ಸ್ವಾಮೀಜಿಗಳೂ ಸಹ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಕೆಲವರು ಅನಗತ್ಯವಾಗಿ ತಮಗೆ ತೊಂದರೆ ಕೊಡುವ ಉದ್ದೇಶದಿಂದಲೋ ಅಥವಾ ಯಾವ ಕಾರಣಕ್ಕೋ ಹೀಗೆ ನಮ್ಮ ವಿರುದ್ಧ ಕೇವಲ ಮೂಕರ್ಜಿಗಳನ್ನು ಕಳುಹಿಸಿ, ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಉಚಿತ ಚಿಕಿತ್ಸೆಗೂ ಸಿದ್ಧ: ನಾವು ಹಲವು ಬಡ ರೋಗಿಗಳಿಗೆ ಉಚಿತ ಔಷಧಿ ಕೂಡ ನೀಡಲು ಸಿದ್ಧನಿದ್ದೇನೆ. ನಾನು ಈ ಬಗ್ಗೆ ಪುಸ್ತಕವನ್ನೂ ಬರೆದಿದ್ದು, ಅದರ ಪ್ರಕಾರ ಯಾವ ಕಾಯಿಲೆಗೆ ಏನು ಔಷಧಿ ತೆಗೆದುಕೊಳ್ಳಬೇಕು ಎಂಬುದನ್ನು ಸಹ ಅವರೇ ಮಾಡಿಕೊಳ್ಳಬಹುದು. ಇದರ ಜೊತೆಗೆ ಯಾವ ಕಾಯಿಲೆಗೆ ಔಷಧಿ ಹೇಗೆ ಮಾಡಿಕೊಳ್ಳಬೇಕು, ಅದಕ್ಕೆ ಎಲ್ಲಿ ಕಚ್ಚಾ ವಸ್ತುಗಳು ಸಿಗುತ್ತವೆ ಎಂಬುದರ ಮಾಹಿತಿ ನೀಡಲು ಕೂಡ ಸಿದ್ಧರಿದ್ದೇವೆ ಎಂದು ತಿಳಿಸಿದರು.
ನಾನು ಯಾವುದೇ ವಾಣಿಜ್ಯ ಉದ್ದೇಶದಂದ ಈ ಔಷಧಿ ನೀಡುತ್ತಿಲ್ಲ. ಒಟ್ಟಿನಲ್ಲಿ ದೇಶವು ರೋಗಮುಕ್ತ ಆಗಿ, ಸ್ವಾಸ್ಥ್ಯ ಸಮಾಜ ನಿರ್ಮಾಣವಷ್ಟೇ ಮೂಲ ಉದ್ದೇಶ. ಈ ಹಿಂದೆ ಆಯುಷ್ ಇಲಾಖೆಗೂ ದೂರು ನೀಡಿದ್ದರು. ಅವರೆಲ್ಲರೂ ಬಂದು ತಪಾಸಣೆ ಮಾಡಿದ್ದಾರೆ. ಆಗಲೂ ಅವರಿಗೆ ಔಷಧದ ಬಗ್ಗೆ ನೈಜತೆ ತಿಳಿದು, ಸುಮ್ಮನಾಗಿದ್ದಾರೆ. ಅದರಲ್ಲಿ ಏನಾದರೂ ದೋಷ ಇದ್ದಿದ್ದರೆ ಕ್ರಮ ಕೈಗೊಳ್ಳುತ್ತಿದ್ದರು. ಇನ್ನು ಮುಂದೆ ನಮ್ಮ ಬಳಿ ಚಿಕಿತ್ಸೆ ಪಡೆಯಲು ಆಗಮಿಸುವವರು ಸ್ವ ಇಚ್ಛೆಯ ಚಿಕಿತ್ಸೆ ಪಡೆಯುವ ಬಗ್ಗೆ ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರ ಔಷಧಿ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.ಸವಾಲು ಹಾಕಿದ ವೈದ್ಯ: ಸಾವು ಮತ್ತು ಆರೋಗ್ಯ ಬೇರೆ-ಬೇರೆ. ಅಲೋಪಥಿಕ್ ಔಷಧಿ ತೆಗೆದುಕೊಂಡವರೂ ಗುಣಮುಖರಾಗಿದ್ದಾರೆ. ನಮ್ಮ ಪಾರಂಪರಿಕ ಔಷಧಿಯೂ ಸೇರಿ ಆಯುಷ್ ಔಷಧಿ ಪಡೆದವರೂ ಗುಣಮುಖರಾಗಿದ್ದಾರೆ. ಆದರೆ, ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಬದಲು ನಾನು ಕೊಡುವ ಔಷಧಿಯಲ್ಲಿ ರಾಸಾಯನಿಕ ಮಿಶ್ರಣವಿದ್ದರೆ ತಪಾಸಣೆ ಮಾಡಿಸಲಿ ಎಂದು ಡಾ. ಹನಮಂತ ಮಳಲಿ ಅವರು ಸವಾಲು ಹಾಕಿದರು.