ಮಾಲಿಕ ದೇಗುಲಕ್ಕೆ ಹೋದಾಗ ಬೀಗ ಮುರಿದು ಕಳವು: ಬಂಧನ

| Published : Mar 01 2024, 02:18 AM IST

ಮಾಲಿಕ ದೇಗುಲಕ್ಕೆ ಹೋದಾಗ ಬೀಗ ಮುರಿದು ಕಳವು: ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

3.50 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಕಳ್ಳ ಕಾತರಾಜನನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯೊಂದರ ಬಾಗಿಲ ಬೀಗ ಮುರಿದು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆಯ ಚಂದನ ಬಡಾವಣೆ ನಿವಾಸಿ ಕಾಂತರಾಜು ಅಲಿಯಾಸ್‌ ಮೋರಿ ಕಾಂತ(47) ಬಂಧಿತ. ಆರೋಪಿಯಿಂದ ₹3.50 ಲಕ್ಷ ಮೌಲ್ಯದ 46 ಗ್ರಾಂ ಚಿನ್ನಾಭರಣ ಮತ್ತು ಒಂದು ಕೆ.ಜಿ.ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈತ ಸಹಚರ ಯತೀಶ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಆಂಧ್ರಹಳ್ಳಿ ನಂದಗೋಕುಲ ಲೇಔಟ್‌ ನಿವಾಸಿ ಮಹೇಶ್‌ ಎಂಬುವವರು ಹಬ್ಬದ ಪ್ರಯುಕ್ತ ಮನೆಗೆ ಬೀಗ ಹಾಕಿಕೊಂಡು ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿಕೊಂಡು ವಾಪಾಸ್‌ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಬಂದಿತ್ತು.

ದುಷ್ಕರ್ಮಿಗಳು ಮನೆಯ ಬೀಗ ಮುರಿದು ಒಳ ನುಗ್ಗಿ ಬೆಡ್‌ರೂಮ್‌ನಲ್ಲಿದ್ದ ಎರಡು ಕಬ್ಬಿಣದ ಬೀರುಗಳನ್ನು ಮುರಿದು ₹35 ಸಾವಿರ ನಗದು, 50 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ. ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.ವೃತ್ತಿಪರ ಕಳ್ಳ

ಆರೋಪಿ ಕಾಂತರಾಜ ವೃತ್ತಿಪರ ಕಳ್ಳನಾಗಿದ್ದು, ಈತನ ವಿರುದ್ಧ ಈ ಹಿಂದೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕ ತನ್ನ ಸಹಚರ ಯತೀಶ್‌ ಜತೆ ಸೇರಿಕೊಂಡು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು. ಆರೋಪಿಯ ಬಂಧನದಿಂದ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.