ರಸ್ತೆ ಅಗಲೀಕರಣ: ಬ್ಯಾಡಗಿ ಪುರಸಭೆ ಕಟ್ಟಡ ತೆರವು

| Published : Nov 20 2025, 01:00 AM IST

ಸಾರಾಂಶ

ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ 2 ದಿನಗಳಿಂದ ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಖುದ್ದಾಗಿ ತೆರವು ಕಾರ್ಯಾಚರಣೆಗೆ ಇಳಿದಿದ್ದು, ಪುರಸಭೆಯ 15ಕ್ಕೂ ಹೆಚ್ಚು ಮಳಿಗೆಗಳನ್ನು ತೆರವುಗೊಳಿಸಿದರು.

ಬ್ಯಾಡಗಿ: ಪಟ್ಟಣದ ಜನರ ಬಹುದಿನದ ಟ್ರಾಫಿಕ್ ಸಮಸ್ಯೆ ಸೇರಿದಂತೆ ಒಂದೂವರೆ ದಶಕಗಳ ಹೋರಾಟದ ಮುಖ್ಯರಸ್ತೆ (ಗಜೇಂದ್ರ ಗಡ ಸೊರಬ ರಾಜ್ಯ ಹೆದ್ದಾರಿ-136) ಅಗಲೀಕರಣಕ್ಕೆ ನ್ಯಾಯ ಸಿಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಅಂತೆಯೇ ಕಳೆದ 2 ದಿನಗಳಿಂದ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಖುದ್ದಾಗಿ ತೆರವು ಕಾರ್ಯಾಚರಣೆಗೆ ಇಳಿದಿದ್ದು ಇದಕ್ಕೆ ಪುಷ್ಟಿ ನೀಡುತ್ತಿವೆ.

ಮುಖ್ಯರಸ್ತೆಗೆ ಹೊಂದಿಕೊಂಡು ಪುರಸಭೆಯ 15ಕ್ಕೂ ಹೆಚ್ಚು ಮಳಿಗೆಗಳಿದ್ದು, ಸರ್ಕಾರದ ಅಧಿಸೂಚನೆಯಂತೆ 33 ಅಡಿಗಳಷ್ಟು ಬಿಟ್ಟು ಕಟ್ಟಡವಿರಬೇಕು ಎಂಬ ನಿಯಮಕ್ಕೆ ಬದ್ಧವಾಗಿ ತಮ್ಮ ಕಟ್ಟಡಗಳನ್ನು ತಾವೇ ಖುದ್ದಾಗಿ ತೆರವುಗೊಳಿಸಿಕೊಂಡರು.

ಪುರಸಭೆಯಲ್ಲಿ ನಿರ್ಣಯ: ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಸಹ ಆಗಿದ್ದು, ಪುರಸಭೆ ಆಸ್ತಿಗಳೂ ಸೇರಿದಂತೆ ವಾಸಕ್ಕೆ ಯೋಗ್ಯವಲ್ಲದ ಹಾಗೂ ಶಿಥಿಲಾವಸ್ಥೆ ತಲುಪಿರುವ (ಅನ್‌ಸ್ಟೆಬಿಲಿಟಿ ಬಿಲ್ಡಿಂಗ್ಸ್) 29 ಕಟ್ಟಡಗಳ ತೆರವಿಗೆ ಮುಂದಾಗಿದ್ದಾರೆ.

ಎರಡನೇ ಕಟ್ಟಡ: ಪರಿಹಾರ ಪಡೆದುಕೊಳ್ಳುವ ಮುನ್ನವೇ ಪಟ್ಟಣದ ಗಜಾನನ ಅರ್ಬನ್ ಬ್ಯಾಂಕ್ ತನ್ನ ಒಡೆತನದ ಕಟ್ಟಡವನ್ನು ಸರ್ಕಾರದ ಅಧಿಸೂಚನಯಂತೆ 33 ಅಡಿಗಳಷ್ಟು ಬಿಟ್ಟು ತೆರವುಗೊಳಿಸಿಕೊಂಡಿತ್ತು. ಇದಾದ ಬಳಿಕ ಪುರಸಭೆ ಆಸ್ತಿಗಳು ಸೇರಿದಂತೆ ಇನ್ನುಳಿದ 29 ಕಟ್ಟಡಗಳನ್ನು ಪುರಸಭೆ ತೆರವುಗೊಳಿಸಲು ಮುಂದಾಗಿದೆ.

ಬಾಡಿಗೆದಾರರ ತೆರವು: 2000-01ನೇ ಸಾಲಿನ 10ನೇ ಹಣಕಾಸು ಯೋಜನೆಯಡಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿತ್ತು. ಅಗಲೀಕರಣ ಹಿನ್ನೆಲೆಯಲ್ಲಿ ಬಾಡಿಗೆದಾರರನ್ನು ತೆರವುಗೊಳಿಸಿದ ಪುರಸಭೆ ಇದೀಗ ಕಟ್ಟಡಗಳನ್ನೂ ತೆರವುಗೊಳಿಸುತ್ತಿದೆ.

ಪುರಸಭೆ ತನ್ನ ಕಟ್ಟಡಗಳನ್ನು ತೆರವುಗೊಳಿಸಿಕೊಳ್ಳುತ್ತಿದ್ದಂತೆ ಈ ವಿಷಯ ಇದೀಗ ಪಟ್ಟಣದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹತ್ತು ಹಲವು ಪ್ರತಿಭಟನೆಗಳ ನಡುವೆಯೂ 15 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಅಗಲೀಕರಣಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಾಣದ ಕೈಗಳು ತಡೆಯೊಡ್ಡಿದ್ದವು. ಅಗಲೀಕರಣದ ಪರ ಕೈಜೋಡಿಸಿದ ವರ್ತಕರ ಸಂಘವು ಹೋರಾಟದ ನೇತೃತ್ವ ಪಡೆದುಕೊಂಡ ಬಳಿಕವಂತೂ ಪಟ್ಟಣದ ವಿವಿಧ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿದ ಪರಿಣಾಮ ಬಹುತೇಕ ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ.

ಈ ವೇಳೆ ಪಿಎಸ್‌ಐ ಭಾರತಿ ಕುರಿ, ಪುರಸಭೆ ಎಂಜಿನಿಯರ್ ಸಂಗಮೇಶ ಹೊಸಮನಿ, ಮಾಲತೇಶ ಹಳ್ಳಿ ಉಪಸ್ಥಿತರಿದ್ದರು.ಅಭಿವೃದ್ಧಿಗೆ ಸಹಕರಿಸಿ: ಅಗಲೀಕರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಅಷ್ಟಕ್ಕೂ ಮಾಲೀಕರು ತಮ್ಮ ಕಟ್ಟಡಗಳನ್ನು ಸ್ವಯಂ ತೆರವುಗೊಳಿಸಿಕೊಂಡಲ್ಲಿ ತಕ್ಷಣವೇ ಪರಿಹಾರದ ಮೊತ್ತ ಕೈಸೇರಲಿದೆ. ಕಟ್ಟಡ ತೆರವಾಗುತ್ತಿದ್ದಂತೆ ಅದರ ಜತೆಗೆ ಮುಖ್ಯರಸ್ತೆ ಅಭಿವೃದ್ಧಿ ಕಾರ್ಯವನ್ನೂ ಮಾಡಲಾಗುವುದು. ಕೂಡಲೇ ಕಟ್ಟಡ ತೆರವುಗೊಳಿಸಿಕೊಂಡು ಅಭಿವೃದ್ಧಿಗೆ ಸಹಕರಿಸಿ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.