ಬಯಲಾಟದ ಕಲೆ ಶ್ರಮ ಸಂಸ್ಕೃತಿಯ ಪ್ರತೀಕ: ಪ್ರಕಾಶ್‌ ಗರುಡ

| Published : Oct 25 2024, 12:53 AM IST

ಸಾರಾಂಶ

ಬಯಲಾಟದ ಕಲೆ ಶ್ರಮ ಸಂಸ್ಕೃತಿಯ ಕಲೆಯಾಗಿವೆ. ಮನರಂಜನೆಯ ಜತೆಗೆ ಮನೋವಿಕಾಸ ಹೇಗೆ ಮಾಡಬೇಕೆಂಬ ಕಲ್ಪನೆಯು ಈ ಗೊಂಬೆಯಾಟದಲ್ಲಿದೆ.

ಹಳಿಯಾಳ: ಮನರಂಜನೆಗಾಗಿ ಪುರಾಣ, ಐತಿಹಾಸಿಕ ಕಥನಗಳನ್ನು ಜನರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದ್ದ ಗೊಂಬೆಯಾಟದ ವಿಶಿಷ್ಟ ಕಲೆಗೆ ಆಧುನಿಕ ಸಮಾಜ ಸರಿಯಾದ ಗೌರವ, ಮಾನ್ಯತೆಯನ್ನು ಕೊಡುತ್ತಿಲ್ಲ. ಪಾರಂಪರಾಗತವಾಗಿ ಬಂದಿರುವ ಈ ಕಲೆಯನ್ನು ಮುಖ್ಯವಾಹಿನಿಯಲ್ಲಿ ತೆಗೆದುಕೊಂಡು ಹೋಗುವ ಬಹುದೊಡ್ಡ ಸವಾಲು ನಮ್ಮೆದುರು ನಿಂತಿದೆ ಎಂದು ಧಾರವಾಡದ ರಂಗತಜ್ಞ ಪ್ರಕಾಶ್ ಗರುಡ ತಿಳಿಸಿದರು.

ಗುರುವಾರ ತಾಲೂಕಿನ ಹವಗಿ ಗ್ರಾಮದಲ್ಲಿನ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ಬಯಲಾಟ ಆಕಾಡೆಮಿ ಬಾಗಲಕೋಟೆಯವರು ಆಯೋಜಿಸಿದ ಗೊಂಬೆಯಾಟ ವಿಚಾರಸಂಕಿರಣ ಮತ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಯಲಾಟದ ಕಲೆ ಶ್ರಮ ಸಂಸ್ಕೃತಿಯ ಕಲೆಯಾಗಿವೆ. ಮನರಂಜನೆಯ ಜತೆಗೆ ಮನೋವಿಕಾಸ ಹೇಗೆ ಮಾಡಬೇಕೆಂಬ ಕಲ್ಪನೆಯು ಈ ಗೊಂಬೆಯಾಟದಲ್ಲಿದೆ. ಕರ್ನಾಟಕದ ಗೊಂಬೆಯಾಟದಲ್ಲಿ ಎರಡು ಪ್ರಕಾರಗಳಿದ್ದು, ಒಂದು ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟ. ಈ ಅಪರೂಪದ ಕಲೆಗಳು ಕೆಲವೇ ಕುಟುಂಬಗಳು ಹಾಗೂ ಊರುಗಳಲ್ಲಿ ದೇಶದ ಕೆಲವೇ ಭಾಗಗಳಲ್ಲಿ ಉಳಿಸಿಕೊಂಡಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಈ ಆಧುನಿಕತೆ ಝಳಕ್ಕೆ ಈ ಕಲೆಯು ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ. ಕೆ.ಆರ್. ದುರ್ಗಾದಾಸ ಮಾತನಾಡಿ, ಜಾನಪದ ಕಲೆಯಾಗಿರುವ ಗೊಂಬೆಯಾಟವು ಮೂಲೆಗುಂಪಾಗುವತ್ತ ಸಾಗುತ್ತಿದ್ದು, ಈ ದಿಸೆಯಲ್ಲಿ ರಾಜ್ಯ ಬಯಲಾಟ ಆಕಾಡೆಮಿಯು ಪ್ರಾಚೀನವಾದ ರಂಗಕಲೆಯಾಗಿರುವ ಗೊಂಬೆಯಾಟದ ಮಹತ್ವವನ್ನು ಜನರಿಗೆ ಮನಗಾಣಿಸುವ ದಿಸೆಯಲ್ಲಿ ವಿಶಿಷ್ಟ ಯೋಜನೆಗಳನ್ನು ಕಾರ್ಯಕ್ರಮಗಳನ್ನು ರಾಜ್ಯಾದ್ಯತ ಹಮ್ಮಿಕೊಳ್ಳುತ್ತಿದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸಂಗೀತಾ ಕಟ್ಟಿಮನಿ ಮಾತನಾಡಿ, ಸಾಂಪ್ರದಾಯಿಕ ಕಲೆಯಾದ, ಜನಪದ ಶ್ರೀಮಂತಿಕೆಯ ಈ ಗೊಂಬೆಯಾಟದ ಕಲೆಯನ್ನು ಉಳಿಸಬೇಕಿದೆ. ಇಂದಿನ ಪೀಳಿಗೆಗೆ ಕಾಲೇಜಿನ ಯುವ ಪೀಳಿಗೆಗೆ ಈ ಗೊಂಬೆಯಾಟದ ಕಲೆಯ ಕಲಿಕಾ ಶಿಬಿರಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಗೆ ಇದನ್ನು ಉಳಿಸಬೇಕು ಎಂದರು. ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಬಯಲಾಟ ಆಕಾಡೆಮಿಯ ಸದಸ್ಯೆ ಸುಜಾತಾ ಬಿರಾದಾರ, ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಗೌಡ, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೈ.ಐ ಚವ್ಹಾಣ, ವಾಣಿಜ್ಯ ಶಾಸ್ತ್ರ ವಿಭಾಗದ ಡಾ. ಪರಮಾನಂದ ದಾಸರ, ಡಾ. ಮಾನಪ್ಪ ಕೃಷ್ಣ ಹೊನಕಾಂಬಳೆ, ಡಾ. ಗೀತಾ ಬೆಣಚೆಕರ ಇದ್ದರು.ಉಪನ್ಯಾಸ: ಕಾರ್ಯಕ್ರಮದಲ್ಲಿ ಬಯಲಾಟ ಆಕಾಡೆಮಿಯ ರಜಿಸ್ಟ್ರಾರ್ ಕರ್ಣಕುಮಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧಕ ಡಾ. ಟಿ. ಗೋವಿಂದರಾಜು ಅವರು ಗೊಂಬೆಯಾಟದ ಕಲಾವಿದರ ಪರಿಸ್ಥಿತಿ ವಿಷಯದಲ್ಲಿ ಹಾಗೂ ಕಲಾವಿದ ಸಿದ್ದಪ್ಪ ಬಿರಾದಾರ ಅವರು ಗೊಂಬೆಯಾಟ ಬೆಳೆದು ಬಂದ ಬಗೆಯ ಬಗ್ಗೆ ಉಪನ್ಯಾಸ ನೀಡಿದರು.ಪ್ರದರ್ಶನ: ಮಧ್ಯಾಹ್ನ ಬಳ್ಳಾರಿಯ ಶ್ರೀ ಹುಲಿಕುಂಟೆರಾಯ ತೊಗಲು ಗೊಂಬೆ ಕಲಾತಂಡದಿಂದ ಪಂಚವಟಿ ಪ್ರಸಂಗದ ಪ್ರದರ್ಶನ ನಡೆಯಿತು. ಸಂಜೆ ವಿಜಯನಗರ ಜಿಲ್ಲೆಯ ಹರಪನಳ್ಳಿ ತಾಲೂಕಿನ ಶ್ರೀ ಮಾರುತಿ ಸೂತ್ರದ ಗೊಂಬೆ ತಂಡ ಹಲುವಾಗಲು ಅವರಿಂದ ವೀರ ಅಭಿಮನ್ಯು ಪ್ರದರ್ಶನ ನಡೆಯಿತು.