ಸಾರಾಂಶ
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಈಗ ಹಾವೇರಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸುತ್ತಿದ್ದಂತೆ ತೆರವಾಗುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯೂ ಪಕ್ಕಾ ಆದಂತಾಗಿದೆ. ಸತತ ನಾಲ್ಕು ಚುನಾವಣೆಯಲ್ಲಿ ಶಿಗ್ಗಾಂವಿ ಪ್ರತಿನಿಧಿಸಿದ್ದ ಬೊಮ್ಮಾಯಿ ಬಳಿಕ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಈಗ ಹಾವೇರಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸುತ್ತಿದ್ದಂತೆ ತೆರವಾಗುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯೂ ಪಕ್ಕಾ ಆದಂತಾಗಿದೆ. ಸತತ ನಾಲ್ಕು ಚುನಾವಣೆಯಲ್ಲಿ ಶಿಗ್ಗಾಂವಿ ಪ್ರತಿನಿಧಿಸಿದ್ದ ಬೊಮ್ಮಾಯಿ ಬಳಿಕ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಹುಟ್ಟುಹಾಕಿದೆ.
2008ರಿಂದ 2023ರವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯಿಂದ ಗೆದ್ದು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ- ಸವಣೂರು ಕ್ಷೇತ್ರ ರಾಜಕೀಯವಾಗಿ ಎಲ್ಲವನ್ನೂ ನೀಡಿದೆ. ಶಾಸಕರಾಗಿ, ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶ ಅವರಿಗೆ ಸಿಕ್ಕಿದೆ. ಆದರೆ, ಸದ್ಯ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುವ ಮೂಲಕ ಸಂಸತ್ ಪ್ರವೇಶಿಸಿದ್ದು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಉತ್ತರಾಧಿಕಾರಿಯಾಗಿ ಯಾರಾಗ್ತಾರೆ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಿರುವ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮಾಜದ ಅಭ್ಯರ್ಥಿಗಳ ವಿರುದ್ಧವೇ ಬಸವರಾಜ ಬೊಮ್ಮಾಯಿ ಅವರು ನಿರಾಯಾಸವಾಗಿ ಗೆಲುವು ಸಾಧಿಸುತ್ತ ಬಂದಿದ್ದರು. ಬೊಮ್ಮಾಯಿ ಅವರು ಸಂಸತ್ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಭದ್ರಕೋಟೆ ಆಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಪಕ್ಕಾ ಆಗಿದ್ದು, ಮುಂದಿನ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ.ಕಾಂಗ್ರೆಸ್‌ನಲ್ಲೂ ಗರಿಗೆದರಿದ ರಾಜಕೀಯ: ಶಿಗ್ಗಾಂವಿ ಕ್ಷೇತ್ರಕ್ಕೆ ಬೈ ಎಲೆಕ್ಷನ್ ಪಕ್ಕಾ ಆಗುತ್ತಿದ್ದಂತೆ ಆ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚರ್ಚೆ ಶುರುವಾಗಿದೆ. 6 ತಿಂಗಳೊಳಗಾಗಿ ಚುನಾವಣೆ ನಡೆಯಬೇಕಿರುವುದರಿಂದ ಆಕಾಂಕ್ಷಿಗಳಲ್ಲಿ ಮತ್ತೆ ಅಭ್ಯರ್ಥಿಯಾಗುವ ಆಸೆ ಚಿಗುರೊಡೆದಿದೆ. ಮುಂದಿನ ದಿನಗಳಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಜೋರಾಗುವ ಸಾಧ್ಯತೆಯಿದೆ.