ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೋಳಂಬಳ್ಳಿಯ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಯ ಸಾನಿಧ್ಯದಲ್ಲಿ ಬಾಹುಬಲಿಯ 27 ಅಡಿ ಎತ್ತರದ ಏಕಶಿಲಾ ವಿಗ್ರಹ ನಿರ್ಮಿಸಲಾಗಿದ್ದು, ಅದರ ಲೋಕಾರ್ಪಣೆ ಕಾರ್ಯಕ್ರಮ 4ರಿಂದ 9ರವರೆಗೆ ವೈಭವದಿಂದ ನಡೆಯಲಿದೆ.ಈ ಬಗ್ಗೆ ದೇವಸ್ಥಾನದ ಟ್ರಸ್ಟಿ ಡಾ.ಆಕಾಶ್‌ರಾಜ್ ಜೈನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ 21 ಅಡಿ ಎತ್ತರದ ಸಿದ್ದಕೇವಲಿ ಭಗವಾನ್ ಶ್ರೀರಾಮಚಂದ್ರ ದೇವರ ಏಕಶಿಲಾ ಮೂರ್ತಿಯನ್ನೂ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.
ಈ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಶ್ರೀ ಆದಿನಾಥ ಸ್ವಾಮಿ ಪಂಚಕಲ್ಯಾಣ ಮತ್ತು ನೂತನ ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಪೂರ್ವಕ ಮಹಾಮಸ್ತಕಾಭಿಷೇಕ, ವಾರ್ಷಿಕ ರಥೋತ್ಸವ, ಶ್ರೀ ರಾಮಚಂದ್ರ ದೇವರ ಪ್ರತಿಷ್ಠಾಪನಾ ಪೂಜಾ ಮಹೋತ್ಸವಗಳು ನಡೆಯಲಿವೆ ಎಂದರು.ಈ 5 ದಿನಗಳು ಪ್ರತಿದಿನ ಸಂಜೆ 4 ಗಂಟೆಯಿಂದ ನಡೆಯಲಿರುವ ಧಾರ್ಮಿಕ ಕಾರ್ಯಕ್ರಗಳು ಮಹರಾಷ್ಟ್ರದ ಗುಲಾಬ್‌ಭೂಷಣ್ ಮುನಿಮಹಾರಾಜರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾಕರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಬಾಹುಬಲಿ ಮತ್ತು ರಾಮಚಂದ್ರ ದೇವರ ಮೂರ್ತಿಯನ್ನು 9ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಡೆ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು. ಪ್ರತಿದಿನ ಕ್ರಮವಾಗಿ ಸೋಂದಾದ ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಕಾರ್ಕಳ ದಾನಶಾಲ ಜೈನಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾಕರ ಪಟ್ಟಾಚಾರ್ಯವರ್ಯ ಸ್ವಾಮೀಜಿ, ನರಸಿಂಹರಾಜಪುರದ ಶ್ರೀ ಸಿಂಹನಗದ್ದೆ ಬಸ್ತಿಮಠದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾಕರ ಭಟ್ಟಾಚಾರ್ಯವರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಜಶೇಖರ್ ಹೆಬ್ಬಾರ್, ಪದ್ಮಪ್ರಸಾದ್ ಜೈನ್ ನೆಲ್ಲಿಕಾರ್, ರಾಜೇಶ್ ಜೈನ್ ಕೊಕ್ಕರ್ಣೆ, ನರಸಿಂಹ ಪೂಜಾರಿ ಉಪಸ್ಥಿತರಿದ್ದರು.