ಉಡುಪಿ: ಉಡುಪಿ ಯಕ್ಷಗಾನ ಕಲಾ ರಂಗದ ವಿದ್ಯಾಪೋಷಕ್‌ ಯೋಜನೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ 99.36 ಅಂಕ ಪಡೆದ ಮಾನ್ಯ ಎಂ. (ಪದ್ಮಾವತಿ-ದಿ. ಮಹಾಬಲ ಮರಕಾಲ ದಂಪತಿ ಪುತ್ರಿ) ಅವರಿಗೆ ಬೈಂದೂರು ತಾಲೂಕಿನ ಪಡುವರಿಯಲ್ಲಿ, ತನ್ನ ಮಾತಾಪಿತೃಗಳಾದ ಸತ್ಯಭಾಮ ಮತ್ತು ವೆಂಕಟನರಸಿಂಹ ಉಪಾಧ್ಯಾಯ ಅವರ ಸ್ಮರಣೆಯಲ್ಲಿ ಅವರ ಪುತ್ರ, ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಕಾರ್ಕಳ ಕಲ್ಮಠದ ದೇವಾನಂದ ಉಪಾಧ್ಯಾಯ ಮತ್ತು ಪತ್ನಿ ನಮಿತಾ ಉಪಾಧ್ಯಾಯರ ಪ್ರಾಯೋಜಕತ್ವದಲ್ಲಿ ಪುನರ್‌ ನವೀಕರಣಗೊಂಡ ಮನೆ ‘ಭಾನು’ ಭಾನುವಾರ ಉದ್ಘಾಟನೆಗೊಂಡಿತು.ಜ್ಯೋತಿ ಬೆಳಗಿಸಿದ ದೇವಾನಂದರು, ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕಾದುದು ಕರ್ತವ್ಯ. ಆಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ನನಗೆ ಉಪಕಾರ ಮಾಡಿದ್ದೇನೆಂಬ ಭ್ರಮೆಯಿಲ್ಲ. ಯಕ್ಷಗಾನ ಕಲಾರಂಗ ಮಾಡುವ ಒಳ್ಳೆಯ ಕೆಲಸಕ್ಕೆ ಸಹಕರಿಸಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂದೀಪನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂಜೀತ್ ಪ್ರಕಾಶ್ ರಾವ್ ಮಾತನಾಡಿ, ಒಂದು ಸಂಸ್ಥೆ ಸಾಮಾಜಿಕ-ಸಾಂಸ್ಕೃತಿಕ ಕಳಕಳಿಯಿಂದ ಏನೆಲ್ಲ ಒಳ್ಳೆಯ ಕೆಲಸ ಮಾಡಬಹುದು ಎಂಬುದಕ್ಕೆ ಯಕ್ಷಗಾನ ಕಲಾರಂಗ ಅತ್ಯುತ್ತಮ ಉದಾಹರಣೆ ಎಂದರು.

ಸಾಂದೀಪನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ, ಅಭ್ಯಾಗತರಾದ ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ನಾಯ್ಕ್, ನ್ಯಾಯವಾದಿ ದೇವರಾಜ ಶೆಟ್ಟಿಗಾರ್ ಆಗಮಿಸಿದ್ದರು.

ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯಾಯ, ಹಿರಿಯಣ್ಣ ಕಿದಿಯೂರು, ಪ್ರಭಾಕರ ಬಂಡಿ, ಪ್ರಸನ್ನ ಹೆಗಡೆ, ಕೊಲ್ಲೂರು ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಾಗರಾಜ ಭಟ್ ಭಾಗವಹಿಸಿದ್ದರು.

ಮಾನ್ಯಳ ಅಪೇಕ್ಷೆಯಂತೆ ಅವಳ ನೆಚ್ಚಿನ ಶಿಕ್ಷಕಿ ಕವಿತಾ ಅವರ ಜನ್ಮದಿನ ಆಚರಿಸಲಾಯಿತು. ಕಲಾ ರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.