ಬೈಂದೂರು ಶಾಸಕರಿಂದ ಮಳೆಹಾನಿ ಪ್ರದೇಶ ಭೇಟಿ

| Published : Jul 09 2024, 12:50 AM IST

ಬೈಂದೂರು ಶಾಸಕರಿಂದ ಮಳೆಹಾನಿ ಪ್ರದೇಶ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬೈಂದೂರು ತಾಲೂಕಿನ ವಿವಿಧ ಮಳೆಹಾನಿ ಪ್ರದೇಶಕ್ಕೆ ಶಾಸಕ ಗುರುರಾಜ್‌ ಗಮಟಿಹೊಳೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬೈಂದೂರು

ಬೈಂದೂರು ತಾಲೂಕಿನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದು, ಕಳೆದ ಮೂರು ದಿನಗಳಿಂದ ಶಾಸಕ ಗುರುರಾಜ್ ಗಂಟಿಹೊಳೆ ಅವರು ನೆರೆಪೀಡಿತ ಅನೇಕ ಭಾಗಗಳಿಗೆ ತೆರಳಿ ಪರಿಶೀಲಿಸಿದರು.

ಈ ಸಂದರ್ಭ ಶಂಕರನಾರಾಯಣ ಗ್ರಾಮದ ನಮಾವಿನಕೊಡ್ಲು ಎಂಬಲ್ಲಿ ಗಾಳಿಮಳೆಗೆ ಅಡಕೆ ತೋಟವನ್ನೇ ಕಳೆದುಕೊಂಡ ಹಿರಿಯ ರೈತರೊಬ್ಬರು ನೋವಿನಿಂದ ಕಣ್ಣೀರು ಹಾಕಿದ್ದು, ಶಾಸಕರು ಅವರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದರು.

ಕಳೆದ ನಾಲ್ಕೈದು ದಿನಗಳ ಮಳೆಯಿಂದ ಬೈಂದೂರು ತಾಲೂಕಿಗೆ ಹಲವು ರೀತಿಯಲ್ಲಿ ಸಮಸ್ಯೆಯಾಗಿದೆ. ಅನೇಕರ ಮನೆಗೆ ನೀರು ನುಗ್ಗಿದೆ, ಕೃಶಿ - ತೋಟಗಳಿಗೆ ಹಾನಿಯಾಗಿದೆ, ರಸ್ತೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಶಾಸಕರು ತಮ್ಮೆಲ್ಲ ಪೂರ್ವನಿಗದಿತ ಖಾಸಗಿ ಸಭೆ/ಕಾರ್ಯಕ್ರಮಗಳನ್ನು ಬದಿಗೊತ್ತಿ ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.

ರಸ್ತೆಯನ್ನೇ ಕಾಣದ ಹಾಗೂ ಇದುವರೆಗೂ ಯಾವ ಶಾಸಕರು ಕಾಲು ಹಾಕದ ತಲ್ಲೂರು ಗ್ರಾಮದ ಕೋಟೆ ಬಾಗಿಲು, ಬೈಲ್‌ಮನೆ ಪ್ರದೇಶದಲ್ಲಿ ಮಳೆಯಿಂದಾದ ಸಮಸ್ಯೆಯನ್ನು ಶಾಸಕರು ಸ್ವತಃ ಅನುಭವಕ್ಕೆ ತಂದುಕೊಂಡರು. ಜನರು ತಮ್ಮ ಸಮಸ್ಯೆಗಳನ್ನು ಮನ ಬಿಚ್ಚಿ ಶಾಸಕರಲ್ಲಿ ತೋಡಿಕೊಂಡಿದ್ದಾರೆ.

ವಂಡ್ಸೆ ಗ್ರಾಮದ ಕೊಳ್ಕೆಗದ್ದೆಯ ಅನೇಕ ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಶಾಸಕರು ಅಲ್ಲಿಗೆ ಭೇಟಿ ನೀಡಿ, ಸ್ಥಳಕ್ಕೆ ತಹಸೀಲ್ದಾರ್ ಅವರನ್ನು ಕರೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಶಾಶ್ವತ ಪರಿಹಾರ ಒದಗಿಸಲು ಸೂಚಿಸಿದರು.

ಶಾಸಕರೊಂದಿಗೆ ಪ್ರಮುಖರಾದ ವಂಡ್ಸೆ ದೀಪಕ್ ಶೆಟ್ಟಿ, ಕರಣ್ ಪೂಜಾರಿ, ಲಕ್ಷ್ಮೀರಾಜ್ ತಲ್ಲೂರು ಹಾಗೂ ಸ್ಥಳೀಯ ಕಾರ್ಯಕರ್ತರು, ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.