ವೀರೇಂದ್ರ ಹೆಗ್ಗಡೆಯರವರು ಕರ್ನಾಟಕದ ರತ್ನ

| Published : Jul 09 2024, 12:50 AM IST

ಸಾರಾಂಶ

ಡಾ. ಡಿ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಇದರ ಯೋಜನೆ ಸಿಗುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಸಂಸದ ಶ್ರೇಯಸ್‌ ಪಟೇಲ್‌ ಬಣ್ಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಡಾ. ಡಿ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಇದರ ಯೋಜನೆ ಸಿಗುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ವೀರೇಂದ್ರ ಹೆಗ್ಗಡೆ ಇವರನ್ನು ಕರ್ನಾಟಕದ ರತ್ನ ಎಂದು ಕರೆಯುತ್ತೇನೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಅವರು ತಿಳಿಸಿದರು.

ನಗರದ ಚನ್ನಪಟ್ಟಣ ವೃತ್ತದ ಬಳಿ ಇರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇವರ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಆಶೀರ್ವಾದದಲ್ಲಿ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಮಟ್ಟದ ಜನಜಾಗೃತಿ ಪದಾಧಿಕಾರಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮದ್ಯಪಾನದಿಂದ ಅದೆಷ್ಟೋ ಕುಟುಂಬಗಳು ಹಾಳಾಗಿದೆ. ಇದನ್ನರಿತ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಅಂತಹವರನ್ನು ತಿದ್ದುವ ಕೆಲಸ ಮಾಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಸದುಪಯೋಗ ಸಿಗುವ ಕೆಲಸ ಮಾಡುತ್ತಿದ್ದು, ಈ ಸಂಘವನ್ನು ಎಷ್ಟು ಹೊಗಳಿದರೂ ಸಾಲದು. ಶ್ರೀ ಧರ್ಮಸ್ಥಳ ಕ್ಷೇತ್ರ ಶ್ರೀ ವೀರೇಂದ್ರ ಹೆಗಡೆಯವರ ಬಗ್ಗೆ ಎಷ್ಟು ಮಾತನಾಡಿದರೂ ಸಾಕಾಗುವುದಿಲ್ಲ. ಅವರ ಮಾರ್ಗದರ್ಶನದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿದೆ. ಇವರು ಕರ್ನಾಟಕಕ್ಕೆ ರತ್ನ ಎಂದು ಕರೆಯಬಹುದು. ಅವರು ಕೂಡ ರಾಜ್ಯಸಭೆ ಸದಸ್ಯರಾಗಿದ್ದು, ಅವರ ಜೊತೆ ಮಾತನಾಡಿದಾಗ ಅವರಲ್ಲಿ ಏನೋ ಒಂದು ರೀತಿಯ ದೈವ ಬಲ ಇದೆ ಎಂಬುದು ಗೋಚರಿಸಿತು. ಈ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಕ್ಕೆ ನಾನು ಸಂಸದನಾಗಿ ನಮ್ಮ ಕಡೆಯಿಂದ ಯಾವಾಗಲು ಸಹಕಾರ ಇದ್ದೆ ಇರುತ್ತದೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ ಮಾತನಾಡಿ, ಒಳ್ಳೆ ಉದ್ದೇಶವನ್ನಿಟ್ಟುಕೊಂಡು ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಮಾಜದಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಕುಡಿತಕ್ಕೆ ಬಲಿಯಾಗಿ ಇಡೀ ಕುಟುಂಬವೇ ಸಮಸ್ಯೆಗೆ ಸಿಲುಕುತ್ತಿರುವುದನ್ನು ಮನಗಂಡ ಪೂಜ್ಯರು ಅನೇಕ ಶಿಬಿರವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಮಾಡಿ ಇಂದು ಉತ್ತಮ ಬದುಕು ಕಟ್ಟಿಕೊಳ್ಳಲು ಪೂಜ್ಯರು ದಾರಿದೀಪವಾಗಿದ್ದಾರೆ ಎಂದರು. ಸಣ್ಣ ಪ್ರಮಾಣದಲ್ಲಿ ಶುರುವಾದ ಹೋರಾಟ ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದು ಇದೆ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಮೂ. ಕೊರವಿ, ಜಿಲ್ಲಾಧ್ಯಕ್ಷ ಡಾ. ನವೀನ್ ಚಂದ್ರ ಶೆಟ್ಟಿ, ಮೈಸೂರು ವಿಭಾಗದ ನಿರ್ದೇಶಕ ಬಿ. ಜಯರಾಂ ನೆಲ್ಲಿತ್ತಾಯ, ವಿವೇಕ್ ವಿ. ಪಾಯಸ್, ಮೈಸೂರು ಜಿಲ್ಲೆಯ ಅಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಚನ್ನರಾಯಪಟ್ಟಣದ ಅಧ್ಯಕ್ಷ ಕೆ.ಎಂ. ಜಯರಾಂ, ಮಂಡ್ಯ ಜಿಲ್ಲಾಧ್ಯಕ್ಷ ಹನುಮಂತಯ್ಯ ಕೊಣನೂರು, ಚಾಮರಾಜನಗರ ಜಿಲ್ಲೆ ಎಂ.ಎಸ್. ರವಿಶಂಕರ್, ರಾಮನಗರ ಜಿಲ್ಲೆ ಅಧ್ಯಕ್ಷ ಎಚ್.ಎಸ್. ಹರೀಶ್,ಕೆ.ಆರ್. ನಗರ ಅಧ್ಯಕ್ಷ ಎಚ್.ಎಸ್. ಸೋಮಶೇಖರ್ ಉಪಸ್ಥಿತರಿದ್ದರು.