ಬೊಮ್ಮಾಯಿ ಪರ ಸಿ.ಸಿ.ಪಾಟೀಲ ಭರ್ಜರಿ ಪ್ರಚಾರ

| Published : May 04 2024, 12:39 AM IST

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಸಣ್ಣ ಪುಟ್ಟ ಗೊಂದಲಗಳಿಂದ ಸಾಕಷ್ಟು ಕಾರ್ಯಕರ್ತರು ಸುಮ್ಮನ್ನೇ ಕುಳಿತಿದ್ದರು. ಅವರನ್ನೆಲ್ಲ ಗುರುತಿಸಿ, ಅವರ ಮನೆಗೆ ಭೇಟಿ ನೀಡಿ ಸಕ್ರೀಯಗೊಳಿಸಿದ್ದಾರೆ

ಗದಗ: ಹಾವೇರಿ-ಗದಗ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ್‌ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಟಿಕೆಟ್ ಘೋಷಣೆಯಾದ ದಿನದಿಂದಲೇ ಕಾರ್ಯಕರ್ತರಲ್ಲಿ ಸಮನ್ವಯತೆ, ಸಣ್ಣ ಪುಟ್ಟ ಗೊಂದಲಗಳಿಂದ ದೂರವಾಗಿದ್ದ ಎಲ್ಲರನ್ನು ಮತ್ತೆ ಒಗ್ಗೂಡಿಸಿ ಹೋರಾಟಕ್ಕೆ ಅಣಿಗೊಳಿಸಿ ಅವರೆಲ್ಲರ ಬೆನ್ನಿಗೆ ನಿಂತು ಬೊಮ್ಮಾಯಿ ಗೆಲುವಿಗಾಗಿ ಪಣ ತೊಟ್ಟು ಶ್ರಮಿಸುತ್ತಿದ್ದಾರೆ.

ಜಿಲ್ಲೆಯಲ್ಲಿನ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು ಗದಗ-ಹಾವೇರಿ ಲೋಕಸಭಾ ವ್ಯಾಪ್ತಿಗೆ ಒಳಪಟ್ಟಿದ್ದರೆ, ಸಿ.ಸಿ.ಪಾಟೀಲ ಪ್ರತಿನಿಧಿಸುವ ನರಗುಂದ ಕ್ಷೇತ್ರ ಬಾಗಲಕೋಟೆ ಲೋಕಸಭಾ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಸಿ.ಸಿ. ಪಾಟೀಲರು ಇತ್ತ ಬೊಮ್ಮಾಯಿ ಗೆಲುವಿಗೆ ಶ್ರಮಿಸುತ್ತಿದ್ದರೆ, ಅವರ ಪುತ್ರ .... ಅತ್ತ ಬಾಗಲಕೋಟೆ ಕ್ಷೇತ್ರದಲ್ಲಿ ಗದ್ದಿಗೌಡ್ರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಬಲಿಷ್ಠ ಕಾರ್ಯಕರ್ತರ ಪಡೆ: ಜಿಲ್ಲೆಯ ಗದಗ ಮತ್ತು ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿಗೆ ಬಹಳಷ್ಟು ಬಲಿಷ್ಠ ಕಾರ್ಯಕರ್ತರ ಪಡೆ ಇದೆ, ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಸಣ್ಣ ಪುಟ್ಟ ಗೊಂದಲಗಳಿಂದ ಸಾಕಷ್ಟು ಕಾರ್ಯಕರ್ತರು ಸುಮ್ಮನ್ನೇ ಕುಳಿತಿದ್ದರು. ಅವರನ್ನೆಲ್ಲ ಗುರುತಿಸಿ, ಅವರ ಮನೆಗೆ ಭೇಟಿ ನೀಡಿ ಸಕ್ರೀಯಗೊಳಿಸಿದ್ದಾರೆ. ಇನ್ನು ಕೆಲವರಂತೂ ಪಕ್ಷ ತೊರೆದಿದ್ದರು, ಅವರನ್ನೆಲ್ಲ ಮರಳಿ ಬಿಜೆಪಿಗೆ ಕರೆ ತಂದು ಬೊಮ್ಮಾಯಿ ಚುನಾವಣೆ ಮಾಡುವಂತೆ ಪ್ರೇರೇಪಿಸಿ, ಹೊಸ ಹುಮ್ಮಸ್ಸು ಮೂಡಿಸಿದ್ದು, ಎಲ್ಲರೂ ಉತ್ಯುತ್ಸಾಹದಲ್ಲಿದ್ದಾರೆ.

ಗದಗ ವಿಧಾನಸಭಾ ವ್ಯಾಪ್ತಿಯ 30 ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಟಿಕೆಟ್ ಘೋಷಣೆಯಾದ ದಿನದಿಂದಲೇ ಸಿ.ಸಿ.ಪಾಟೀಲ ಬಿರುಸಿನ ಪ್ರಚಾರ ಪ್ರಾರಂಭಿಸಿದ್ದಾರೆ. ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗದೇ ಅವರ ವಿರುದ್ಧ ಬಹಿರಂಗವಾಗಿಯೇ ನಿಂದಿಸುವ ಪ್ರಯತ್ನ ಮಾಡಿದರು. ಅದಕ್ಕೆಲ್ಲ ಗಮನ ನೀಡದೇ ಅವರು ಮಾತ್ರ ಸಂಘಟನೆ ಮಾಡಿದ್ದಲ್ಲದೇ, ಪಕ್ಷದಿಂದ ದೂರವಾಗಿದ್ದವರನ್ನೆಲ್ಲ ಸಂಪರ್ಕಿಸಿ, ಇದು ದೇಶದ ಭದ್ರತೆಯ ಚುನಾವಣೆ ಎಂದು ತಿಳಿಸಿ ಮನವೊಲಿಸಿ ಅವರನ್ನೆಲ್ಲ ಮನೆಯಿಂದ ಆಚೆ ಕರೆತಂದು ಚುನಾವಣಾ ಪ್ರಚಾರಕ್ಕೆ ಅಣಿಗೊಳಿಸಿದ್ದಾರೆ. ಇನ್ನು ಅತೀ ಹೆಚ್ಚು ಮತದಾರರನ್ನು ಹೊಂದಿರುವ ಗದಗ -ಬೆಟಗೇರಿ ಅವಳಿ ನಗರದಲ್ಲಿ ಎಲ್ಲ ನಾಯಕರು ಮೊದಲ ಹಂತದ ಚುನಾವಣೆ ಪ್ರಚಾರದಲ್ಲಿದ್ದ ವೇಳೆಯಲ್ಲಿ ಎಲ್ಲ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿ, ಚರ್ಚಿಸಿ ಬಿಜೆಪಿ ಬೆಂಬಲಿಸುವಂತೆ ವಿನಂತಿಸಿದ್ದಾರೆ.

ಶಿರಹಟ್ಟಿ ಮುನಿಸು ಶಮನ: ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿಯೂ ಕೂಡಾ ಬಿಜೆಪಿಯಿಂದ ದೂರವಾವರನ್ನು ಗುರುತಿಸಿ ವಾಪಸ್‌ ಕರೆತಂದಿದ್ದಾರೆ. ಹಾಲಿ ಶಾಸಕರು, ಪಕ್ಷ ನಿಷ್ಠರು, ಮುನಿಸಿಗೊಂಡರನ್ನೆಲ್ಲ ಒಂದೆಡೆ ಗುಡ್ಡೆ ಹಾಕಿ, ಸಾಕಷ್ಟು ವಿರೋಧ ವ್ಯಕ್ತವಾದರೂ ಒಗ್ಗೂಡಿಸಿದ್ದಾರೆ.

ಬೊಮ್ಮಾಯಿ ಗೆಲುವಿಗಾಗಿ ನಾವೆಲ್ಲ ಶ್ರಮಿಸುವುದು ಅನಿವಾರ್ಯ ಎನ್ನುವುದನ್ನು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಅಲ್ಲಿಯೂ ಕೂಡಾ ಒಗ್ಗಟ್ಟು ಮೂಡಿದೆ ಎನ್ನುವುದು ಆ ಭಾಗದ ಕಾರ್ಯಕರ್ತರ ಅಂಬೋಣವಾಗಿದೆ.

ಹಲವಾರು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದು, ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆಗಳ ಆಧಾರದಲ್ಲಿ ಯೋಜನೆ ನೀಡಿದ್ದೇನೆ, ಆ ಒಂದು ವಿಶ್ವಾಸವಿಟ್ಟುಕೊಂಡು ಒಂದೆಡೆ ಬಸವರಾಜ ಬೊಮ್ಮಾಯಿ ಇನ್ನೊಂದೆಡೆ ಪಿ.ಸಿ. ಗದ್ದಿಗೌಡ್ರ ಗೆಲುವಿಗಾಗಿ ಅವಿರತವಾಗಿ ಶ್ರಮಿಸಿದ್ದೇನೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಬೇಕು, ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಬೇಕು, ದೇಶ ಸುಭದ್ರವಾಗಿರಬೇಕು ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು.