ಸಿ.ಸಿ.ಪಾಟೀಲರೇ ಸಮಾಜಕ್ಕೆ ನಿಮ್ಮ ಕೊಡುಗೆ ಏನು?

| Published : Apr 14 2025, 01:20 AM IST

ಸಿ.ಸಿ.ಪಾಟೀಲರೇ ಸಮಾಜಕ್ಕೆ ನಿಮ್ಮ ಕೊಡುಗೆ ಏನು?
Share this Article
  • FB
  • TW
  • Linkdin
  • Email

ಸಾರಾಂಶ

ಕಾಶಪ್ಪನವರ ಕುಟುಂಬ ರಾಜ್ಯದ ಪಂಚಮಸಾಲಿ ಸಮಾಜದ ಅಭಿವೃದ್ಧಿಗಾಗಿ ಹಾಗೂ ಸಮಾಜಕ್ಕೆ ೨ಎ ಒದಗಿಸಲು ಹೋರಾಡುತ್ತಿದೆ

ಕನ್ನಡಪ್ರಭ ವಾರ್ತೆ ಇಳಕಲ್ಲ

ಮಾಜಿ ಸಚಿವ ಸಿ.ಸಿ.ಪಾಟೀಲರಿಗೆ ಯಾವುದೇ ಸಾಮಾನ್ಯ ಜ್ಞಾನವಿಲ್ಲ ಎಂದು ನನಗೆ ಅನಿಸುತ್ತಿದೆ. ಕಾರಣ ಹಿರಿಯರಾದ ಅವರು ಇಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಸಿ.ಸಿ.ಪಾಟೀಲರು ಪಂಚಮಸಾಲಿ ಸಮಾಜಕ್ಕೆ ಕೊಡುಗೆ ಏನು ಎಂದು ಕೇಳಿದ್ದಾರೆ. ಅವರಿಗೆ ಏನು ಗೊತ್ತಿದೆ ಕಾಶಪ್ಪನವರ ಕುಟುಂಬ ರಾಜ್ಯದ ಪಂಚಮಸಾಲಿ ಸಮಾಜದ ಅಭಿವೃದ್ಧಿಗಾಗಿ ಹಾಗೂ ಸಮಾಜಕ್ಕೆ ೨ಎ ಒದಗಿಸಲು ಹೋರಾಡುತ್ತಿದೆ ಎಂಬುದು. ೨೦೦೮ರಲ್ಲಿ ಸಿ.ಸಿ.ಪಾಟೀಲರು ಎಲ್ಲಿದ್ದರೋ, ಅಂದು ನಮ್ಮ ತಂದೆಯವರು ಹಾಗೂ ರಾಜ್ಯದಲ್ಲಿರುವ ಪಂಚಮಸಾಲಿ ಸಮಾಜದ ಹಿರಿಯರು ಕೂಡಿ ಪಂಚಮಸಾಲಿ ಸಮಾಜ ಕಟ್ಟಿ ಬೆಳೆಸಿದ್ದೇವೆ. ಆವಾಗ ಸಿ.ಸಿ.ಪಾಟೀಲರು ಪಂಚಮಸಾಲಿ ಸಮಾಜದವರೆಂದು ಗುರುತಿಸಿಕೊಂಡು ಆಯ್ಕೆಯಾದವರು. ಅವರು ಸಚಿವರಾದಾಗ ನಮ್ಮ ಪಂಚಮಸಾಲಿ ಸಮಾಜಕ್ಕೆ ಏನು ಕೊಟ್ಟಿದ್ದಾರೆ ಎಂದು ಮೊದಲು ತಿಳಿಸಲಿ ಎಂದು ಪ್ರಶ್ನಿಸಿದರು.

ಸಿ.ಸಿ.ಪಾಟೀಲರು ಕೂಡ ನಮ್ಮ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನ ಪಟ್ಟವರಲ್ಲಿ ಒಬ್ಬರು. ಪಂಚಮಸಾಲಿ ಸಮಾಜದ ಬಗ್ಗೆ ಹಾಗೂ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದರೆ ಏನು? ನಾನು ಏನು ಎಂಬುವುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇನೆ. ಮಿಸ್ಟರ್‌ ಸಿ.ಸಿ.ಪಾಟೀಲ ಬೇಕಾದರೆ ನೀನು ನಿನ್ನ ತಾಕತ್ತನ್ನು ತೋರಿಸು ಎಂದು ಏಕವಚನದಲ್ಲಿ ಕಾಶಪ್ಪನವರ ಸವಾಲು ಹಾಕಿದರು.

ಇದೇ ಕೂಡಲಸಂಗಮ ಪೀಠ ಮಾಡುವಾಗ ಏನು ಮಾಡದ ನೀನು, ಇಂದು ಆ ರಾಜಕೀಯ ಮಾಡುವ ಜಯಮೃತ್ಯುಂಜಯ ಶ್ರೀಗಳನ್ನು ಬೆಂಬಲಿಸುವೆಯಾ?. ಈ ಪೀಠ ಮಾಡಿದಾಗ ನಮ್ಮ ಮನೆತನದವರು ಮಠದ ಎಲ್ಲ ಖರ್ಚುಗಳನ್ನು ನಾವೇ ಮಾಡಿದ್ದೇವೆ. ಪೂಜ್ಯರಿಗೆ ಅಡ್ಡಾಡಲು ಕಾರು ಕೊಡುವುದಲ್ಲದೆ ಮಠಕ್ಕೆ ಖರ್ಚು ನಾವೇ ಮಾಡಿದ್ದೇವೆ ಎಂದು ತಿಳಿಸಿದರು.

ಕೂಡಲಸಂಗಮ ಸ್ವಾಮೀಜಿಗಳು ಧರ್ಮ ಪ್ರಚಾರ ಬಿಟ್ಟು, ಬರೀ ರಾಜಕೀಯ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ರಾಜಕೀಯ ಮುಂದುವರಿಸಿಕೊಂಡು ಹೋಗಲಿ ಎಂದು ತಿಳಿಸಿದ ಶಾಸಕರು, ನಮ್ಮ ಸರ್ಕಾರ ಸಂಪೂರ್ಣ ಜಾತಿಗಣತಿ ವರದಿ ಬಂದ ನಂತರ ಅದನ್ನು ಕ್ಯಾಬಿನೆಟ್‌ನಲ್ಲಿ ಇಟ್ಟುಕೊಂಡು ಚರ್ಚೆ ಮಾಡಿ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಈ ವಿಷಯವಾಗಿ ಏ.೨೨ರಂದು ಹುಬ್ಬಳ್ಳಿಯಲ್ಲಿ ನಮ್ಮ ಸಮಾಜದ ಸಭೆ ಮಾಡಲಿದ್ದೇವೆ. ಸಮಾಜ ಬಾಂಧವರು ಯಾರದೇ ಹೇಳಿಕೆಗಳಿಗೆ ಹಾಗೂ ಪತ್ರಿಕಾ ಹೇಳಿಕೆಗಳಿಗೆ ಬೆಲೆ ಕೊಡಬಾರದು. ಸಿ.ಸಿ.ಪಾಟೀಲ, ಬಸನಗೌಡ ಪಾಟೀಲ, ಬೆಲ್ಲದರಂತವರು ಸಮಾಜಕ್ಕೆ ಏನು ಮಾಡಿಲ್ಲ. ಇವರಿಂದ ಸಮಾಜಕ್ಕೆ ಹೆಚ್ಚು ಹಾನಿ ಆಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ಸಂಗಮದ ಜಿ.ಜಿ.ಪಾಟೀಲ, ಗಂಗಣ್ಣ ಪಾಟೀಲ, ಮಹಾಂತಗೌಡ ಪಾಟೀಲ, ರುದ್ರಪ್ಪ ಸಮತಾರ, ಅಮರೇಶ ನಾಗೂರ, ಶೇಖರಪ್ಪ ಬಾದವಾಡಗಿ, ಶಿವಾನಂದ ಕಂಠಿ, ಮಹಾಂತೇಶ ಅವಾರಿ, ಹುಚ್ಚಪ್ಪ ಐಹೋಳ್ಳಿ, ಮುತ್ತಣ್ಣ ಕಲ್ಗುಡಿ, ಬಸನಗೌಡ ಪಾಟೀಲ, ಶಂಕರ ತೋಟದ ಇತರರಿದ್ದರು.