ಸಿ.ಟಿ. ರವಿ ಮಾತು ಸಂವಿಧಾನಕ್ಕೆ ಮಾಡಿರುವ ಅಪಚಾರ: ರವೀಶ್‌

| Published : Dec 21 2024, 01:20 AM IST

ಸಾರಾಂಶ

ಚಿಕ್ಕಮಗಳೂರು, ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಡಿರುವ ಮಾತುಗಳು ಸಂವಿಧಾನಿಕ ನಡವಳಿಕೆಗೆ ಮಾಡಿರುವ ಅಪಚಾರ. ಇಂಥ ನಡವಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಡಿರುವ ಮಾತುಗಳು ಸಂವಿಧಾನಿಕ ನಡವಳಿಕೆಗೆ ಮಾಡಿರುವ ಅಪಚಾರ. ಇಂಥ ನಡವಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಹೇಳಿದ್ದಾರೆ.

ಸಿ.ಟಿ. ರವಿ ಅವರು ಇಂತಹ ಮಾತುಗಳನ್ನು ಅನೇಕ ಬಾರಿ ವಿಧಾನ ಪರಿಷತ್ ಅಧಿವೇಶನ ನಡೆಯುವಾಗ ಉಚ್ಚರಿಸಿರುವ ಉದಾಹರಣೆಗಳು ಇವೆ. ಕಳೆದ ಬಾರಿ ನಿತ್ಯ ಸುಮಂಗಲಿಯರು ಎನ್ನುವ ಅಸಂವಿಧಾನಿಕ ಪದ ಬಳಸಿದ್ದರು. ಇದೀಗ ಒಬ್ಬ ಮಹಿಳಾ ಸಚಿವರ ಬಗ್ಗೆ ಕೆಟ್ಟ ಪದ ಉಪಯೋಗಿಸಿರುವುದು ಕನ್ನಡ ನೆಲದ ಸ್ವಾಭಿಮಾನಿ ಹೆಣ್ಣು ಕುಲಕ್ಕೆ ಮಾಡಿರುವ ಬಹು ದೊಡ್ಡ ಅಪಮಾನ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ಮಾತನಾಡುವಾಗ ಸಂಸ್ಕಾರ, ಸಂಸ್ಕೃತಿ, ಮಾತೆ, ತಾಯಿ ಹೀಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ, ನಿರಂತರವಾಗಿ ಮಹಿಳೆಯರನ್ನು ಅಪಮಾನಿಸುವ ಸಿ.ಟಿ. ರವಿ ಅವರನ್ನು ನೋಡಿದರೆ ಸಂಘ ಪರಿವಾರ ಬಿಜೆಪಿ ನಾಯಕರಿಗೆ ಕಲಿಸಿರುವ ಪಾಠ ಏನು ಎಂಬುದು ಗೊತ್ತಾಗುತ್ತದೆ. ಇಲ್ಲಿವರೆಗೆ ಯಾವೊಬ್ಬ ಬಿಜೆಪಿ ನಾಯಕರು ರವಿ ಅವರ ಮಾತನ್ನು ಖಂಡಿಸದಿರುವುದನ್ನು ನೋಡಿದರೆ ಆ ಪಕ್ಷದ ಸಂಸ್ಕಾರ ಎಂತಹದ್ದು ಎಂಬುದು ತಿಳಿಯುತ್ತದೆ ಎಂದರು.

ಯಡಿಯೂರಪ್ಪ, ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇದೆಲ್ಲವನ್ನು ಗಮನಿಸಿದರೆ ಸಿ.ಟಿ. ರವಿ ವಿವೇಕ ಕಳೆದುಕೊಂಡಿದ್ದಾರೆ ಎನಿಸುತ್ತಿದೆ ಎಂದರು.

ಲೋಕಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಷಾ ಡಾ. ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಭಾರತದ ಸಂವಿಧಾನ, ಬ್ರಾತೃತ್ವಕ್ಕೆ ಮಾಡಿದ ಅಪಚಾರ. ಜೀವನದ ಆಚರಣೆ, ಆಚಾರ, ನಡವಳಿಕೆ ಹಾಗೂ ನೈತಿಕ ಮೌಲ್ಯಗಳಿಂದ ಸ್ವರ್ಗದಂತ ವಾತಾವರಣ ಸೃಷ್ಟಿಸಬಹುದು ಎಂದರು.

ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಅಮಿತ್ ಷಾ ಹಾಗೂ ಮಹಿಳಾ ಸಚಿವರ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದ ಸಿ.ಟಿ. ರವಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಈ ಇಬ್ಬರು ನಾಯಕರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ತನೋಜ್ ಕುಮಾರ್ ನಾಯ್ಡು, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎನ್.ಡಿ.ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ನಟರಾಜ್ ಎಸ್. ಕೊಪ್ಪಲು, ತಾಲೂಕು ಕೆಡಿಪಿ ಸದಸ್ಯ ಸಂತೋಷ್ ಲಕ್ಯಾ, ಪ್ರಮುಖರಾದ ಪಿಳ್ಳೆನಹಳ್ಳಿ ವಿಜಯ್ ಕುಮಾರ್, ರಘು ಉಪಸ್ಥಿತರಿದ್ದರು.