ಸಾರಾಂಶ
ಒಮ್ಮೆ ತಾನು ಮಾತನಾಡಿ ಈಗ ಹಾಗೆ ಹೇಳಿಲ್ಲ ಎಂದು ಸಿ.ಟಿ ರವಿ ಅವರು ಹೇಳುತ್ತಿರುವುದು ಬಿಜೆಪಿಯವರು ಸುಳ್ಳಿನ ಸರದಾರರು ಎಂಬುದನ್ನು ಮತ್ತೆ ಸಾಬೀತು ಮಾಡುತ್ತಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಅವಾಚ್ಯ ಪದ ಬಳಸಿದ್ದು ಖಂಡನೀಯವಾಗಿದ್ದು ಅವರನ್ನು ತಕ್ಷಣವೇ ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ಅಪಾರವಾದ ಗೌರವವಿದ್ದು ಹೆಣ್ಣು ಮಕ್ಕಳಿಗೆ ದೈವೀಸ್ಥಾನ ನೀಡಲಾಗಿದೆ. ಹೀಗಿರುವಾಗ ಸಿ.ಟಿ ರವಿ ಅವರು ಕೆಟ್ಟ ಶಬ್ದ ಬಳಸುವ ಮೂಲಕ ಇಡೀ ಮಾನವ ಕುಲಕ್ಕೆ ಅವಮಾನ ಮಾಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರ ಕುರಿತಾಗಿ ಮಾತನಾಡಿರುವುದು ಕೇವಲ ಸಚಿವರಿಗೆ ಮಾತ್ರವಲ್ಲದೆ ಇಡೀ ಹೆಣ್ಣು ಕುಲಕ್ಕೆ ತೋರಿಸಿದ ಅಗೌರವವಾಗಿದೆ. ಒಮ್ಮೆ ತಾನು ಮಾತನಾಡಿ ಈಗ ಹಾಗೆ ಹೇಳಿಲ್ಲ ಎಂದು ಸಿ.ಟಿ ರವಿ ಅವರು ಹೇಳುತ್ತಿರುವುದು ಬಿಜೆಪಿಯವರು ಸುಳ್ಳಿನ ಸರದಾರರು ಎಂಬುದನ್ನು ಮತ್ತೆ ಸಾಬೀತು ಮಾಡುತ್ತಿದ್ದಾರೆ ಎಂದರು.ಈ ನಡುವೆ ಸಂಸತ್ತಿನ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ ಅಂಬೇಡಕ್ ಬಗ್ಗೆ ಗೃಹಸಚಿವ ಅಮಿತ್ ಶಾ ಹೇಳಿಕೆ ಬಿಜೆಪಿ ಮತ್ತು ಆರ್.ಎಸ್.ಎಸ್.ನ ಮನುವಾದಿ ಚಿಂತನೆಯನ್ನು ಅನಾವರಣಗೊಳಿಸಿದೆ. ಅವರ ಹೇಳಿಕೆಯನ್ನು ದೇಶದ ನಾಗರಿಕರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಂಬೇಡ್ಕರ್ ಈ ದೇಶಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದು, ಅವರ ಬಗ್ಗೆ ಶಾ ಕೊಟ್ಟಿರುವ ಹೇಳಿಕೆಯಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿಲ್ಲ ಎನ್ನುವುದು ಸಾಬೀತಾಗುತ್ತದೆ. ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸಬೇಕು ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.